ಕಿಲಾಡಿ ಜೋಡಿ | ತಪ್ಪಾಗಿ ಬ್ಯಾಂಕ್ ಖಾತೆಗೆ ಬಿದ್ದ ಕೋಟಿ ಕೋಟಿ ದುಡ್ಡನ್ನು ಒಂದೇ ದಿನದಲ್ಲಿ ಖಾಲಿ ಮಾಡಿದ ಯುವಕರು | ಅಷ್ಟಕ್ಕೂ ಈ ಹಣ ಹೇಗೆ ಖಾಲಿ ಮಾಡಿದ್ರು ಗೊತ್ತೇ ?
ಝಣ ಝಣ ಕಾಂಚಾಣದ ಮಹಿಮೆ ತಿಳಿಯದವರಿಲ್ಲ.. ದುಡ್ಡಿನ ವ್ಯಾಮೋಹ ಸತ್ತವರನ್ನು ಬದುಕಿಸುತ್ತೆ!!! ಅಷ್ಟೆ ಅಲ್ಲ.. ದುಡ್ಡು ಸಿಗುತ್ತೆ ಅಂತ ಆದರೆ ಬದುಕಿದವರನ್ನೂ ಕೂಡ ಸಾಯಿಸಲು ಹಿಂದೆ ಮುಂದೆ ನೋಡದ ಜನರು ನಮ್ಮ ನಡುವೆ ಇದ್ದಾರೆ ಅನ್ನೋದು ಅಷ್ಟೆ ನಿಜ.. ಇದೆಲ್ಲ ಬಿಡಿ.. ಹಣ ಕಂಡರೆ ಹೆಣವೂ ಕೂಡ ಬಾಯಿ ಬಿಡುತ್ತೆ ಎಂಬ ಪ್ರಚಲಿತ ಮಾತೇ ಇದೆಯಲ್ಲಾ!!!..
ಯಾರಿಗುಂಟು ಯಾರಿಗಿಲ್ಲ…. ಭರ್ಜರಿ ಎರಡು ಕೋಟಿ ರೂಪಾಯಿ ಖಾತೆಗೆ ಜಮೆ ಆದಾಗ ಯಾರೇ ಆದರೂ ಅದನ್ನು ಹಿಂದಿರುಗಿಸುವ ಪ್ರಮೆಯಕ್ಕೆ ಹೋಗಲಾರರು. ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ಮಜಾ ಉಡಾಯಿಸುವುದು ಗ್ಯಾರಂಟಿ!!..ಇದೆ ರೀತಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದು ತಮ್ಮ ಖಾತೆಗೆ ಬಂದ ಹಣವನ್ನೂ ಮಸ್ತಿ ಮಾಡಿ ಖಾಲಿ ಮಾಡಿ ಯುವಕರು ಜೈಲು ಸೇರಿದ ಘಟನೆ ವರದಿಯಾಗಿದೆ.
ತನ್ನ ಬ್ಯಾಂಕ್ ಖಾತೆಗೆ ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಜಮೆಯಾದ 2.44 ಕೋಟಿ ರೂಪಾಯಿ ಹಣವನ್ನು ಸ್ನೇಹಿತನ ಜತೆಗೂಡಿ ಯುವಕನೊಬ್ಬ ಉಡಾಯಿಸಿದ್ದು, ಇದೀಗ, ಇಬ್ಬರು ಯುವಕರು ತ್ರಿಶ್ಶೂರು ಪೊಲೀಸರ ಅತಿಥಿಗಳಾಗಿದ್ದಾರೆ.
ಪುದುತಲಮುರ ಬ್ಯಾಂಕ್ ಸಿಬ್ಬಂದಿಯಿಂದ ಡಿ. 18 ಮತ್ತು 19ರಂದು ಈ ಲೋಪ ನಡೆದಿದ್ದು ಬೇರೆ ಬ್ಯಾಂಕ್ನೊಂದಿಗೆ ವಿಲೀನಕ್ಕೆ ತಯಾರಿ ನಡೆಸುತ್ತಿದ್ದ ಸಂದರ್ಭ ಸಿಬ್ಬಂದಿಯ ಅಜಾಗರೂಕತೆಯ ಎಡವಟ್ಟಿನಿಂದಾಗಿ ಯುವಕನೊಬ್ಬನ ಖಾತೆಗೆ ಹಣ ಜಮೆಯಾಗಿರುವ ಘಟನೆ ನಡೆದಿದೆ.
