ಭಾರತೀಯರೇ ಗಮನಿಸಿ, ಈ ದೇಶದಲ್ಲಿ ಇನ್ನು ಮುಂದೆ ವೀಸಾ ಮುಕ್ತ ಪ್ರವೇಶ ಇಲ್ಲ!
ಪ್ರತಿಯೊಂದು ದೇಶವೂ ವಿಭಿನ್ನ ಪಾಸ್ಪೋರ್ಟ್ಗಳನ್ನು ಹೊಂದಿರುತ್ತದೆ. ಅದಲ್ಲದೆ ನಮ್ಮ ಗುರುತನ್ನು ರುಜು ಮಾಡಲು ಕೂಡಾ ಪಾಸ್ಪೋರ್ಟ್ ಅಗತ್ಯವಾಗಿರುತ್ತದೆ. ಇನ್ನು ಹೊಸ ಪಾಸ್ಪೋರ್ಟ್ಗಳನ್ನು ಪಡೆಯಬೇಕಾದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದು ಸೀಮಿತ ನಿಯಮಗಳನ್ನು ಮಾತ್ರ ಒಳಗೊಂಡಿರುತ್ತವೆ. ಆದರೆ ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಮತ್ತು ವಿದೇಶ ಪ್ರಯಾಣದ ನಿಯಮಗಳ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇರುವುದಿಲ್ಲ.
ಈಗಾಗಲೇ ಸೆರ್ಬಿಯಾದಲ್ಲಿ ಈ ಹಿಂದೆ ರಾಜತಾಂತ್ರಿಕ ಮತ್ತು ಅಧಿಕೃತ ಭಾರತೀಯ ಪಾಸ್ಪೋರ್ಟ್ಗಳನ್ನು ಹೊಂದಿರುವವರಿಗೆ 90 ದಿನಗಳವರೆಗೆ ವೀಸಾ ಇಲ್ಲದೆ ದೇಶಕ್ಕೆ ಭೇಟಿ ನೀಡಲು ಅವಕಾಶವಿತ್ತು. ಸಾಮಾನ್ಯ ಪಾಸ್ಪೋರ್ಟ್ ಹೊಂದಿರುವವರಿಗೆ ಈ ಅವಧಿ 30 ದಿನಗಳವರೆಗೆ ಇತ್ತು.
ಆದರೆ ಸದ್ಯ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ಕೊನೆಗೊಳಿಸಲು ಸರ್ಬಿಯಾ ಸರ್ಕಾರ ನಿರ್ಧರಿಸಿದೆ. ಸದ್ಯ ಭಧ್ರತಾ ವ್ಯವಸ್ಥೆಯ ದೃಷ್ಟಿಯಿಂದ ಅದನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸದ್ಯ ಜನವರಿ 1, 2023 ರಿಂದ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಮಾನ್ಯ ವೀಸಾ ಇಲ್ಲದೆ ಸೆರ್ಬಿಯಾಕ್ಕೆ ಪ್ರಯಾಣಿಸುವ ಸೌಲಭ್ಯವನ್ನು ಹೊಂದಿರುವುದಿಲ್ಲ. ಅಕ್ರಮ ವಲಸೆಯನ್ನು ನಿಯಂತ್ರಿಸಲು ಮತ್ತು ಯುರೋಪಿಯನ್ ವೀಸಾ ನೀತಿಯ ಅವಶ್ಯಕತೆಗಳನ್ನು ಅನುಸರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಸರ್ಕಾರವು ಮಾಹಿತಿ ಪ್ರಕಾರ “ಭಾರತೀಯ ಪಾಸ್ಪೋರ್ಟ್ ಹೊಂದಿರುವ ಜನರಿಗೆ ಸೆರ್ಬಿಯಾದಲ್ಲಿ 30 ದಿನಗಳವರೆಗೆ ಇರಲು ವೀಸಾ ಮುಕ್ತ ಪ್ರವೇಶದ ಅಸ್ತಿತ್ವವನ್ನು ಈ ಹಿಂದೆ ನೀಡಲಾಗಿತ್ತು. ಭಧ್ರತಾ ವ್ಯವಸ್ಥೆಯ ದೃಷ್ಟಿಯಿಂದ ಅದನ್ನು ಹಿಂಪಡೆಯಲಾಗಿದೆ” ಎಂದು ತಿಳಿಸಿದೆ.
