ರೈತರೇ ಗಮನಿಸಿ!! ಇಲಿಗಳ ಕಾಟದಿಂದ ಪಾರಾಗಲು ಈ ಸುಲಭ ವಿಧಾನ ಅನುಸರಿಸಿ!
ಯಾರು ಮನೆಗೆ ಕರೆಯದೆ ಇದ್ರೂ ಕೂಡ ಮನೆಯೊಳಗೆ ಸುಲಭದಲ್ಲಿ ಲಗ್ಗೆ ಇಟ್ಟು ತನ್ನ ಪಾರುಪತ್ಯ ಕಾಯ್ದು ಕೊಂಡಿರುವ ಅತಿಥಿ.. ಇವನು.. ಮೋದಕ ಪ್ರಿಯನ ಪ್ರಿಯ ಭಕ್ತ. ಪ್ರತಿಯೊಬ್ಬರ ಮನೆಯ ಅಕ್ಕಿ, ದಾಸ್ತಾನು ಕಂಡಾಗ ಓಡೋಡಿ ಬಂದು ಬಟ್ಟೆ, ಪೇಪರ್ ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿ ತನ್ನ ಹೊಟ್ಟೆ ತುಂಬಿದಾಗ ಸವಾರಿ ಹೊರಟರೆ ಮರುದಿನ ಮತ್ತೆ ತನ್ನ ಕೆಲಸಕ್ಕೆ ಪಕ್ಕಾ ಹಾಜರ್ ಆಗಿ ಪುಸ್ತಕ, ಸಾಮಾನುಗಳ ನಡುವೆ ಕೊಂಚ ಸೆರೆ ಮಾಡಿಕೊಂಡು ಎಲ್ಲರ ಕಣ್ಣಿಗೆ ಮಣ್ಣೆರಚಿ ಮನೆಯವರೆಲ್ಲ ತನ್ನ ಹಳಿದರು ಯಾರು ತನ್ನ ಹಿಡಿಯಲಾಗದು ಎಂದು ಒಣಜಂಭದಲ್ಲಿ ಓಡಾಡುವುದ ಕಂಡಾಗ ಮನೆಯವರೆಲ್ಲ ಇಲಿಯನ್ನು ಓಡಿಸಲು ಮಾಡುವ ಪ್ರಯತ್ನ ಅಷ್ಟಿಷ್ಟಲ್ಲ. ನೀವು ಕೂಡ ಹೀಗೆ ನಾನಾ ಪ್ರಯೋಗ ಮಾಡಿ ಬೇಸತ್ತು ಹೋಗಿದ್ದರೆ, ಈ ಲೇಖನ ನಿಮಗೆ ಸಹಕಾರಿಯಾಗಬಹುದು.
ಸಾಮಾನ್ಯವಾಗಿ ಮನೆಯ ಸುತ್ತಮುತ್ತ ಇಲಿ ಓಡಾಡಿ ಮಾಡುವ ಅವಾಂತರದಿಂದ ಬಳಲಿ ಇಲಿಯ ನಿಯಂತ್ರಣಕ್ಕೆ ಪಾಷಾಣ ಇಡುವುದು ಸಾಮಾನ್ಯ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇಲಿಯನ್ನ ಕೊಲ್ಲಲು ಇಟ್ಟ ಪಾಷಾಣ ಇಲಿಗಳ ಬದಲಿಗೆ ಬೇರೆ ಜೀವಿಗಳ ಪ್ರಾಣಕ್ಕೆ ಕುತ್ತು ತರುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಪಾಷಾಣದ ಬದಲು ಕಡಿಮೆ ಖರ್ಚಿನ ಈ ಕೆಲವು ತಂತ್ರಗಳನ್ನು ಅರಿತುಕೊಂಡರೆ ಬೇರೆ ಜೀವಿಗಳ ಪ್ರಾಣಕ್ಕೆ ಸಂಚಕಾರ ಬರುವುದನ್ನು ತಪ್ಪಿಸಬಹುದು. ಹಾಗಿದ್ರೆ ಆ ವಿಧಾನಗಳು ಯಾವುದು? ಎಂಬ ಮಾಹಿತಿ ಇಲ್ಲಿದೆ.
