LPG : ಗ್ಯಾಸ್ ಸಿಲಿಂಡರ್ ಮಿತಿ ಮಾಡಿದ ನಿಯಮ | ಗ್ರಾಹಕರ ಅಳಲು
ಗೃಹ ಬಳಕೆಗೆ ಬಳಸುವಂತಹ ಗ್ಯಾಸ್ ಸಿಲಿಂಡರ್ಗಳನ್ನು ಮಿತಿಯನ್ನು ಇಂತಿಷ್ಟೇ ಎಂಬ ನಿಯಮ ಜಾರಿಗೆ ಬಂದ ನಂತರ ಗ್ರಾಹಕರು ಅತೀವ ಸಂಕಷ್ಟ ಎದುರಿಸುತ್ತಿದ್ದಾರೆ, ಹೌದು, ವಾರ್ಷಿಕ 15ಗ್ಯಾಸ್ ಸಿಲಿಂಡರ್ ಮಾತ್ರ ನೀಡಲಾಗುವುದು ಎಂಬ ನಿಯಮ ಬಂದಿದ್ದೇ ಈ ಮಿತಿ ದಾಟಿರುವವರಿಗೆ ಸಿಲಿಂಡರ್ ಬುಕ್ ಮಾಡಲು ಆಗುತ್ತಿಲ್ಲ. ಈ ಹಿಂದೆ ತಿಂಗಳಿಗೆ ಒಂದರಂತೆ 12 ಗ್ಯಾಸ್ ಸಿಲಿಂಡರ್ ವರ್ಷಕ್ಕೆ ಪಡೆಯುವ ನಿಯಮ ತಂದಾಗ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ಬಂದ ಹಿನ್ನೆಲೆಯಲ್ಲಿ ನಿರ್ದಿಷ್ಟ ಮಿತಿಯನ್ನು ಕೇಂದ್ರ ಸರಕಾರ ತೆರವುಗೊಳಿಸಿತ್ತು.
ಇದೀಗ ಮತ್ತೆ ವರ್ಷಕ್ಕೆ 15 ಸಿಲಿಂಡರ್ಗಳನ್ನು ಮಾತ್ರ ಪಡೆದುಕೊಳ್ಳಬೇಕು ಎಂಬ ನಿಯಮ ಬಂದಿರುವ ಹಿನ್ನೆಲೆಯಲ್ಲಿ 15 ಗ್ಯಾಸ್ ಸಿಲಿಂಡರ್ ಮಿತಿ ದಾಟಿರುವವರಿಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಪೂರೈಕೆಯೂ ಆಗುತ್ತಿಲ್ಲ. ಈ ಮೊದಲು ವಾರ್ಷಿಕ 12 ಗ್ಯಾಸ್ ಸಿಲಿಂಡರ್ ಮಿತಿ ಇತ್ತು. ಅದನ್ನು ಸಡಿಲಗೊಳಿಸಲಾಗಿತ್ತು. ಇತ್ತೀಚೆಗೆ 15 ಗ್ಯಾಸ್ ಸಿಲಿಂಡರ್ ಮಿತಿ ನಿಗದಿ ಮಾಡಲಾಗಿದೆ. ಗೃಹ ಬಳಕೆ ಸಿಲಿಂಡರ್ಗೆ ಈ ಮಿತಿ ಇದೆ. ವಾಣಿಜ್ಯ ಉದ್ದೇಶಕ್ಕೆ ಬಳಸುವ ಗ್ಯಾಸ್ ಸಿಲಿಂಡರ್ಗಳಿಗೆ ಯಾವುದೇ ಮಿತಿ ಇಲ್ಲ ಎಂದು ಸಾರ್ವಜನಿಕವಲಯದಲ್ಲಿ ಕೇಳಿ ಬರುವ ಮಾತು.
ಕೆಲವು ಕುಟುಂಬಗಳಿಗೆ ಎರಡು ತಿಂಗಳಿಗೆ ಒಂದು ಗ್ಯಾಸ್ ಸಿಲಿಂಡರ್ ಬಳಕೆಗೆ ಸಾಕಾದರೆ ಇನ್ನು ಅನೇಕ ಕುಟುಂಬಗಳಿಗೆ ಪ್ರತೀ ತಿಂಗಳಿಗೆ ಎರಡರಿಂದ ಮೂರು ಗ್ಯಾಸ್ ಸಿಲಿಂಡರ್ ಬೇಕಾಗುವ ಅನೇಕ ಸಂದರ್ಭಗಳು ಇದೆ. ವಾರ್ಷಿಕ 12 ಸಿಲಿಂಡರ್ ಮಾತ್ರ ಎಂಬ ಮಿತಿ ಸಡಿಲಗೊಂಡ ಅನಂತರದಲ್ಲಿ ನಾವು ಕುಟುಂಬಕ್ಕೆ ಮಾಸಿಕ ಎಷ್ಟು ಬೇಕು ಅಷ್ಟು ಸಿಲಿಂಡರ್ ಮುಂಗಡ ಕಾದಿರಿಸಿಕೊಳ್ಳುತ್ತಿದ್ದೇವೆ. ಈಗ ಏಕಾಏಕಿ 15 ಸಿಲಿಂಡರ್ ಮಾತ್ರ ನೀಡಲಾಗುವುದು ಎಂಬ ನಿಯಮ ಮಾಡಿದ್ದಾರೆ. ಈಗಾಗಲೇ 15 ಸಿಲಿಂಡರ್ ಈ ವರ್ಷ ಬಳಕೆ ಮಾಡಿದವರೆ ಮುಂದಿನ ಎಪ್ರಿಲ್ ತನಕ ಸಿಲಿಂಡರ್ ನೀಡಲಾಗುವುದಿಲ್ಲ ಎಂದೂ ಹೇಳಲಾಗುತ್ತಿದೆ. ಸರಿಯಾದ ಮಾಹಿತಿ ನೀಡದೆ ಇಂತಹ ನಿರ್ಬಂಧ ಹಾಕುವುದು ಸರಿಯಲ್ಲ. ಇದರಿಂದ ಅನೇಕ ಕುಟುಂಬಕ್ಕೆ ಸಮಸ್ಯೆಯಾಗಲಿದೆ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.