ಹೊಸ ವರ್ಷದ ಹೊಸ್ತಿಲಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಹೊಸ ಸಾರಥ್ಯ! ಇವರೇ ನೋಡಿ ಹೊಸ ವ್ಯವಸ್ಥಾಪಕ ನಿರ್ದೇಶಕರು

ಹೊಸ ವರ್ಷದ ಹೊಸ್ತಿಲಲ್ಲಿ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್ ಗಳ ಸಾರಥ್ಯವನ್ನು ನಾಲ್ವರು ಹೊಸಬರು ವಹಿಸುವ ಸಾಧ್ಯತೆ ದಟ್ಟವಾಗಿದೆ. 2023ರ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಈ ಹೊಸಬರ ನೇಮಕವಾಗುವ ನಿರೀಕ್ಷೆ ಇದೆ. ಯಾವ ಯಾವ ಬ್ಯಾಂಕ್ ಗಳಿಗೆ ಯಾರು ನೇಮಕವಾಗಲಿದ್ದಾರೆ ಎಂಬ ಕುತೂಹಲ ಇದೆಯಾ? ಹಾಗಾದರೆ ಈ ಸ್ಟೋರಿ ಓದಿ.

ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಮತ್ತು ಬ್ಯಾಂಕ್​ ಆಫ್ ಇಂಡಿಯಾದ ಪ್ರಮುಖ ಹೊಣೆಗಾರಿಕೆಯನ್ನು ಹೊಸಬರು ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್​ಬಿಐ ಅಧ್ಯಕ್ಷ ದಿನೇಶ್ ಖರಾ ಅವರ ಅವಧಿ ಅಕ್ಟೋಬರ್ ಆರಂಭದಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಅಕ್ಟೋಬರ್ ಮೊದಲ ವಾರ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಇದಕ್ಕೂ ಮೊದಲು ಅವರು ಎಸ್​ಬಿಐ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸದ್ಯ ನಾಲ್ಕು ವ್ಯವಸ್ಥಾಪಕ ನಿರ್ದೇಶಕರಿದ್ದು, ಅದರಲ್ಲಿ ಸಿಎಸ್ ಶೆಟ್ಟಿ ಹಿರಿಯರಾಗಿದ್ದಾರೆ. ಅವರೇ ಮುಂದೆ ನಿರ್ದೇಶಕರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಪಾರ್ಥ ಪ್ರತಿಮ್ ಸೇನ್​ಗುಪ್ತಾ ಕೂಡ ಇಂದು ಅಂದರೆ ಡಿಸೆಂಬರ್ 31, 2022 ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡದ ಎಂಡಿ ಮತ್ತು ಸಿಇಒ ಸಂಜೀವ್ ಚಡ್ಡಾ ಜನವರಿಯಲ್ಲಿ ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್​ ಆಫ್ ಇಂಡಿಯಾದ ಎಂಡಿ, ಸಿಇಒ ಎಕೆ ದಾಸ್ 2023ರ ಜನವರಿ 20ರಂದು ಸೇವೆಯಿಂದ ನಿವೃತ್ತರಾಗುತ್ತಾರೆ.

ಎಲ್​ಐಸಿ ಅಧ್ಯಕ್ಷ ಎಂಆರ್ ಕುಮಾರ್ ಅವರ ಅವಧಿ 2023ರ ಮಾರ್ಚ್​ಗೆ ಕೊನೆಗೊಳ್ಳಲಿದೆ. ಇವರು 2019ರಲ್ಲಿ ನೇಮಕವಾಗಿದ್ದರು. ಈ ವರ್ಷ ಎಲ್​ಐಸಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒ ಇದ್ದುದರಿಂದ ಅವರ ಅವಧಿಯನ್ನು ವಿಸ್ತರಿಸಲಾಗಿತ್ತು. ಎಲ್​ಐಸಿಯ ಮತ್ತೊಬ್ಬ ಎಂಡಿ ರಾಜ್​ಕುಮಾರ್ ಅವರ ಅವಧಿಯೂ 2023ರಲ್ಲಿ ಕೊನೆಗೊಳ್ಳಲಿದೆ. ಮತ್ತೊಬ್ಬ ಎಂಡಿ ಬಿ.ಸಿ. ಪಟ್ನಾಯಕ್ ಮಾರ್ಚ್ 31ಕ್ಕೆ ನಿವೃತ್ತರಾಗಲಿದ್ದಾರೆ. ಸಿಇಒ ಸೋಮ ಶಂಕರ್ ಪ್ರಸಾದ್​ಗೆ ಮೇ ತಿಂಗಳಲ್ಲಿ 60 ವರ್ಷವಾಗಲಿದೆ. ಹೀಗಾಗಿ ಹೊಸ ಸಿಇಒ ನೇಮಕದ ಅನಿವಾರ್ಯತೆಯೂ ಎದುರಾಗಲಿದೆ.

ಕೆನರಾ ಬ್ಯಾಂಕ್ ಎಂಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಎಲ್​ವಿ ಪ್ರಭಾಕರ್ ಅವರ ಅಧಿಕಾರಾವಧಿ ಇಂದು ಡಿಸೆಂಬರ್ 31, 2022 ಕೊನೆಗೊಳ್ಳುತ್ತಿದೆ. ಇವರ ಸ್ಥಾನಕ್ಕೆ ಹಣಕಾಸು ಸೇವೆಗಳ ಸಾಂಸ್ಥಿಕ ಮಂಡಳಿಯು ಕೆ. ಸತ್ಯನಾರಾಯಣ ರಾಜು ಅವರನ್ನು ಶಿಫಾರಸು ಮಾಡಿದೆ. ಇವರು ಸದ್ಯ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

Leave A Reply

Your email address will not be published.