ಪಠಾನ್ ಸಿನಿಮಾದ ದೀಪಿಕಾ ಧರಿಸಿರುವ ʼಕೇಸರಿ ಬಿಕಿನಿʼಗೆ ಬಿತ್ತು ಕತ್ತರಿ | ಫಿಲ್ಮ್ ಬೋರ್ಡ್ ಸೂಚನೆ
ಜಾನ್ ಅಬ್ರಹಾಂ ಸಹ ನಟಿಸಿರುವ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ʼಪಠಾಣ್ʼ 2023 ರ ಜನವರಿಯಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ʼಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದ ಸೃಷ್ಟಿ ಮಾಡಿತ್ತು.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ʼಪಠಾಣ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರೆ ಹಸಿರು ಬಟ್ಟೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡು ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದು ಇತ್ತೀಚೆಗೆ ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದ ಶಾರುಖ್ ಖಾನ್ ಬಗ್ಗೆ ಎಲ್ಲೆಡೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿತ್ತು. ಸದ್ಯ ಈ ಸಿನೆಮಾದ ಕುರಿತಂತೆ ಹೊಸ ವಿಚಾರ ಹೊರ ಬಿದ್ದಿವೆ.
ನಟ ಶಾರುಖ್ ಖಾನ್ (Shah Rukh Khan) ಅವರು ಸದ್ಯ ‘ಪಠಾಣ್’ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಚಿತ್ರದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಜೋರಾಗಿ ನಡೆಯುತ್ತಿದ್ದು, ಕೆಲವರು ಶಾರುಖ್ ಖಾನ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ʼಪಠಾಣ್ʼ ಚಿತ್ರದ ಹಾಡುಗಳ ಜೊತೆಗೆ ಸಿನಿಮಾದಲ್ಲಿ ಕೆಲವು ಬದಲಾವಣೆ ತರಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ನಿರ್ಮಾಪಕರಿಗೆ ಸಲಹೆ ನೀಡಿರುವ ಕುರಿತು ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಮಾಹಿತಿ ನೀಡಿದ್ದಾರೆ.
ʼಬೇಷರಂ ರಂಗ್ʼ ಹಾಡು ಡಿಸೆಂಬರ್ 12 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಕೆಲವರು ಹಾಡನ್ನು ಮೆಚ್ಚಿಕೊಂಡರೆ ಮತ್ತೆ ಕೆಲವರು ಕೇಸರಿ ಮತ್ತು ಹಸಿರು ವೇಷಭೂಷಣಗಳ ಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಹೀಗಾಗಿ, ‘ಪಠಾಣ್’ (Pathaan) ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಇದರ ನಡುವೆ ಚಿತ್ರದ ಎರಡನೇ ಸಾಂಗ್ ʼಜೂಮೇ ಜೋ ಪಠಾನ್ʼ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಇತ್ತೀಚೆಗೆ ಪಠಾಣ್ ಸಿನಿಮಾ ಪ್ರಮಾಣೀಕರಣಕ್ಕಾಗಿ CBFC ಪರೀಕ್ಷಾ ಸಮಿತಿಯನ್ನು ತಲುಪಿದ್ದು, ಮಂಡಳಿಯ ಮಾರ್ಗಸೂಚಿಗಳ ಅನುಸಾರ ಸರಿಯಾದ ಹಾಗೂ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆ ನಡೆದಿದೆ.
ಇದೀಗ ಹಾಡುಗಳನ್ನು ಒಳಗೊಂಡಂತೆ ಚಿತ್ರದಲ್ಲಿ ಬದಲಾವಣೆ ಮಾಡಲು ಟ್ರೇಲರ್ ಬಿಡುಗಡೆಗೊಳಿಸುವಂತೆ ಮೊದಲು ತಿದ್ದುಪಡಿ ಮಾಡಿದ ಆವೃತ್ತಿಯನ್ನು ತೋರಿಸುವಂತೆ ಸಮಿತಿ ಚಿತ್ರದ ನಿರ್ಮಾಪಕರಿಗೆ ಹೇಳಿದೆ ಎನ್ನಲಾಗಿದೆ. ಇದರ ಜೊತೆಗೆ ಯಾವುದೇ ವರ್ಗದ ಇಲ್ಲವೇ ಪ್ರೇಕ್ಷಕರ ಮನಸ್ಸಿಗೆ ಬೇಸರ ತರದಂತೆ ಸಮತೋಲನ ಕಾಪಾಡಬೇಕೆಂದು ಹೇಳಲಾಗಿದೆ ಎಂದು ಜೋಶಿ ಅವರು ಮಾಹಿತಿ ನೀಡಿದ್ದಾರೆ.