ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ರಹಸ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ
ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!! ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿನಿಮಾ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಆರ್ಭಟ ಕಮ್ಮಿ ಆಗಿಲ್ಲ.
ಈ ಸಿನಿಮಾದಲ್ಲಿ ಅಡಕವಾಗಿರುವ ಅನೇಕ ಸೂಕ್ಷ್ಮ ವಿಚಾರಗಳು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದರಲ್ಲಿ ಕೂಡ ದೈವದ ಪಾತ್ರ ನೋಡುಗರ ಮೈ ಮನವೆಲ್ಲ ಪುಳಕಗೊಳ್ಳುವಂತೆ ಜೊತೆಗೆ ಅರಿವಿಲ್ಲದೆ ದೈವದ ಮೇಲಿನ ಭಕ್ತಿಯನ್ನು ಬಿಂಬಿಸುತ್ತದೆ. ಈ ಸಿನೆಮಾ ಎಲ್ಲರ ಮೇಲೆ ಪ್ರಭಾವ ಬೀರಿದೆ ಎಂದರೆ ತಪ್ಪಾಗದು. ಕಾಂತಾರ ಸಿನಿಮಾವನ್ನು ಒಂದು ಕೋಟಿಗೂ ಅಧಿಕ ಮಂದಿ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿರುವುದು ಇದೀಗ ಮತ್ತೊಂದು ದಾಖಲೆಯಾಗಿದೆ.
ಕಾಂತಾರ (Kantara) ಸಿನಿಮಾ ಸೆಪ್ಟೆಂಬರ್ ಕೊನೆಯಲ್ಲಿ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ಎಲ್ಲೆಡೆ ಹಬ್ಬುತ್ತಿದ್ದಂತೆ ಕೇವಲ ಎರಡೇ ವಾರದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹಿಟ್ ಲಿಸ್ಟ್ ಗೆ ಸೇರ್ಪಡೆಯಾಗಿ ದಿನಕ್ಕೊಂದು ದಾಖಲೆ ಸೃಷ್ಟಿಸುತ್ತಾ ಬಂದಿದೆ.
ಈ ಸಿನಿಮಾದಲ್ಲಿ ರಿಷಬ್ (Rishab Shetty) ಅವರ ಅಮೋಘ ಅಭಿನಯ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೊನೆಯ 20 ನಿಮಿಷದ ಕ್ರೈಮ್ಯಾಕ್ಸ್ನಲ್ಲಿ ರಿಷಬ್ ಪಾತ್ರದ ಅಭಿನಯ ನೋಡುಗರನ್ನು ಬೆಕ್ಕಸ ಬೆರಗಾಗಿಸುತ್ತದೆ. ದೈವದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ರಿಷಬ್ ಅವರ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಮೂಕವಿಸ್ಮಿತ ರಾಗಿದ್ದಾರೆ.
ಇಡೀ ಚಿತ್ರವನ್ನು ಎಲ್ಲ ಭಾಷಿಗರು ತಮ್ಮದೆಂದು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ನೋಡಿದ ಗಣ್ಯಾತಿ ಗಣ್ಯರು ಕೂಡ ರಿಷಬ್ ಶೆಟ್ಟಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ರಿಷಬ್ ಅವರ ನಟನೆ ಮೆಚ್ಚಿಕೊಂಡು ಅವರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲ ಚಿನ್ನದ ಸರವನ್ನು ಕೂಡ ಉಡುಗೊರೆ ನೀಡಿದ್ದಾರೆ.
ಈ ಸಿನೆಮಾದ ಕೇಂದ್ರಬಿಂದು ದೈವದ ಆವಾಹನೆ, ಕೊನೆಯ 20 ನಿಮಿಷದ ದೃಶ್ಯವಾಗಿದ್ದು, ಈ ಕ್ರೈಮ್ಯಾಕ್ಸ್ ಶೂಟಿಂಗ್ ತುಂಬಾ ಕಠಿಣವಾಗಿತ್ತು ಎನ್ನಲಾಗಿದೆ. ಕಾಂತಾರ ಕೈಮ್ಯಾಕ್ಸ್ನ ಗುಟ್ಟನ್ನು ಇದೀಗ ರಿಷಬ್ ಕೊನೆಗೂ ರಟ್ಟು ಮಾಡಿದ್ದಾರೆ. ಸಿನಿಮಾ ರಿಲೀಸ್ ಆಗಿ ಮೂರು ತಿಂಗಳು ಕಳೆದ ಬಳಿಕ ಅಸಲಿ ಸತ್ಯವನ್ನು ರಿಷಬ್ ಬಹಿರಂಗಪಡಿಸಿದ್ದು, ನೆಟ್ಫಿಕ್ಸ್ ಸಂದರ್ಶನದಲ್ಲಿ ಮಾತನಾಡಿರುವ ರಿಷಬ್, ಸಿನಿಮಾ ನೋಡಿದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೆ ಉಳಿದ ದೈವದ ಪಾತ್ರದಲ್ಲಿ ಕಾಣಿಸಿಕೊಂಡು ಮಂತ್ರಮುಗ್ಧರನ್ನಾಗಿಸಿದ ಕೈಮ್ಯಾಕ್ಸ್ ಹಿಂದಿನ ಅಚ್ಚರಿಯ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ.
