ಅಂಚೆ ಇಲಾಖೆ ಪ್ರೀಮಿಯಂ ಉಳಿತಾಯ ಖಾತೆಯ ಬಗ್ಗೆ ಗೊತ್ತೇ ? ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಜನರು ಖರ್ಚಿಗಿಂತ ಹೆಚ್ಚು ಉಳಿತಾಯ ಮಾಡಲು ಯೋಚಿಸುತ್ತಾರೆ. ಹಾಗಾಗಿ ಹಣವನ್ನು ವಿವಿಧ ರೂಪಗಳಲ್ಲಿ ಉಳಿತಾಯ ಮಾಡುತ್ತಾರೆ. ಅದರಲ್ಲಿ ಅಂಚೆ ಇಲಾಖೆ ಕೂಡ ಒಂದು. ಹೆಚ್ಚಿನ ಜನರು ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಹೀಗಾಗಿ, ಅಂಚೆ ಇಲಾಖೆಯ ಯೋಜನೆಗಳು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತವೆ.
ದೀರ್ಘಕಾಲದ ಉಳಿತಾಯಕ್ಕೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (ಐಪಿಪಿಬಿ) ಉಳಿತಾಯ ಯೋಜನೆಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ಅಂಚೆ ಕಚೇರಿಯ ಅಂತಹ ಯೋಜನೆಗಳಲ್ಲಿ ಪ್ರೀಮಿಯಂ ಉಳಿತಾಯ ಖಾತೆ ಕೂಡ ಒಂದಾಗಿದೆ. ಸಾಮಾನ್ಯ ಉಳಿತಾಯ ಖಾತೆಯ ಗ್ರಾಹಕರಿಗಿಂತ ಈ ಖಾತೆಯಡಿ ಅಂಚೆ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಇನ್