ಜೈ ಶ್ರೀರಾಮ್ ಹೇಳಲು ನಿರಾಕರಿಸಿದ ಬಾಲಕನಿಗೆ ಥಳಿತ! ಪೋಲೀಸರ ಅತಿಥಿಯಾದ ಆರೋಪಿ

ದೇಶಾದ್ಯಂತ ಕೋಮು ಸಂಘರ್ಷಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಚಿಕ್ಕ ವಿಷಯಗಳನ್ನು ಕೂಡ ದೊಡ್ಡದಾಗಿಸಿ ವಾತಾವರಣವನ್ನು ಹಾಳುಮಾಡುತ್ತಿದ್ದಾರೆ. ಇದೀಗ ಅಂತಹುದೇ ಘಟನೆಯೊಂದು ಮಧ್ಯಪ್ರದೇಶದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಭೋಪಾಲ್ ನ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ 10 ವರ್ಷದ ಮುಸ್ಲಿಂ ಬಾಲಕನಿಗೆ ಥಳಿಸಿರುವ ಆಘಾತಕಾರಿ ಘಟನೆ ಇದಾಗಿದ್ದು. ಪೊಲೀಸರು ಆರೋಪಿ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

 

ಗುರುವಾರ ಸಂಜೆ ನಡೆದ ಘಟನೆ ಇದಾಗಿದ್ದು ಅಜಯ್ ಭಿಲ್ ಎಂದು ಗುರುತಿಸಲಾದ ಆರೋಪಿ ಖಾಂಡ್ವಾದ ಪಂಧನಾ ಪ್ರದೇಶದಲ್ಲಿ ಬಾಲಕ ನಡೆದು ಹೋಗುತ್ತಿದ್ದ ವೇಳೆ ಬಾಲಕನನ್ನು ತಡೆದು ಜೈ ಶ್ರೀ ರಾಮ್ ಎಂದು ಹೇಳಲು ಒತ್ತಾಯಿಸಿದ್ದಾನೆ. ಆರಂಭದಲ್ಲಿ ಬಾಲಕ ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ್ದಾನೆ. ಇದಕ್ಕೆ ಕೋಪಗೊಂಡ ವ್ಯಕ್ತಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಭಯಭೀತನಾದ ಬಾಲಕ ಘೋಷಣೆ ಕೂಗಿದ್ದು, ಬಳಿಕ ಆರೋಪಿ ಆತನನ್ನು ಹೋಗಲು ಬಿಟ್ಟಿದ್ದಾನೆ.

ಆರೋಪಿಯ ಬಳಿಯಿಂದ ಬಚಾವ್ ಆಗಿ ಬಂದ ಬಾಲಕ ನಡೆದ ಎಲ್ಲಾ ಘಟನೆಯನ್ನು ತನ್ನ ಪೋಷಕರಿಗೆ ತಿಳಿಸಿದ್ದಾನೆ. ಬಾಲಕನ ತಂದೆ ಪಂಧನಾ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಅಜಯ್ ಭಿಲ್ ವಿರುದ್ಧ ಐಪಿಸಿ ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಆಕ್ರೋಶ ಅಥವಾ ಅವಮಾನ) ಹಾಗೂ 323 (ಸ್ವಯಂಪ್ರೇರಿತನಾಗಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

Leave A Reply

Your email address will not be published.