ಸಂಚಾರ ಕಿರಿಕಿರಿಗೆ ಬಂದಿದೆ ನೋಡಿ ಮಾಸ್ಟರ್ ಪ್ಲ್ಯಾನ್
ಬೆಂಗಳೂರು ಸೂಕ್ತ ಯೋಜನೆಯೊಂದಿಗೆ ಅಭಿವೃದ್ಧಿಹೊಂದಿಲ್ಲ. ನಗರ ಬೆಳೆದಿರುವುದಕ್ಕೆ ತಕ್ಕಂತೆ ರಸ್ತೆಗಳ ಅಗಲೀಕರಣವಾಗಿಲ್ಲ ಆದ್ದರಿಂದ ಸದ್ಯ ಆಟೋ ರಿಕ್ಷಾ, ಸಿಟಿ ಬಸ್, ಮೆಟ್ರೊ ರೈಲು ಸೇರಿದಂತೆ ನಗರದ ಎಲ್ಲ ಸಾರಿಗೆ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರುವ ‘ಬೆಂಗಳೂರು ಮಹಾ ನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ’ಕ್ಕೆ (BMLTA Bill) ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ದೊರೆತಿದೆ. ಪ್ರಸ್ತುತ ಈ ನೀತಿ ವಿಧೇಯಕ ರಾಷ್ಟ್ರೀಯ ನಗರ ಸಾರಿಗೆ ನೀತಿಗೆ ಪೂರಕವಾಗಿದೆ. ಸಮಗ್ರ ಸಾರಿಗೆ ಯೋಜನೆಯನ್ನು ಸಕ್ರಿಯಗೊಳಿಸುವುದಕ್ಕಾಗಿ ವಿವಿಧ ಸಂಸ್ಥೆಗಳು ಮತ್ತು ಇಲಾಖೆಗಳನ್ನು ಒಂದು ಚೌಕಟ್ಟಿನಡಿ ತರಲು ನೆರವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಈಗಾಗಲೇ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ. ಬೆಂಗಳೂರಿನ ಸಂಚಾರ ಬಿಕ್ಕಟ್ಟಿನ ನಿರ್ವಹಣೆಗೆ ಈ ವಿಧೇಯಕ ನೆರವಾಗಲಿದೆ ಎನ್ನಲಾಗಿದೆ.
ಅದಲ್ಲದೆ ಭೂ ಸಾರಿಗೆ ಪ್ರಾಧಿಕಾರವು ಸುಸ್ಥಿರ ನಗರ ಸಾರಿಗೆ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ. ಲಭ್ಯವಿರುವ ಭೂ ಪ್ರದೇಶದ ಸಮರ್ಪಕ ಬಳಕೆಯೊಂದಿಗೆ ಸುಗಮ ಸಂಚಾರವನ್ನು ಉತ್ತೇಜಿಸಲು ಕ್ರಮಕೈಗೊಳ್ಳಲಿದೆ. ಭೂ ಸಾರಿಗೆ ಪ್ರಾಧಿಕಾರವನ್ನು ಸಾರ್ವಜನಿಕ ವಲಯದ ಅನೇಕರು ಸ್ವಾಗತಿಸಿದ್ದಾರೆ. ಇನ್ನು ಕೆಲವರು ಪ್ರಾಧಿಕಾರ ವಿಧೇಯಕವು ಹಲವು ಮಿತಿಗಳನ್ನು ಒಳಗೊಂಡಿದೆ ಎಂದು ತಿಳಿಸಲಾಗಿದೆ .
ಪ್ರಸ್ತುತ ಭೂ ಸಾರಿಗೆ ಪ್ರಾಧಿಕಾರ ವಿಧೇಯಕಕ್ಕೆ ಅಂಗೀಕಾರ ದೊರೆತಿರುವ ಬಗ್ಗೆ ಮಾಧುಸ್ವಾಮಿ ಅವರ ಮಾಹಿತಿ ಪ್ರಕಾರ ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯು ‘ಬೆಂಗಳೂರು ಮಹಾ ನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ’ದ ಅಡಿ ಬರಲಿದೆ. ಸುಮಾರು 279 ಚದರ ಕಿಲೋಮೀಟರ್ ವ್ಯಾಪ್ತಿಗೆ ಕಾಯ್ದೆ ಅನ್ವಯವಾಗಲಿದೆ. ಎಲ್ಲ ಸಾರ್ವಜನಿಕ ಸಾರಿಗೆಗಳನ್ನು ಸಂಯೋಜಿಸಿ ಹೊಸ ಪ್ರಾಧಿಕಾರ ರಚಿಸಲಾಗುವುದು. ಜೊತೆಗೆ ನಗರ ಸಂಚಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರಾಧಿಕಾರ ರೂಪಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಪ್ರತಿ ದಿನ ಹೊಸದಾಗಿ 5,000 ವಾಹನಗಳು ರಸ್ತೆಗಿಳಿಯುತ್ತಿವೆ. ನಗರವು 1.3 ಕೋಟಿ ಜನಸಂಖ್ಯೆ ಹೊಂದಿದ್ದು, ಶೀಘ್ರದಲ್ಲೇ ವಾಹನಗಳ ಸಂಖ್ಯೆ ಇದನ್ನೂ ಮೀರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರ ಸಾರಿಗೆಗೆ ಸಂಬಂಧಿಸಿ ವೈಜ್ಞಾನಿಕ ಅಧ್ಯಯನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಐಐಎಸ್ಸಿಯನ್ನು ಸಂಪರ್ಕಿಸಲಾಗಿದ್ದು, ಅಧ್ಯಯನ ನಡೆಸುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಭೂ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಉಸ್ತುವಾರಿ ಸಚಿವರು ಮತ್ತು ರಾಜ್ಯ ಸಾರಿಗೆ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಇತರ ಸದಸ್ಯರಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಬೆಂಗಳೂರು ನಗರ ಮೇಯರ್, ಪೊಲೀಸ್ ಆಯುಕ್ತರು, ಸರ್ಕಾರದ ವಿವಿಧ ಏಜೆನ್ಸಿಗಳ ಪ್ರತಿನಿಧಿಗಳು ಇರಲಿದ್ದಾರೆ ಎಂಬ ಮಾಹಿತಿ ದೊರೆತಿದೆ.