ಲವ್ ಎಂಬ ಮಾಯೆಯೆಲ್ಲಿ ಬಿದ್ದ ಬಾಲಕಿಯರು | ಪ್ರೇಮ ಪ್ರಕರಣಕ್ಕೆ ಮೂವರು ವಿದ್ಯಾರ್ಥಿನಿಯರು ಸಾವು

ಪ್ರೀತಿ ಅನ್ನೋದು ಪವಿತ್ರ ಬಂಧನವಾಗಿದೆ. ಆದರೆ ಇತ್ತೀಚಿಗೆ ಪ್ರೀತಿ ಅಂದರೆ ಭಯ ಹುಟ್ಟಿಸುವಂತಾಗಿದೆ. ಪ್ರೀತಿಸೋದು ತಪ್ಪಲ್ಲ ಆದರೆ ಸಾವಿರ ಬಾರಿ ಯೋಚಿಸಿ ಪ್ರೀತಿಸೋದು ಉತ್ತಮ ಯಾಕೆಂದರೆ ಪ್ರೀತಿ ವ್ಯಾಮೋಹದಲ್ಲಿ ಬಿದ್ದು ಒಂದೇ ಶಾಲೆಯ 11 ಮತ್ತು 12ನೇ ತರಗತಿಯ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ ನಡೆದಿದೆ.

ಒಂದೇ ಶಾಲೆಯಲ್ಲಿ 11-12ನೇ ತರಗತಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರು ಡಿ.10ರಿಂದ 18ರ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣವೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಯಾವುದೇ ಪ್ರಕರಣದಲ್ಲಿ ಯಾವುದೇ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಭಾಗಿಯಾಗಿಲ್ಲವೆಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸೀತಾಪುರ ಸಹಾಯಕ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಡಿ.10ರಂದು ನಡೆದ ಮೊದಲ ಆತ್ಮಹತ್ಯೆ ಪ್ರಕರಣದಲ್ಲಿ ಯುವತಿ ತನ್ನ ನೆರೆಯವನಾದ ರಾಹುಲ್ ಯಾದವ್ ಜೊತೆ ಪ್ರೇಮ ಸಂಬಂಧ ಹೊಂದಿದ್ದಳಂತೆ. ಇವರಿಬ್ಬರ ಸಂಬಂಧವನ್ನು ಹುಡುಗಿಯ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಹುಲ್ ಯಾದವ್​ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.

2ನೇ ಆತ್ಮಹತ್ಯೆಯ ಘಟನೆ ಡಿ.12ರಂದು ನಡೆದಿದ್ದು, ಅಂಕಿತ್ ಪಾಸ್ವಾನ್ ಎಂಬ ಯುವಕನನ್ನು ಓರ್ವ ವಿದ್ಯಾರ್ಥಿನಿ ಪ್ರೀತಿಸುತ್ತಿದ್ದಳು. ಹುಡುಗಿಯ ಮನೆಯವರು ಈ ಸಂಬಂಧಕ್ಕೆ ಒಪ್ಪಿದ್ದರು, ಆದರೆ ಅಂಕಿತ್​ನ ತಾಯಿ ಮದುವೆಗೆ ವರಕ್ಷಿಣೆಯಾಗಿ ಬೈಕ್ ಕೇಳಿದ್ದರಂತೆ. ಇದರಿಂದ ದುಃಖದಲ್ಲಿ ಮುಳುಗಿದ ಹುಡುಗಿ ಇಲಿ ಪಾಷಾಣ ಕುಡಿದು ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ.

3ನೇ ಘಟನೆಯಲ್ಲಿ ನದಿಗೆ ಹಾರಿ ಮತ್ತೊಬ್ಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಇವಳು ಸಹ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಯುವತಿಯ ಸಂಬಂಧಿ ಸಂಜಯ್ ತಿವಾರಿ ಆಕೆಯ ಪ್ರೇಮ ಪ್ರಕರಣದ ಬಗ್ಗೆ ಪೋಷಕರಿಗೆ ತಿಳಿಸಿದ್ದ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಆದರೆ ಈ ಪ್ರಕರಣದಲ್ಲಿ ಸಂಜಯ್ ತಿವಾರಿ ಭಾಗಿಯಾಗಿದ್ದಾನೆಂದು ಮೃತ ಯುವತಿಯ ಸಹೋದರಿ ಆರೋಪಿಸಿದ್ದಾಳೆ. ನಾವು ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ.

ಅದಲ್ಲದೆ ಇನ್ನೂ 4ನೇ ಪ್ರಕರಣದಲ್ಲಿ ಸ್ನೇಹಿತರು ಮಾಡಿದ ಕಾಮೆಂಟ್‌ಗಳಿಂದ ಬೇಜಾರು ಮಾಡಿಕೊಂಡ ಯುವತಿಯೊಬ್ಬಳು ತನ್ನ ಮಣಿಕಟ್ಟನ್ನು ಸೀಳಿಸಿಕೊಂಡಿದ್ದಾಳೆ. ಆಕೆಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಈಗ ಆರೋಗ್ಯವಾಗಿದ್ದಾಳೆಂದು ಸೀತಾಪುರದ ಎಎಸ್​​ಪಿ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಉತ್ತರ ಪ್ರದೇಶದ ಸೀತಾಪುರದಲ್ಲಿ 10 ದಿನದಲ್ಲಿ ಮೂವರು ವಿದ್ಯಾರ್ಥಿನಿಯರ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣವೆಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಬಾಳಿ ಬದುಕಬೇಕಾದ ಮಕ್ಕಳು ಪ್ರೀತಿ ಎಂಬ ಮಾಯೆಗೆ ಮರುಳಾಗಿ ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನಾದರೂ ಸಮಾಜ ಜಾಗೃತಿಗೊಳ್ಳಬೇಕಾಗಿದೆ.

Leave A Reply

Your email address will not be published.