ಏನಿದು ಹಿಂದೂ – ಜೈನ ವಿವಾದ! ವೀರೇಂದ್ರ ಹೆಗ್ಗಡೆಯವರು ದಿಲ್ಲಿಗೆ ಹೋಗಿದ್ಯಾಕೆ.

ಹಿಂದೂ ಮತ್ತು ಜೈನ ಧರ್ಮಗಳೆರಡೂ ಭಾರತದಲ್ಲಿಯೇ ಹುಟ್ಟಿ, ಬೆಳೆದು ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಂಡಂತಹ ಪ್ರಮುಖ ಧರ್ಮಗಳು. ಮೇಲ್ನೋಟಕ್ಕೆ ಈ ಎರಡೂ ಧರ್ಮಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಕಂಡುಬರದಷ್ಟು ಸಾಮ್ಯತೆಗಳಿವೆ. ಎರಡೂ ಧರ್ಮೀಯರು ಎರಡು ಕಡೆಯ ದೇವಾಲಯಗಳಿಗೆ ಹೋಗುವಷ್ಟು ಅನ್ಯೋನ್ಯವಾಗಿದ್ದಾರೆ. ಆದರೆ ಇದೀಗ ಕೆಲವೆಡೆ ಈ ಧರ್ಮ ದ್ವಯಗಳ ನಡುವೆ ವಿವಾದಗಳು ಸೃಷ್ಟಿಯಾಗುತ್ತ ಬಿರುಕು ಮೂಡುತ್ತಿದೆ. ಜೈನ ಧರ್ಮದ ಪ್ರಮುಖರಲ್ಲೊಬ್ಬರಾದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕೂಡ ಈ ವಿಚಾರವಾಗಿ ದೆಹಲಿಗೆ ತೆರಳಿ ಧ್ವನಿ ಎತ್ತಿ ಬಂದಿದ್ದಾರೆ. ಹಾಗಾದರೆ ಏನಿದು ವಿವಾದ? ಇದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

ಗುಜರಾತ್ ಮತ್ತು ಝಾರ್ಖಂಡ್ ನಲ್ಲಿರುವ ಜೈನರ ಪ್ರಮುಖ ಧಾರ್ಮಿಕ ಕೇಂದ್ರಗಳು ಈ ಗೊಂದಲಗಳ ಮೂಲವಾಗಿದೆ. ಹೌದು ಗುಜರಾತಿನ ಭಾವ್ ನಗರದ ಪಾಲಿಥಾನ್ ಕ್ಷೇತ್ರದಲ್ಲಿರುವ ಕ್ಷತ್ರುಂಜಯ ಎಂಬ ಪರ್ವತದಲ್ಲಿ ಸುಮಾರು 800ಕ್ಕೂ ಅಧಿಕ ದೇವಾಲಯಗಳಿವೆ. ಇವುಗಳಲ್ಲಿ ಬಹುತೇಕ ದೇವಾಲಯಗಳು ಜೈನರಿ. ಜೈನರದ್ದು. ಮೊದಲ ತೀರ್ಥಂಕರ ವೃಷಭನಾಥರು ತಮ್ಮ ಮೊದಲ ಪ್ರವಚನವನ್ನು ಮೊದಲು ಇಲ್ಲಿ ನೀಡಿದರು, ನೇಮಿನಾಥ ತೀರ್ಥಂಕರರನ್ನು ಬಿಟ್ಟು ಇತರ 24 ತೀರ್ಥಂಕರರು ಇಲ್ಲಿಗೆ ಬಂದು ಈ ಪ್ರದೇಶವನ್ನು ಪವಿತ್ರಗೊಳಿಸಿದರು ಎಂಬುದು ಜೈನರು ನಂಬಿಕೆ. ಮುಖ್ಯವಾದ ಸಂಗತಿ ಎಂದರೆ ಈ ಎಲ್ಲಾ ಜೈನ ದೇವಾಲಯಗಳಿಗೆ ಅರ್ಚಕರಾಗಿ ಇರುವುದು ಹಿಂದೂಗಳು. ಈ ಹಿಂದೂ ಅರ್ಚಕರಿಗೋಸ್ಕರ ಇಲ್ಲಿನ ಜೈನ ದೇವಾಲಯಗಳ ನಡುವೆ ‘ನೀಲಕಂಠ ಮಹಾ’ ಎಂಬ ಏಕೈಕ ಹಿಂದೂ ದೇವಾಲಯವಿದೆ. ಈ ಹಿಂದೂ ದೇವಾಲಯದ ಉಸ್ತುವಾರಿಯನ್ನು ನೋಡಿಕೊಳ್ಳವ ವಿಚಾರವೇ ಪ್ರಸ್ತುತ ವಿವಾದವನ್ನು ಸೃಷ್ಟಿಸಿದೆ. ಜೈನ ಮತ್ತು ಹಿಂದೂ ದೇವಾಲಯಗಳ ಉಸ್ತುವಾರಿಯನ್ನ ಬಹಳ ವರುಷಗಳಿಂದ ಶೇಠ್ ಆನಂದ್ ಜಿ, ಕಲ್ಯಾಣ್ ಜಿ ಪೆಧೀ ಎಂಬ ಜೈನ ಸಂಸ್ಥೆ ನಡೆಸುಕೊಂಡು ಬರುತ್ತಿದೆ. ಆದರೆ ನೀಲಕಂಠ ಮಹಾ ದೇವಾಲಯವನ್ನು ನಮ್ಮ ಸುಪರ್ದಿಗೆ ನೀಡಬೇಕೆಂಬುದು ಹಿಂದೂಗಳು ಕೇಳುತ್ತಿದ್ದಾರೆ.