20 ನಿಮಿಷದ ಕೈಮ್ಯಾಕ್ಸ್ಗಾಗಿ ರಿಷಬ್ ಅವರು ತುಂಬಾ ಕಷ್ಟಪಟ್ಟಿದ್ದು, ಉರಿಯೋ ದೊಣ್ಣೆಗಳಿಂದ ತುಂಬಾ ಏಟುಗಳ ಬಿಸಿಯನ್ನು ಎದುರಿಸಿದ್ದಾರೆ. ವಿಲನ್ ಗಳು ಕೊಟ್ಟ ಬೆಂಕಿ ದೊಣ್ಣೆಯ ಏಟಿಗೆ ರಿಷಬ್ ಬೆನ್ನಿನ ಭಾಗ ಬೆಂದುಬೆನ್ನಿನ ಮೇಲೆ ಬೊಬ್ಬೆಗಳು ಎದ್ದು ಆ ಭಾಗ ಕಿತ್ತು ಕೊಂಡಂತೆ ಆಗಿತ್ತು. ಬೆನ್ನು ಉರಿಯ ತೀವ್ರತೆ ಎಷ್ಟಿತ್ತೆಂದರೆ ರಿಷಬ್ ಅವರ ಮುಂದೆ ಯಾರೇ ಬಂದರು ಕೂಡ ಸಾಯಿಸಬೇಕು ಎನ್ನುವಷ್ಟು ಕೋಪ ಬಂದಿತ್ತು ಎಂಬ ಅಚ್ಚರಿಯ ಸಂಗತಿ ಹೇಳಿದ್ದು, ಆ ಕೋಪ-ತಾಪ ತೆರೆ ಮೇಲೆ ನೈಜವಾಗಿ ಮೂಡಿಬಂದಿದೆ ಎಂದು ರಿಷಬ್ ಅವರು ಹೇಳಿದ್ದಾರೆ.
ಗುಳಿಗದ ಸೀಕ್ವೆನ್ಸ್ ನಲ್ಲಿ ಡಿವೈನ್ ಸ್ಟಾರ್ ಅಭಿನಯ ನೋಡುಗರನ್ನು ಮೂಕ ವಿಸ್ಮಿತಗೊಳಿಸಿದೆ. ಇಲ್ಲಿ ಅವರ ಶ್ರದ್ಧೆಯನ್ನು ಮೆಚ್ಚಲೇ ಬೇಕು. ಕೇವಲ ಅದೊಂದು ಸೀನ್ಗಾಗಿ ರಿಷಬ್ ಅವರು ಅಷ್ಟೆಲ್ಲ ಹರಸಾಹಸ ಪಡಬೇಕಾದ ಅವಶ್ಯಕತೆ ಇರಲಿಲ್ಲ ಜೊತೆಗೆ ವಿಎಫೆಕ್ಸ್ ಯೂಸ್ ಮಾಡಬಹುದಾಗಿತ್ತು. ಬಾಡಿ ಡಬಲ್ ಮಾಡಿಸಬಹುದಾಗಿತ್ತು. ಆದರೆ, ಕಾಂತಾರ ಪ್ರತಿ ದೃಶ್ಯವೂ ನೈಜವಾಗಿರಬೇಕು ಎನ್ನುವ ಧ್ಯೇಯ ಉದ್ದೇಶದಿಂದ ರಿಷಬ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನೋವುಂಡು ಶ್ರದ್ಧಾಭಕ್ತಿಯಿಂದ ಕೆಲಸ ಮಾಡಿದ್ದು, ರಿಷಬ್ ಅವರ ಅಮೋಘ ಅಭಿನಯ ಜೊತೆಗೆ ಭಕ್ತಿ ಭಾವಕ್ಕೆ ಪ್ರತಿಫಲ ದೊರೆತಿದೆ.