ರೋಹಿತ್ ಚಕ್ರತೀರ್ಥ ವಿರುದ್ಧ ತೀರ್ಥಹಳ್ಳಿಗರ ಆಕ್ರೋಶ! ಕುವೆಂಪು ನಾಡಿಗೆ ಕಾಲಿಡದಂತೆ ಗೋ ಬ್ಯಾಕ್ ಚಳುವಳಿಗೆ ಸಜ್ಜು

ಸದ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಹಾಗೂ ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಇಂದು ಸಂಜೆ ತೀರ್ಥಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಆಗಮಿಸುತ್ತಿದ್ದು ಅವರ ತೀರ್ಥಹಳ್ಳಿ ಭೇಟಿಯನ್ನು ವಿರೋಧಿಸಿ ಪ್ರಗತಿಪರರು ಗೋ ಬ್ಯಾಕ್ ಚಳುವಳಿಯನ್ನು ಮಾಡುತ್ತಿದ್ದಾರೆ

ತೀರ್ಥಹಳ್ಳಿಯಲ್ಲಿ ಕಡಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿರುವ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ವಿಷಯ ಕುರಿತ ಕಾರ್ಯಕ್ರಮ ಸಾಕಷ್ಟು ವಾದ-ವಿವಾದ, ಪರ-ವಿರೋಧ ಹುಟ್ಟು ಹಾಕಿದೆ. ಈ ಕಾರ್ಯಕ್ರಮ ದಲ್ಲಿ ರೋಹಿತ್ ಚಕ್ರತೀರ್ಥ ಪಾಲ್ಗೊಳ್ಳುತ್ತಿದ್ದು ಈ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಚಳುವಳಿಯನ್ನು ಆರಂಭಿಸಿದ್ದಾರೆ.

ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ರೋಹಿತ್ ಅವರು ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ನಾಡಿನ ಅನೇಕ ಮಹಾನ್ ವ್ಯಕ್ತಿಗಳಿಗೆ ಅವಮಾನ ಮಾಡಿದ್ದರೆಂದು ಕೆಲವರು ಆರೋಪ ಮಾಡಿ ಅದು ಸಾಕಷ್ಟು ಚರ್ಚೆಗೊಳಪಟ್ಟಿತ್ತು. ನಂತರದಲ್ಲಿ ಸರಕಾರ ಮಧ್ಯಪ್ರವೇಶಿಸಿ ಅದು ಇತ್ಯರ್ಥವಾಗಿತ್ತು. ಹೀಗಾಗಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿರುವ ರೋಹಿತ್‌ ಚಕ್ರತೀರ್ಥ ತೀರ್ಥಹಳ್ಳಿಗೆ ಯಾವುದೇ ಕಾರಣಕ್ಕೂ ಕಾಲಿಡಬಾರದು. ಒಂದು ವೇಳೆ ರೋಹಿತ್‌ ಚಕ್ರತೀರ್ಥ ತೀರ್ಥಹಳ್ಳಿಗೆ ಭೇಟಿ ನೀಡಿದರೆ ಭಾರಿ ಪ್ರತಿಭಟನೆ ಎದುರಿಸ ಬೇಕಾಗುತ್ತದೆ ಎಂದು ಕೆಲವು ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಇದೆ ವೇಳೆ ರೋಹಿತ್‌ ಚಕ್ರತೀರ್ಥ ಅವರ ತೀರ್ಥಹಳ್ಳಿ ಭೇಟಿಯನ್ನು ಸಮರ್ಥಿಸಿಕೊಂಡಿರುವ ಕೆಲವರು, ರೋಹಿತ್‌ ಚಕ್ರತೀರ್ಥ ಅವರನ್ನು ಪೂರ್ವಗ್ರಹ ಪೀಡಿತರಾಗಿ ವಿರೋಧಿ ಸುತ್ತಿರುವ ವ್ಯಕ್ತಿಗಳ ಆರೋಪ ಆಧಾರ ರಹಿತವಾಗಿದೆ. ಅಷ್ಟೇ ಅಲ್ಲದೆ ಇಂತಹ ಫೋಟೋ ಬೆದರಿಕೆಗಳಿಗೆ ತೀರ್ಥಹಳ್ಳಿಯ ವಿಚಾರವಂತರು ಸೊಪ್ಪು ಹಾಕುವುದಿಲ್ಲ, ಇಂದಿನ ಕಾರ್ಯಕ್ರಮವನ್ನು ಮಾಡಿಯೇ ತೀರುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

Leave A Reply

Your email address will not be published.