2017 ರಲ್ಲಿ ಈ ವಿಚಾರ ಗುಜರಾತ್ ಹೈಕೋರ್ಟಿಗೂ ಹೋಗಿತ್ತು. ದೇವಾಲಯಕ್ಕೆ ಪ್ರವೇಶವನ್ನು ಕೋರಿ ವಿಶ್ವ ಹಿಂದೂ ಪರಿಷತ್ ಅರ್ಜಿಯನ್ನು ಸಲ್ಲಿಸಿತ್ತು. ಕೋರ್ಟ್ ದೇವಾಲಯಕ್ಕೆ ಯಾರು ಬೇಕಾದರೂ ಹೋಗಬಹುದು ಆದರೆ ಜೈನ ಸಂಸ್ಥೆಗಳೇ ದೇವಾಲಯದ ಜವಾಬ್ದಾರಿ ನೋಡಿಕೊಳ್ಳಲಿ, ಅರ್ಚಕರನ್ನು ಮಾತ್ರ ಹಿಂದೂಗಳು ನೇಮಿಸಬಹುದು, ಇದಕ್ಕೂ ಜೈನ ಸಂಸ್ಥೆಗಳು ಒಪ್ಪಬೇಕೆಂದು ಆದೇಶಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಜೈನರು ಮಾತ್ರ ಹೋಗುತ್ತಿದ್ದ ದೇವಾಲಯಕ್ಕೆ ನಂತರದಲ್ಲಿ ಹಿಂದೂಗಳು ಹೋಗುತ್ತಿದ್ದಾರೆ. ಈ ವಿಚಾರವಾಗಿ ಆಗಾಗ ವಿವಾದಳು ಕಾಣುತ್ತಿತ್ತು. ಆದರೆ ಕೆಲವು ದಿನಗಳ ಹಿಂದೆ ಮಂದಿರ ಒಂದರಲ್ಲಿ ಆದಿನಾಥರ ಪಾದುಕೆಗಳನ್ನು ವಿರೂಪ ಮಾಡಿ ಜೊತೆಗೆ ಅಲ್ಲಿದ್ದ ಸಿಸಿಟಿವಿ ಗಳನ್ನು ನಾಶಮಾಡಲಾಗಿದ್ದು ಇದು ಬೇಕಂತಲೇ ಹಿಂದೂ ಸಂಘಟನೆಗಳು ಮಾಡಿರುವ ಕೃತ್ಯ ಎಂದು ಜೈನ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ ಹಿಂದೂ ಅರ್ಚಕರು ಇದು ನಮ್ಮಿಂದಾದ ಕೃತ್ಯ ಅಲ್ಲ, ಯಾರೋ ಕಿಡಿಗೇಡಿಗಳು ಬೇಕಂತಲೇ ಎರಡೂ ಸಮುದಾಯಗಳ ನಡುವೆ ಬೆಂಕಿ ಹಚ್ಚಲು ಈ ರೀತಿ ಮಾಡಿದ್ದಾರೆ ಮತ್ತು ಆಡಳಿತ ಟ್ರಸ್ಟ್ ನಮ್ಮ ದೇವಾಲಯದ ಮೇಲಿನ ಬಾವುಟವನ್ನು ಕಿತ್ತುಹಾಕಿದೆ ಎಂದು ಆರೋಪ ಮಾಡಿದ್ದಾರೆ. ಸಮಸ್ಯೆ ಬಗೆಹರಿಸಲು ಗುಜರಾತ್ ಮುಖ್ಯಮಂತ್ರಿಯನ್ನು ಭೇಟಿಮಾಡುತ್ತೇವೆ ಎಂದು ಜೈನರು ಪಟ್ಟು ಹಿಡಿದಿದ್ದಾರೆ.

