ಹರಿಯಾಣ ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಕೇಸು ದಾಖಲು | ಸಚಿವ ಸ್ಥಾನಕ್ಕೆ ಸಂದೀಪ್ ಸಿಂಗ್ ರಾಜಿನಾಮೆ!
ದಿನಬೆಳಗಾದರೆ ಸಾಕು ಒಂದಲ್ಲ ಒಂದು ದೌರ್ಜನ್ಯದ ಕೇಸುಗಳು ಕಣ್ಣಿಗೆ ರಾಚುತ್ತವೆ. ಅದರಲ್ಲಂತೂ ಹೆಣ್ಣುಮಕ್ಕಳ ಮೇಲೆ ಆಗುವ ದೌರ್ಜನ್ಯವೇ ಹೆಚ್ಚು. ಸಮಾಜದಲ್ಲಿ ಪ್ರಮುಖ ಸ್ಥಾನದಲ್ಲಿರುವವರೂ ಕೂಡ ಇಂತಹ ಹೀನ ಕೃತ್ಯ ಮಾಡುತ್ತಾರೆಂಬುದು ವಿಪರ್ಯಾಸ. ಇಂತಹದೇ ಒಂದು ಘಟನೆ ಇದೀಗ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಮಹಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹರಿಯಾಣ ಸರ್ಕಾರದ ಕ್ರೀಡಾ ಸಚಿವರ ಮೇಲೆ ಕೇಸ್ ದಾಖಲಾಗಿದ್ದು, ರಿಜಿನಾಮೆ ಕೊಡುವ ಪರಿಸ್ಥಿತಿ ಬಂದೊದಗಿದೆ. ಅಷ್ಟುಕ್ಕೂ ಸಚಿವರು ಮಾಡಿದ್ದೇನು? ಈ ಸ್ಟೋರಿ ನೋಡಿ.
ಹರಿಯಾಣದ ಚಂಡೀಗಢ ಪೊಲೀಸರು ಜ್ಯೂನಿಯರ್ ಅಥ್ಲೆಟಿಕ್ಸ್ ಕೋಚ್ ನೀಡಿದ ದೂರಿನ ಆಧಾರದ ಮೇಲೆ ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಕ್ರೀಡಾ ಸಚಿವ ಸಂದೀಪ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ದೂರು ನೀಡಿರುವ ಯುವತಿ ‘ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಅವರು ಮೊದಲಬಾರಿಗೆ ನನಗೆ ಜಿಮ್‍ವೊಂದರಲ್ಲಿ ಪರಿಚಯವಾಗಿದ್ದರು. ಬಳಿಕ ಇನ್‍ಸ್ಟಾಗ್ರಾಮ್‍ನಲ್ಲಿ ನನ್ನನ್ನು ಸಂಪರ್ಕಿಸಿದ್ದರು. ಭೇಟಿಯಾಗೋಣ ಎಂದು ಪದೇ ಪದೇ ಹೇಳುತ್ತಿದ್ದರು. ಯಾಕೆ ಎಂದು ಕೇಳಿದರೆ ನಿನ್ನ ನ್ಯಾಷನಲ್ ಗೇಮ್ಸ್ ಸರ್ಟಿಫಿಕೇಟ್ ಬರಬೇಕಲ್ವಾ? ಅದನ್ನು ಕೊಡಿಸುವುದಾಗಿ ಹೇಳುತ್ತಿದ್ದರು.
ಕಳೆದ ವರ್ಷ ಫೆಬ್ರವರಿಯಿಂದ ನವೆಂಬರ್‌ವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಅಶ್ಲೀಲ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದರು. ಅಷ್ಟೇ ಅಲ್ಲದೇ ಭೇಟಿಯಾದಾಗ ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಅವರ ನಿರಂತರ ಕಿರುಕುಳದಿಂದಾಗಿ ಸಾಮಾಜಿಕ ಜಾಲತಾಣವನ್ನು ತೊರೆಯಬೇಕಾಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನೊಂದ ಮಹಿಳೆಯು ‘ಮನೋಹರ್ ಲಾಲ್ ಖಟ್ಟರ್ ಸರ್ಕಾರವು ಸಂದೀಪ್ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು’ ಎಂದು ಒತ್ತಾಯಿಸಿ ಇಂಡಿಯನ್ ನ್ಯಾಷನಲ್ ಲೋಕ ದಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಚಂಡೀಗಡ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಸಚಿವರ ವಿರುದ್ಧ ವ್ಯಾಪಕ ಆಕ್ರೋಶ, ಟೀಕೆಗಳು ಬಂದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಮಾತನಾಡಿ ತಮ್ಮ ಹೆಸರನ್ನು ಹಾಳು ಮಾಡುವ ಯತ್ನ ನಡೆಯುತ್ತಿದೆ. ನನ್ನ ವಿರುದ್ಧ ಹೊರಿಸಲಾಗಿರುವ ಸುಳ್ಳು ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಈ ತನಿಖೆಯ ವರದಿ ಬರುವವರೆಗೆ ನನಗೆ ಈ ಸಚಿವ ಸ್ಥಾನ ಬೇಡ. ಕ್ರೀಡಾ ಇಲಾಖೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸುತ್ತೇನೆ ಎಂದು ತಿಳಿಸಿದರು.