ಕ್ರಿಸ್ಮಸ್ ಆಚರಣೆ ಮುಗಿಯೋ ಮುನ್ನವೇ ನಡೆಯಿತು ಚರ್ಚ್ ಮೇಲೆ ದುಷ್ಕರ್ಮಿಗಳಿಂದ ದಾಳಿ!
ರಾಜ್ಯದಲ್ಲಿ ಮತ್ತೆ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗುವಂಥ ಪ್ರಕರಣವೊಂದು ಮೈಸೂರಿನಲ್ಲಿ ನಡೆದಿದೆ. ಸಾಮಾನ್ಯವಾಗಿ ಹಿಂದೂಗಳ ದೇವಸ್ಥಾನಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತವೆ. ಇದೀಗ ಚರ್ಚ್ ವೊಂದರ ಮೇಲೆ ದಾಳಿ ನಡೆದಿದ್ದು, ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿ ಚರ್ಚ್’ನೊಳಗೆ ನುಗ್ಗಿದ ಕಿಡಿಗೇಡಿಗಳು ಆವರಣದಲ್ಲಿದ್ದ ಬಾಲ ಯೇಸುವಿನ ಪ್ರತಿಮೆ ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಮೈಕ್ ಹಾಗೂ ಹುಂಡಿ ಕಳವು ಮಾಡಿರುವ ಘಟನೆ ಮಂಗಳವಾರದಂದು ನಡೆದಿದೆ.
ಮೊನ್ನೆಯಷ್ಟೇ ಕ್ರಿಸ್ಮಸ್ ನಡೆದಿದ್ದು, ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ. ಚರ್ಚ್ನ ಒಳಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಬಾಲ ಯೇಸುವಿನ ತೊಟ್ಟಿಲು ಮತ್ತು ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಬಾಲಯೇಸುವಿನ ತೊಟ್ಟಿಲನ್ನು ವೇದಿಕೆಯ ಮೇಲಿಂದ ಮುಂಭಾಗಕ್ಕೆ ಬಿಸಾಕಿರುವುದು ಕಂಡುಬಂದಿದೆ. ಬಾಲ ಯೇಸುವಿನ ಪ್ರತಿಮೆಯೊಂದಿಗೆ ಅಲಂಕಾರಕ್ಕೆ ಜೋಡಿಸಲ್ಪಟ್ಟಿದ್ದ ಗಾಜಿನ ಪದಾರ್ಥಗಳನ್ನು ಸಹ ಎಲ್ಲೆಂದರಲ್ಲಿ ಎಸೆದು ಹೋಗಿದ್ದಾರೆ. ಚರ್ಚ್ನಲ್ಲಿ ಯಾರೂ ಇಲ್ಲದ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಅಲ್ಲದೇ ಸಮೀಪದಲ್ಲಿಯೇ ಇದ್ದ ಹಣದ 3 ಹುಂಡಿಗಳನ್ನು ಕದ್ದೊಯ್ದಿದ್ದಾರೆ. ಚರ್ಚ್’ನ ಮತ್ತೊಂದು ಬದಿಯ ಬಾಗಿಲನ್ನು ತೆರೆಯಲು ಪ್ರಯತ್ನಿಸಿರುವ ದುಷ್ಕರ್ಮಿಗಳು ದೊಡ್ಡ ಇಟ್ಟಿಗೆಯಿಂದ ಬಾಗಿಲನ್ನು ಒಡೆಯುವ ಪ್ರಯತ್ನ ಮಾಡಿರುವುದು ಕಂಡುಬಂದಿದೆ. ಚರ್ಚ್ನಲ್ಲಿ ಯಾರೂ ಇಲ್ಲದ ವೇಳೆ ಈ ದಾಳಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.