Covid New Variant BF.7: ಕೊರೊನಾ ಉಪತಳಿ ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ: ಆರ್‌.ಅಶೋಕ್

ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿತ್ತು. ಇನ್ನೇನು ಕೊರೋನ ಭಯದಿಂದ ಚೇತರಿಕೆ ಕಾಣುವಷ್ಟರಲ್ಲಿ ಕೊರೋನ ದ BF.7 ಉಪತಳಿ ಕಂಡು ಬಂದಿದೆ. ಈ ಕುರಿತಾಗಿ ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಮುಂಜಾಗ್ರತೆಗೆ ಮುಂದಾದ ಕೇಂದ್ರ ಸರ್ಕಾರ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ನಿಂದ ಅಂತರರಾಷ್ಟ್ರೀಯ ಆಗಮನಕ್ಕೆ ಆರ್ಟಿ-ಪಿಸಿಆರ್ ಕಡ್ಡಾಯವಾಗಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೂಚನೆ ನೀಡಿದ್ದರು.

ಅದಲ್ಲದೆ ಈ ಮೇಲಿನ ದೇಶಗಳಿಂದ ಬಂದ ಯಾವುದೇ ಪ್ರಯಾಣಿಕರಿಗೆ ರೋಗಲಕ್ಷಣಗಳು ಕಂಡುಬಂದರು ಅಥವಾ ಕೋವಿಡ್ ಪಾಸಿಟಿವ್ ಎಂದು ಕಂಡುಬಂದರೆ ಯಾವುದೇ ಆಕ್ಷೇಪ ಇಲ್ಲದೆ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದರು.

ಇದೀಗ ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೊನಾ ಬಿಎಫ್‌ 7 ಉಪತಳಿಯಿಂದ ಸೋಂಕಿಗೆ ಒಳಗಾಗುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಘೋಷಣೆ ಮಾಡಿದೆ.

ವಿದೇಶಗಳಿಂದ ವಿಮಾನಯಾನ ಮೂಲಕ ಕರ್ನಾಟಕಕ್ಕೆ ಆಗಮಿಸಿದ 12 ಪ್ರಯಾಣಿಕರಲ್ಲಿ ಕೊರೊನಾ ದೃಢಪಟ್ಟಿದೆ. ಅವರ ಗಂಟಲು ಮಾದರಿಯನ್ನು ವೈರಸ್ ತಳಿ ಪತ್ತೆ ಪ್ರಯೋಗಾಲಯಕ್ಕೆ (ಜೀನೋಮ್ ಸಿಕ್ವೆನ್ಸಿಂಗ್ ಲ್ಯಾಬ್) ಕಳುಹಿಸಲಾಗಿದೆ. ಅದರ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಈ ಉಪತಳಿ ಸೋಂಕು ಕಂಡ ಬಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದಲ್ಲಿ ಎರಡು ಆಸ್ಪತ್ರೆಗಳನ್ನು ನಿಗದಿಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಸದ್ಯ ಎಲ್ಲಾ ಶಂಕಿತ ಪ್ರಕರಣಗಳನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿಟ್ಟಿ ಚಿಕಿತ್ಸೆ ನೀಡಲಾಗುವುದು. ವೈದ್ಯರು ಅವರ ಮೇಲೆ ನಿಗವಹಿಸಲಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಲ್ಲಿ ಶೇ.ಎರಡರಷ್ಟು ಪ್ರಯಾಣಿಕರಿಗೆ ಯಾದೃಚ್ಛಿಕ ಪರೀಕ್ಷೆ ನಡೆಸುತ್ತಿದ್ದೇವೆ. ಹೊಸ ರೂಪಾಂತರಗಳೊಂದಿಗೆ ಎಲ್ಲಾ ದೃಢಪಡಿಸಿದ ಪ್ರಕರಣಗಳಿಗೆ ಈ ಎರಡು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಕಣ್ಗಾವಲು ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಜಿಲ್ಲೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧತೆಯ ಮೇಲ್ವಿಚಾರಣೆ ನಡೆಸಲಾಗಿದೆ. ಆಸ್ಪತ್ರೆ, ಆಮ್ಲಜನಕ ಸ್ಥಾವರಗಳು ಮತ್ತು ಐಸಿಯು ವೆಂಟಿಲೇಟರ್‌ಗಳ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಸದ್ಯ ಕರ್ನಾಟಕದಲ್ಲಿ ಶೇ.0.03ನಷ್ಟು ಸಕ್ರಿಯ ಕೇಸ್‌ಗಳು ಇವೆ. ಈವರೆಗೆ ಕೊರೊನಾ ಹೊಸ ಉಪತಳಿ ಬಿಎಫ್‌ 7ಪತ್ತೆ ಆಗಿಲ್ಲ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಎಲ್ಲ ಅಗತ್ಯ ಮುಂಜಾಗ್ರತಾ ಹಾಗೂ ಸೋಂಕು ನಿಯಂತ್ರಣದ ಕ್ರಮ ಕೈಗೊಳ್ಳೂತ್ತಿದೆ. ಮಾಸ್ಕ್ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ ಹೊಸ ಕೋವಿಡ್ ಮಾರ್ಗ ಸೂಚಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

ಈಗಾಗಲೇ ಕರ್ನಾಟಕಕ್ಕೆ ಆಗಮಿಸಿದ 12 ಜನರ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಸಿಟಿ ಸ್ಕೋರ್ 25 ಕ್ಕಿಂತ ಕಡಿಮೆ ಇರುವ ಯಾವುದೇ ರೋಗಿಗಳ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್‌ ಗೆ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ಅದಲ್ಲದೆ ಸೋಂಕಿತ ವ್ಯಕ್ತಿಗಳಿಂದ ಇನ್ನೊಂದು ವ್ಯಕ್ತಿಗೆ ಸೋಂಕು ಹರಡದಂತೆ ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುವಂತೆ ಆದೇಶ ನೀಡಲಾಗಿದೆ.

Leave A Reply

Your email address will not be published.