ಆದರೆ ಮಾನ್ಯತೆ ಪಡೆದಿರುವ ಷೆಂಗೆನ್, ಯುಕೆ ವೀಸಾಗಳು ಅಥವಾ ಯುನೈಟೆಡ್ ಸ್ಟೇಟ್ಸ್ ವೀಸಾಗಳನ್ನು ಹೊಂದಿರುವ ಅಥವಾ ಈ ದೇಶಗಳಲ್ಲಿ ನಿವಾಸಿ ಸ್ಥಾನಮಾನ ಹೊಂದಿರುವ ಭಾರತೀಯರು ಇನ್ನೂ 90 ದಿನಗಳವರೆಗೆ ಸೆರ್ಬಿಯಾವನ್ನು ಪ್ರವೇಶಿಸಬಹುದು ಎಂದು ಸಲಹೆಯಲ್ಲಿ ತಿಳಿಸಲಾಗಿದೆ .
ಮುಖ್ಯವಾಗಿ ವೀಸಾ-ಮುಕ್ತ ಪ್ರವೇಶವನ್ನು ಸೆರ್ಬಿಯಾ ಸೆಪ್ಟೆಂಬರ್ 2017 ರಲ್ಲಿ ಪರಿಚಯಿಸಿತು. ಆದರೆ ಸೆರ್ಬಿಯಾಕ್ಕೆ ಪ್ರಯಾಣಿಸುವ ಭಾರತೀಯರು ವೀಸಾ-ಮುಕ್ತ ಪ್ರವೇಶ ಆಧಾರದ ಮೇಲೆ ಸರ್ಬಿಯಾದ ನೆರೆಯ ದೇಶಗಳು ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಇತರ ದೇಶಗಳಿಗೆ ಪ್ರಯಾಣಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಸೆರ್ಬಿಯಾ ಸರ್ಕಾರದ ಈ ಪ್ರಕಟಣೆಯ ನಂತರ, ರಾಜಧಾನಿ ಬೆಲ್ಗ್ರೇಡ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ವೀಸಾ ನಿಯಮಗಳಲ್ಲಿನ ಬದಲಾವಣೆಯ ಬಗ್ಗೆ ತಿಳಿಸುವ ಸಲಹೆಯನ್ನು ನೀಡಿದೆ.
“ಜನವರಿ 1, 2023 ರಿಂದ, ಸರ್ಬಿಯಾಕ್ಕೆ ಪ್ರಯಾಣಿಸುವ ಎಲ್ಲಾ ಭಾರತೀಯ ಪ್ರಜೆಗಳು ರಿಪಬ್ಲಿಕ್ ಆಫ್ ಸರ್ಬಿಯಾವನ್ನು ಪ್ರವೇಶಿಸಲು ವೀಸಾ ಅಗತ್ಯವಿದೆ. ಹಾಗಾಗಿ ಜನವರಿ 1, 2023 ರಂದು ಅಥವಾ ನಂತರ ಸೆರ್ಬಿಯಾಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಭಾರತೀಯ ನಾಗರಿಕರು, ನವದೆಹಲಿಯಲ್ಲಿರುವ ಸೆರ್ಬಿಯಾದ ರಾಯಭಾರ ಕಚೇರಿಯಲ್ಲಿ ಅಥವಾ ಅವರು ವಾಸಿಸುವ ದೇಶದಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು” ಎಂದು ಮಾಹಿತಿ ತಿಳಿಸಲಾಗಿದೆ.