ಕನ್ನಡಿಗರ ಆಕ್ರೋಶದ ಹಿನ್ನೆಲೆ!! ಅಮುಲ್ ಜೊತೆ KMF ವಿಲೀನವಿಲ್ಲ-ಬೊಮ್ಮಾಯಿ ಸ್ಪಷ್ಟನೆ

ಮಂಡ್ಯದಲ್ಲಿ ಚುನಾವಣಾ ಪ್ರಚಾರ ಮತ್ತು ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿಯ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಹಾಲು ಒಕ್ಕೂಟದ ‘ನಂದಿನಿ’ ಮತ್ತು ಗುಜರಾತಿನ ಹಾಲು ಒಕ್ಕೂಟವಾದ ‘ಅಮುಲ್’ ಎರಡನ್ನೂ ವಿಲೀನಗೊಳಿಸುವ ಕುರಿತು ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಕನ್ನಡಿಗರು ಹಾಗೂ ವಿರೋಧ ಪಕ್ಷಗಳು ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಎರಡೂ ಸಂಸ್ಥೆಗಳನ್ನು ಯಾವುದೇ ಕಾರಣಕ್ಕೂ ವಿಲೀನ ಮಾಡುವುದಿಲ್ಲ ಎಂದಿದ್ದಾರೆ.

ಕನ್ನಡಿಗರು ಶಾ ಹೇಳಿಕೆ ವಿರುದ್ಧ ಸಿಡಿದೆದ್ದ ಕಾರಣ ಎಚ್ಚೆತ್ತ ಸಿಎಂ ಬೊಮ್ಮಾಯಿ ಮಾತನಾಡಿ ‘ಯಾರಿಗೂ ತಪ್ಪು ಕಲ್ಪನೆ ‌ಬೇಡ. ಮುಂದೆ 100 ವರ್ಷವಾದರೂ ಕೆಎಂಎಫ್‌ ಹಾಗೂ ನಮ್ಮ ನಂದಿನಿ ಬ್ರ್ಯಾಂಡ್ ಹಾಗೆಯೇ ಇರುತ್ತದೆ. ಯಾವುದೇ ಕಾರಣಕ್ಕೂ ನಂದಿಯನ್ನು ಯಾವ ಸಂಸ್ಥೆಗಳೊಂದಿಗೂ ವಿಲೀನಗೊಳಿಸುವುದಿಲ್ಲ’ ಎಂದಿದ್ದಾರೆ.

ಮುಂದೆ ಮಾತನಾಡಿದ ಅವರು ‘ಅಮಿತ್ ಶಾ ಅವರು, ಒಬ್ಬರಿಗೊಬ್ಬರು ತಾಂತ್ರಿಕ ಸಹಾಯದಿಂದ ಕೆಲಸ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಆ ಕುರಿತು ಪ್ರಸ್ತಾಪ ಮಾಡಿದ್ದರು. ಆದರೆ ತಪ್ಪಾಗಿ ಅರ್ಥೈಸುವವರಿಗೆ, ಟೀಕೆ ಮಾಡಲು ಕಾರಣ ಹುಡುಕುವವರಿಗೆ ಏನೂ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಯಾರಿಗೂ ತಪ್ಪು ತಿಳುವಳಿಕೆ, ಗೊಂದಲಗಳು ಬೇಡ ಎಂದು ತಿಳಿಸಿದರು.

Leave A Reply

Your email address will not be published.