ಮೂಗು ಕಟ್ಟಿಕೊಂಡಿದೆಯೇ ? ಜೊತೆಗೆ ಗಂಟಲು ನೋವಿದೆಯೇ ? ಶೀಘ್ರ ಪರಿಹಾರ ಈ ಮನೆ ಮದ್ದು
ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಆರೋಗ್ಯವೂ ಹದಗೆಡುತ್ತದೆ. ಏಕೆಂದರೆ ಈ ಋತುವಿನಲ್ಲಿ ಬೀಸುವ ತಂಪಾದ ಗಾಳಿಯು ಬಹಳ ಬೇಗನೆ ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಇದಕ್ಕಾಗಿ ನಮ್ಮ ದೇಹದ ತಾಪಮಾನವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡು, ಆರೋಗ್ಯಕರವಾದ ಆಹಾರ ಸೇವನೆ ಮಾಡುತ್ತಾ ಬಂದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ನಮಗೆ ಸಹಾಯ ಮಾಡುತ್ತದೆ.
ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಲ್ಲಿ ಗಂಟಲು ನೋವು ಮತ್ತು ಕಟ್ಟಿದ ಮೂಗು ಬಹುತೇಕ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಇದರಿಂದಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಮುಕ್ತಿ ಪಡೆಯಬಹುದು.
ಕಷಾಯ :- ಮನೆಯಲ್ಲಿಯೇ ಇರುವ ಮಸಾಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಉಸಿರುಕಟ್ಟುವುದು, ಗಂಟಲು ನೋವು, ಮೂಗು ಕಟ್ಟಿಕೊಳ್ಳುವ ಸಮಸ್ಯೆಗಳನ್ನು ಗುಣಪಡಿಸಬಹುದು. ಇದು ಚಳಿಗಾಲದಲ್ಲಿ ತಲೆದೋರುವ ಸಮಸ್ಯೆಗಳ ವಿರುದ್ದ ಹೋರಾಡಿ, ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿ, ಕರಿಮೆಣಸು, ಒಣ ಶುಂಠಿ ಮತ್ತು ಚಕ್ಕೆಯನ್ನು ಒಟ್ಟಿಗೆ ಕುದಿಸಿ ಕಷಾಯ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ ಮತ್ತು ನಿಂಬೆ ರಸವನ್ನು ಸೇರಿಸಿ. ಇದನ್ನು ಕುಡಿದರೆ ಮೇಲೆ ತಿಳಿಸಿದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಮೂಗಿನಲ್ಲಿ ಎಣ್ಣೆ ಹಾಕಿಕೊಳ್ಳುವುದು:- ಕಟ್ಟಿದ ಮೂಗನ್ನು ತೆರೆಯಲು ಮೂಗಿನೊಳಗೆ ಎಣ್ಣೆ ಹಾಕಬೇಕು. ಬೆಳಿಗ್ಗೆ 1-2 ಹನಿ ಎಳ್ಳು ಅಥವಾ ತೆಂಗಿನ ಎಣ್ಣೆಯನ್ನು ಮೂಗಿಗೆ ಹಾಕುವುದರಿಂದ ತಕ್ಷಣವೇ ಕಟ್ಟಿದ ಮೂಗಿನಿಂದ ಪರಿಹಾರ ಸಿಗುತ್ತದೆ.
ಲವಂಗ ಮತ್ತು ಜೇನುತುಪ್ಪ:- ಲವಂಗ ಮತ್ತು ಜೇನುತುಪ್ಪದಲ್ಲಿರುವ ಔಷಧೀಯ ಗುಣಗಳು ನಮಗೆಲ್ಲಾ ತಿಳಿದೇ ಇದೆ. ಇದು ಶೀತ ಮತ್ತು ಜ್ವರದ ಸಮಯದಲ್ಲಿ ಪರಿಹಾರ ನೀಡುತ್ತದೆ. ಲವಂಗದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ. ದಿನಕ್ಕೆ 2-3 ಬಾರಿ ಹೀಗೆ ಮಾಡುತ್ತಾ ಬಂದರೆ ಕಟ್ಟಿದ ಮೂಗೂ ಮತ್ತು ಗಂಟಲು ನೋವಿನಿಂದ ಪರಿಹಾರ ಸಿಗುತ್ತದೆ.
ಗಾರ್ಗ್ಲಿಂಗ್:- ಚಳಿ ಹೆಚ್ಚಾಗುತ್ತಿರುವ ಕಾರಣ ಗಂಟಲಿನಲ್ಲಿ ಕಫ ಸಂಗ್ರಹವಾಗುತ್ತದೆ. ಈ ನೋವಿನಿಂದಾಗಿ ಗಂಟಲು ಉರಿಯುವಂತೆಯೂ ಆಗುತ್ತದೆ. ಎಳ್ಳು ಅಥವಾ ತೆಂಗಿನೆಣ್ಣೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಗಾರ್ಗ್ಲಿಂಗ್ ಮಾಡಿದರೆ ಗಂಟಲು ನೋವು ಮತ್ತು ಕಟ್ಟಿದ ನೋವಿನ ಸಮಸ್ಯೆ ನಿವಾರಣೆ ಯಾಗುತ್ತದೆ.
ಇನ್ನೊಂದು ವಿಧಾನವೆಂದರೆ ಉಪ್ಪುನೀರಿನ ಗಳಗಳದಿಂದ ಕೂಡ ಈ ನೋವು ನಿವಾರಣೆಯಾಗುತ್ತದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ, ಅಥವಾ ನೀವು ಸಹಿಸಿಕೊಳ್ಳಬಹುದಾದಷ್ಟು ಬಿಸಿ ಇರುವ ನೀರಿಗೆ ಒಂದು ಚಮಚ ಉಪ್ಪು ಹಾಕಿ ಕಲಕಿದರೆ, ಉಪ್ಪುನೀರು ಸಿದ್ದವಾಗುತ್ತದೆ. ಉತ್ತಮ ಪ್ರಯೋಜನ ಪಡೆಯಲು ಪುಡಿ ಉಪ್ಪಿಗಿಂತ ಸಮುದ್ರದ ಕಲ್ಲುಪ್ಪು ಉತ್ತಮ.
ಉಗುರು ಬೆಚ್ಚಗಿನ ನೀರು:- ಪ್ರತಿ ಬಾರಿ ನೀವು ಉಗುರು ಬೆಚ್ಚಗಿನ ನೀರು ಕುಡಿದ ಸಂದರ್ಭದಲ್ಲಿ ಗಂಟಲಿನ ನೋವು ಮತ್ತು ಕೆಮ್ಮಿನ ಸಮಸ್ಯೆಯಿಂದ ಕ್ರಮೇಣವಾಗಿ ಪರಿಹಾರವನ್ನು ಪಡೆದುಕೊಳ್ಳುತ್ತಾ ಹೋಗುತ್ತೀರಿ. ಇದರ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಮತ್ತು ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ಕೆಮ್ಮಿನ ಪರಿಹಾರ ಬಹಳ ಬೇಗನೆ ಆಗುತ್ತದೆ ಮತ್ತು ಗಂಟಲು ನೋವು ಮತ್ತು ಗಂಟಲಿನ ಭಾಗದ ಕಫ ಸಹ ಮಾಯವಾಗುತ್ತದೆ.