ರೈತರಿಗಂತು ಇಲಿಯ ಕಾಟ ತಪ್ಪಿದ್ದಲ್ಲ. ಬಿತ್ತನೆಯಿಂದ ಶುರುವಾಗಿ ಕೊಯ್ಲು ಮಾಡಿ ಮಾರುಕಟ್ಟೆಗೆ ಬೆಳೆ ತಲುಪಿಸುವವರೆಗೆ ಮೋದಕ ಪ್ರಿಯನ ಮೂಷಿಕದ ಅವಾಂತರ ಸಹಿಸಿಕೊಳ್ಳುವುದೇ ದೊಡ್ಡ ತ್ರಾಸದಾಯಕ ಸಂಗತಿ. ಇದರಿಂದ ರೈತರು ಕಂಗಾಲಾಗುವುದು ಕೂಡ ಇದೆ. ಇಲಿಗಳ ಕಾಟದಿಂದ ರೈತರಿಗೆ ಆಗುವ ಖರ್ಚು ದುಬಾರಿ ಎಂದರೂ ತಪ್ಪಾಗಲಾರದು. ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಕೈಗೆ ಬಂದ ಫಸಲನ್ನು ಕೊಯ್ಲು ಮಾಡಿ ಹೊಲದಲ್ಲಿಯೇ ಬಣವೆ ಹಾಕಿ ಸಂಗ್ರಹಿಸುವವರು ಕೂಡ ಇದ್ದಾರೆ.
ಹಗಲಿರುಳು ಶ್ರಮಿಸಿ ಮಳೆ, ಇಲ್ಲವೇ ಪ್ರಾಕೃತಿಕ ಕಾರಣಕ್ಕೆ ನಿರೀಕ್ಷಿತ ಫಸಲನ್ನು ಪಡೆಯಲು ಆಗದೇ ಇದ್ದಾಗ ಸಂಕಷ್ಟ ದಲ್ಲಿ ಇರುವ ಸಂದರ್ಭದಲ್ಲಿ ಇಲಿಗಳು ಕೂಡ ಸಮಸ್ಯೆ ಉಂಟು ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಬಹುತೇಕ ಇಲಿಗಳ ಆಹಾರವಾಗುವ ಸಂಭವ ಕೂಡ ಇದೆ.
ಹೀಗಾಗಿ ಇಲಿ ನಿಯಂತ್ರಣಕ್ಕೆ ರೈತರು ಪಾಷಾಣ ಇಡುವ ಅಭ್ಯಾಸ ಹೆಚ್ಚಿನವರಿಗೆ ಇದ್ದು ಇದರಿಂದ ತಕ್ಕ ಮಟ್ಟಿಗೆ ಇಲಿ ನಿಯಂತ್ರಣವಾಗುತ್ತದೆ. ಆದರೆ ಇಲಿಗಳು ತಮ್ಮ ಚಾಣಾಕ್ಷತನದಿಂದ ಪಾಷಾಣದ ವಾಸನೆಯನ್ನು ಬಹುಬೇಗ ಕಂಡು ಹಿಡಿದು ಬಿಡುತ್ತವೆ. ಹೀಗಾಗಿ ಇಲಿಗಳನ್ನು ಕೊಲ್ಲಲು ಪಾಷಾಣದಂತಹ ಅಪಾಯಕಾರಿ ವಿಧಾನಗಳಿಗಿಂತ ಜೈವಿಕ, ಸಾಂಪ್ರದಾಯಿಕ ವಿಧಾನಗಳು ಉತ್ತಮವಾಗಿದ್ದು ಸಾಕು ಪ್ರಾಣಿಗಳ ಜೀವಕ್ಕೆ ಕಂಟಕ ಉಂಟಾಗುವುದನ್ನು ತಡೆಯಬಹುದು.
ಇಲಿಗಳ ಕಾಟಕ್ಕೆ ನಸುಗುನ್ನಿ ಗಿಡ ಪರಿಣಾಮ ಬೀರುತ್ತದೆ. ಈ ಗಿಡದ ಕಾಯಿಯನ್ನು ತಂದು ಇಲಿಯ ಬಿಲದ ಹತ್ತಿರ ನಸುಗುನ್ನಿ ಕಾಯಿಯ ರೋಮ ತಾಗಿದ ತಕ್ಷಣ ತುರಿಕೆ ಉಂಟಾಗುತ್ತದೆ. ತುರಿಕೆಯ ಕಾಟ ತಾಳಲಾರದ ಇಲಿ, ಇತರೆ ಇಲಿಗಳನ್ನು ಕಚ್ಚುತ್ತಾ ಅಲ್ಲಿಂದ ಓಡಿ ಹೋಗುವ ಸಾಧ್ಯತೆ ಇದ್ದು, ಇಲಿಗಳು ಪರಸ್ಪರ ಕಾದಾಟ ನಡೆಸುವುದರಿಂದ ಆ ಜಾಗದಲ್ಲಿ ಸಾಕಷ್ಟು ಸಂಖ್ಯೆಯ ಇಲಿಗಳು ಸಾಯುತ್ತವೆ.