ತಮ್ಮ ಖಾತೆಗೆ ಬೇರೆ ಹಣ ಜಮೆಯಾದ 2.44 ಕೋಟಿ ರೂ ಹಣದ ಬಗ್ಗೆ ಯುವಕ ಕೂಡ ಈ ಬಗ್ಗೆ ಬ್ಯಾಂಕ್ಗೆ ಮಾಹಿತಿ ನೀಡದೆ ಮೌನ ತಾಳಿದ್ದಾರೆ. ಅಷ್ಟೆ ಅಲ್ಲದೆ, ಬ್ಯಾಂಕ್ನವರು ಪರಿಶೀಲನೆ ಮಾಡಿ ಹಣ ವಾಪಸ್ ಪಡೆಯುವ ಮೊದಲೇ ಹಣವನ್ನು ಪೂರ್ತಿ ಖಾಲಿ ಮಾಡಬೇಕೆಂದು ಯೋಜನೆ ಹಾಕಿದ ಯುವಕ ತನ್ನ ಸ್ನೇಹಿತನ ಬೆಂಬಲ ಪಡೆದಿದ್ದಾನೆ.
ಸಿಕ್ಕಿದ್ದೆ ಚಾನ್ಸ್ ಎಂದುಕೊಂಡು ಬಂದ ಹಣದಿಂದ ಮೊದಲು ತಾವು ಮಾಡಿಕೊಂಡಿದ್ದ ಎಲ್ಲ ಸಾಲಗಳನ್ನು ತೀರಿಸಿದ್ದಾರೆ. ಇದರ ಜೊತೆಗೆ ಭವಿಷ್ಯಕ್ಕಾಗಿ ಆನ್ಲೈನ್ ಮೂಲಕ ಒಂದಷ್ಟು ಹಣವನ್ನು ಹೂಡಿಕೆ ಮಾಡಿದ್ದು, ಇಷ್ಟು ಮಾಡಿದ ಮೇಲೂ ಹಣ ಉಳಿದಾಗ ಆನ್ಲೈನ್ ವ್ಯಾಪಾರ ಮಾಡಿದ್ದಾರೆ. ಆನ್ಲೈನ್ ಮೂಲಕವೇ 19 ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆದು, 54 ಖಾತೆಗಳಿಗೆ ಮೊತ್ತವನ್ನು ವರ್ಗಾಯಿಸಿದ್ದಾರೆ.
ಸುಮಾರು 4 ಲಕ್ಷ ರೂ ಮೌಲ್ಯದ ನಾಲ್ಕು ಆಪಲ್ ಐಫೋನ್ಗಳನ್ನು ಖರೀದಿ ಮಾಡಿ ಜೊತೆಗೆ ಅದರಲ್ಲಿ ಎರಡು ಫೋನ್ಗಳನ್ನು ಸ್ನೇಹಿತರಿಗೆ ಆಫರ್ ರೀತಿ ಉಡುಗೊರೆ ಕೂಡ ನೀಡಿದ್ದಾರೆ. ಇದೀಗ, ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಇನ್ನೂ ಉಳಿದ ಹಣವನ್ನು ಖಾಲಿ ಮಾಡುವ ಮುನ್ನವೇ ಪೋಲೀಸರ ಅತಿಥಿಯಾಗಿದ್ದಾರೆ.
ಬ್ಯಾಂಕ್ನವರಿಗೆ ತಮ್ಮ ಎಡವಟ್ಟಿನ ಬಗ್ಗೆ ತಡವಾಗಿ ತಿಳಿದು ಬಂದಿದೆ. ಅಷ್ಟರಲ್ಲಿ ಯುವಕರ ಖಾತೆ ಕೂಡ ಬಹುತೇಕ ಖಾಲಿಯಾಗಿದೆ. ಯುವಕನ ಖಾತೆ ಪರಿಶೀಲಿಸಿದ ಬಳಿಕ ದಿಗಿಲುಗೊಂಡ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಎಸಗಿದ ಲೋಪದಿಂದಾಗಿ ಅನೇಕರ ಖಾತೆಗಳಿಗೆ ಇದೇ ರೀತಿ ದೊಡ್ಡ ಮೊತ್ತದ ಹಣ ಜಮೆಯಾಗಿದ್ದು, ಆದರೆ ಅವರೆಲ್ಲ ಬ್ಯಾಂಕ್ಗೆ ಕರೆ ಮಾಡಿ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಬ್ಯಾಂಕ್ ಸಿಬ್ಬಂದಿಗೆ ತಾವು ಎಸಗಿರುವ ಎಡವಟ್ಟಿನ ಬಗ್ಗೆ ತಿಳಿದು ಬಂದಿದೆ.
ಬ್ಯಾಂಕ್ ಅಧಿಕಾರಿಯ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ತ್ರಿಶ್ಶೂರ್ನ ಅರಿಂಬೂರ್ ನಿವಾಸಿ ನಿತಿನ್ ಮತ್ತು ಮನು ಎಂಬವರನ್ನು ಬಂಧಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ದೂರಿನ ಮೇರೆಗೆ ಯುವಕರನ್ನು ಬಂಧಿಸಲಾಗಿದ್ದು, ಆನ್ಲೈನ್ನಲ್ಲಿ ಒಟ್ಟು 171 ವಹಿವಾಟುಗಳನ್ನು ನಡೆಸಿರುವುದು ತನಿಖೆಯಿಂದ ಪತ್ತೆಯಾಗಿದೆ. ತ್ರಿಶೂರ್ ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎ.ಎ.ಅಶ್ರಫ್ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.