ಮಂಗಳೂರು : ಕಾರಿನ ಸಹ ಪ್ರಯಾಣಿಕನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ
ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಆದರೆ, ಕಾರಿನ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿರುವ ಪ್ರಕರಣ ಎಲ್ಲಾದರೂ ಕಂಡಿದ್ದೀರಾ??? ಕೇಳುವಾಗ ಹಾಸ್ಯಾಸ್ಪದ ಎನಿಸಿದರೂ ಈ ರೀತಿಯ ಪ್ರಕರಣ ಮಂಗಳೂರು ನಗರದಲ್ಲಿ ನಡೆದಿದೆ.
ಮಂಗಳೂರಿನಲ್ಲಿ ಕಾರಿನಲ್ಲಿ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ದಂಡ ವಿಧಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕುರಿತಾಗಿ ಕಾರು ಚಾಲಕನಿಗೆ ನೋಟಿಸ್ ಬಂದಿದ್ದು, 500 ರೂ. ದಂಡ ಕಟ್ಟುವಂತೆ ಹೇಳಲಾಗಿದೆ.
ನೋಟಿಸ್‌ನಲ್ಲಿ ಉಲ್ಲಂಘನೆ ನಡೆದ ಸ್ಥಳದ ಚಿತ್ರವಿದ್ದು, ಅದರಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಸಹ ಸವಾರ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವುದು ಕಂಡುಬಂದಿದೆ. ಸ್ವಲ್ಪ ದೂರದಲ್ಲಿ ಕಾರು ಕೂಡ ನಿಂತಿದ್ದು, ಮಂಗಳೂರು ನಗರ ಸಂಚಾರ ಪೊಲೀಸ್ ಆಟೋಮೇಶನ್ ಸೆಂಟರ್‌ನಿಂದ ನೋಟಿಸ್ ಕಳುಹಿಸುವ ಸಂದರ್ಭ ದ್ವಿಚಕ್ರ ವಾಹನ ಸವಾರನಿಗೆ ನೋಟಿಸ್ ಕಳುಹಿಸುವ ಬದಲು ಕಾರು ಚಾಲಕನ ವಿಳಾಸಕ್ಕೆ ರವಾನೆ ಮಾಡಿದ್ದಾರಾ?? ಎಂಬ ಅನುಮಾನ ವ್ಯಕ್ತವಾಗಿದೆ.
ನವೆಂಬರ್ 29ರಂದು ಮಂಗಳಾದೇವಿಯಲ್ಲಿ ನಡೆದ ಟ್ರಾಫಿಕ್ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ನೋಟಿಸ್ ಜಾರಿಯಾಗಿದೆ ಎನ್ನಲಾಗಿದ್ದು, ಡಿ. 22ರಂದು ಚಾಲಕನಿಗೆ ಈ ನೋಟಿಸ್ ತಲುಪಿದ್ದು ಉಲ್ಲಂಘನೆ ವಿವರಗಳು ಎನ್ನುವಲ್ಲಿ “ಕಾರು’ ಎಂದು ನಮೂದಿಸಲಾಗಿದೆ. ಉಲ್ಲಂಘನೆ ರೀತಿ ಕಾಲಂನಲ್ಲಿ “ಸಹ ಸವಾರ ಹೆಲ್ಮೆಟ್ ಧರಿಸಿಲ್ಲ’ ಎಂದು ಉಲ್ಲೇಖಿಸಲಾಗಿದೆ. ಒಟ್ಟಾರೆ ಯಾರಿಗೋ ದಂಡ ವಿಧಿಸಿರುವ ಬದಲಿಗೆ ಮತ್ತಾರಿಗೊ ದಂಡ ವಿಧಿಸಿರುವ ಪ್ರಕರಣ ನಡೆದಿದೆ ಎನ್ನಲಾಗುತ್ತಿದೆ.