ಎಣ್ಣೆಯಲ್ಲಿ ಅದ್ದಿದ ಹತ್ತಿ ಅರಳೆ ಮದ್ದು ಅದೇ ರೀತಿ ದೀಪದ ಬತ್ತಿಗೆ ಬಳಕೆ ಮಾಡುವ ಹತ್ತಿ ಅರಳೆ ಕೂಡ ಇಲಿಗಳ ಸಾವಿಗೆ ಕಾರಣವಾಗುತ್ತದೆ. ಶೇಂಗಾ ಅಥವಾ ತೆಂಗಿನೆಣ್ಣೆಯಲ್ಲಿ ಅದ್ದಿದ ಹತ್ತಿ ಅರಳೆಯನ್ನು ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟರೆ ಎಣ್ಣೆಯ ಸುವಾಸನೆಗೆ ಓಡಿ ಬರುವ ಇಲಿಗಳು ಹತ್ತಿ ಅರಳೆಯನ್ನು ಬಹುಬೇಗನೆ ಸೇವಿಸುತ್ತವೆ. ಹತ್ತಿ ಅರಳೆ ತಿಂದ ಇಲಿಯ ಜೀರ್ಣಾಂಗ ವ್ಯೂಹ ಬ್ಲಾಕ್ ಆಗಿ ಸ್ವಲ್ಪ ಸಮಯದ ಬಳಿಕ ಸಾಯುತ್ತವೆ.
ಸುಟ್ಟ ಸುಣ್ಣವನ್ನು ಚೆನ್ನಾಗಿ ಪುಡಿ ಮಾಡಿ ಕಡ್ಲೆ ಹಿಟ್ಟು, ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಇಲಿಗೆ ನೀಡುವ ಮೂಲಕವೂ ಸುಲಭವಾಗಿ ಇಲಿಯ ಕಾಟದಿಂದ ತಪ್ಪಿಸಿಕೊಳ್ಳಬಹುದು. ಈ ಮಿಶ್ರಣವನ್ನು ತಿಂದಾಗ ಇಲಿಯ ಹೊಟ್ಟೆಗೆ ಸೇರುವ ಸುಣ್ಣ ಅರಳಿ ಶಾಖವನ್ನು ಬಿಡುಗಡೆಗೊಳಿಸುತ್ತದೆ. ಇದರಿಂದ ಇಲಿಯ ಹೊಟ್ಟೆಯು ಉಬ್ಬಿ ಸಾಯುತ್ತದೆ.
ಇಲಿ ಸಂಹಾರಕ್ಕೆ ಗ್ಲಿರಿಸೀಡಿಯಾ ಗಿಡ ಮುಖ್ಯ ಪಾತ್ರ ವಹಿಸುತ್ತದೆ. ಬೇಲಿ ಬದಿಯಲ್ಲಿ ಬೆಳೆಯುವ ಇದನ್ನು ಯಥೇಚ್ಛ ಸಸಾರಜನಕ ಹೊಂದಿರುವ ಕಾರಣಕ್ಕಾಗಿ ಗೊಬ್ಬರ ಗಿಡ ಎನ್ನಲಾಗುತ್ತದೆ. ಈ ಸಸ್ಯವನ್ನು ಗ್ರೀಕ್ನ ಜನರು ಇಲಿ-ಹೆಗ್ಗಣಗಳನ್ನು ನಿಯಂತ್ರಿಸಲು ಬಳಕೆ ಮಾಡಲಾಗುತ್ತದೆ. ಹೀಗಾಗಿ ಗ್ಲೆರಿಸಿಡಿಯಾ ಇಲಿ ಸಂಹಾರದ ಗುಣವನ್ನು ಒಳಗೊಂಡಿದೆ.
ಇಲಿಗಳ ಕಾಟ ಇರುವ ರೈತರು ಗೈರಿಸಿಡಿಯಾ ಗಿಡದ ಎಲೆ, ತೊಗಟೆಯನ್ನು ಅನ್ನದ ಜತೆಗೆ ಚೆನ್ನಾಗಿ ಕುದಿಸಿ ನಾಲ್ಕು ದಿನಗಳ ಕಾಲ ಪಾತ್ರೆಯಲ್ಲಿ ಭದ್ರವಾಗಿ ಮುಚ್ಚಿಡಬೇಕು. 1 ಕೆ.ಜಿ ಅಕ್ಕಿಯೊಂದಿಗೆ 250 ಗ್ರಾಂ ಗ್ಲಿರಿಸಿಡಿಯಾ ತೊಗಟೆಯನ್ನು ಬಳಕೆ ಮಾಡಬಹುದಾಗಿದ್ದು, ಸೊಪ್ಪನ್ನು ಚೆನ್ನಾಗಿ ಅರೆದು ಕೂಡ ಅನ್ನದಲ್ಲಿ ಮಿಶ್ರಣ ಮಾಡಬಹುದು. ಒಂದೆರಡು ದಿನಗಳಲ್ಲಿಯೇ ಇದರಿಂದ ಹಳಸಲು ವಾಸನೆ ಬರಲು ಪ್ರಾರಂಭವಾಗುತ್ತದೆ.