ಮತ್ತೊಂದು ವಿವಾದಕ್ಕೆ ಒಳಗಾಗಿರುವ ವಿಚಾರವೆಂದರೆ ಝಾರ್ಖಂಡಿನ ಪರಸನಾಥ್ ಅಲ್ಲಿರುವ ಜೈನರ ಮತ್ತೊಂದು ಪ್ರಮುಖ ಧಾರ್ಮಿಕ ಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಪ್ರವಾಸಿ ತಾಣವಾಗಿ ಮಾಡಲು ಮುಂದಾಗಿರುವುದು. ಜೈನರ ನಂಬಿಕೆಯಂತೆ ಎರಡನೇ ತೀರ್ಥಂಕರರಾದ ಅಜಿತನಾಥರಿಂದ ಹಿಡಿದು 20 ತೀರ್ಥಂಕರರು ಇಲ್ಲಿ ಕೈವಲ್ಯ ಜ್ಞಾನವನ್ನು ಪಡೆದಿದ್ದಾರೆ. ಹಿಂದೂಗಳಿಗೆ ಕಾಶಿ ಪವಿತ್ರಕ್ಷೇತ್ರವಾದಂತೆ ಜೈನರಿಗೆ ಶಿಖರ್ಜಿ ಪವಿತ್ರಕ್ಷೇತ್ರ ಎಂದು ಹೇಳುತ್ತಾರೆ. ಇಂತಹ ಪವಿತ್ರ ಕ್ಷೇತ್ರವನ್ನು ಟೂರಿಸಂ, ಪಿಕ್ನಿಕ್ ಪ್ರದೇಶ ಎಂದು ಘೋಷಿಸಿದರೆ ಪ್ರವಾಸಿಗರು ಬಂದು ಇಲ್ಲಿನ ವ್ಯವಸ್ಥೆಗಳನ್ನು, ಪವಿತ್ರತೆಯನ್ನು ಹಾಳಮಾಡುತ್ತಾರೆ. ಇದು ನಮ್ಮ ಭಾವನೆಗಳಿಗೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯನ್ನುಂಟುಮಾಡುತ್ತದೆ. ಅಲ್ಲದೆ ಇಲ್ಲಿಯೇ ಓಡಾಡುವ ಜೈನ ಸಾದ್ವಿಗಳಿಗೆ, ಮುನಿಗಳಿಗೆ ಇದು ತೊಂದರೆಯಾಗುತ್ತದೆ. ಆದ್ದರಿಂದ ಇದನ್ನು ಜೈನರ ಪವಿತ್ರ ಕ್ಷೇತ್ರವೆಂದು ಘೋಷಣೆ ಮಾಡಬೇಕೆಂಬುದು ಜೈನ ಸಂಘಟನೆಗಳು ಮನವಿ.

ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಝಾರ್ಖಂಡ್ ಸರ್ಕಾರ, ಕೇಂದ್ರ ಸರ್ಕಾರದ ನೆರವಿನಿಂದ ಶಿಖರ್ಜಿಯನ್ನು ಪ್ರವಾಸೋದ್ಯಮ ತಾಣವಾಗಿ ಘೋಷಿಸಿತು. ಇದರ ವಿರುದ್ಧ ಜೈನ ಸಂಘ, ಸಂಸ್ಥೆಗಳು ಇದೀಗ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕೂಡ ದಿಲ್ಲಿಗೆ ತೆರಳಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಕಿಷನ್ ರೆಡ್ಡಿಯವರನ್ನು ಭೇಟಿ ಮಾಡಿ ಝಾರ್ಖಂಡ್ ಸರ್ಕಾರಕ್ಕೆ ಈ ಯೋಜನೆಯನ್ನು ಕೈಬಿಡುವಂತೆ ತಾಕೀತು ಮಾಡಬೇಕೆಂದು ಮನವಿ ಮಾಡಿದ್ದಾರೆ.

Leave A Reply

Your email address will not be published.