ಹಲವು ಬಾರಿ ಪಾಷಾಣ ಬೆರೆಸಿದ ಆಹಾರ ತಿಂದ ಇಲಿ, ಹೆಗ್ಗಣಗಳು ಬದುಕಿ ಉಳಿಯುವ ಸಾಧ್ಯತೆ ಇದೆ. ಪಾಷಾಣ ತಿಂದ ಇಲಿಗಳು ಚೆನ್ನಾಗಿ ನೀರು ಕುಡಿಯುತ್ತವೆ. ಇದರಿಂದ ಅವುಗಳ ಜೀರ್ಣಾಂಗದ ಮೇಲೆ ವಿಷ ಪರಿಣಾಮ ಬೀರದು. ಆದರೆ ಗ್ಲಿರಿಸೀಡಿಯಾ ಸೇವಿಸಿದ ಇಲಿ, ಹೆಗ್ಗಣಗಳು ನೀರು ಕುಡಿದರೆ ಮತ್ತಷ್ಟು ಬೇಗ ಸಾಯುತ್ತವೆ. ಏಕೆಂದರೆ, ಗ್ಲಿಸೀಡಿಯಾ ಅಷ್ಟು ಪರಿಣಾಮಕಾರಿಯಾಗಿದೆ. ಗ್ಲಿರಿಸೀಡಿಯಾ ಸೊಪ್ಪು ಮಿಶ್ರಿತ ಅನ್ನದ ಉಂಡೆಯನ್ನು ಇಲಿ, ಹೆಗ್ಗಣ ತಿಂದಿದ್ದರೂ ಕೂಡ ಇಲಿಗಳು ಸಾಯುತ್ತವೆ.
ಈ ಬಳಿಕ ಈ ಮಿಶ್ರಣವನ್ನು ಉಂಡೆಗಳನ್ನಾಗಿ ಮಾಡಿ ಇಲಿ ಹೆಗ್ಗಣಗಳ ಬಿಲಗಳ ಬಳಿ ಇಲ್ಲವೇ ಅವುಗಳು ಓಡಾಡುವ ದಾರಿಯಲ್ಲಿ ಇಟ್ಟರೆ ಇದನ್ನು ತಿಂದ ಇಲಿಗಳು ಸಾಯುತ್ತವೆ. ಇಲಿಗಳ ಹೊರತು ಬೆಕ್ಕು, ನಾಯಿಯಂತಹ ಇತರೆ ಸಾಕು ಪ್ರಾಣಿಗಳಿಗೆ ಇದರಿಂದ ಯಾವುದೇ ಕಂಟಕ ಎದುರಾಗದು. ಗ್ಲಿರಿಸೀಡಿಯಾ ಮಿಶ್ರಿತ ಆಹಾರ ಸೇವಿಸುವುದರಿಂದ ಇಲಿ-ಹೆಗ್ಗಣ, ಅಳಿಲುಗಳು ಸಾಯಬಹುದು.
ಇಲಿಗಳ ನಿಯಂತ್ರಣಕ್ಕಾಗಿ ರೈತರು ಕೇವಲ ವಿಷ-ಪ್ರಾಷಣದ ಬದಲಿಗೆ ಅನ್ಯಮಾರ್ಗ ಬಳಸಿ ಸುಲಭದ ಪ್ರಯೋಗಗಳನ್ನು ಮಾಡಬಹುದಾಗಿದೆ. ಕೆಲವೊಮ್ಮೆ ಪ್ರದೇಶದ ಹವಾಗುಣ, ಮಣ್ಣು, ಬೆಳೆ ಪದ್ಧತಿ ಬದಲಾಗುವುದರಿಂದ ಈ ಕ್ರಮಗಳನ್ನು ಅನುಸರಿಸುವ ಇಲ್ಲವೇ ಅಳವಡಿಸಿಕೊಳ್ಳುವ ಮುನ್ನ ರೈತರು ಕೃಷಿ ಇಲಾಖೆ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.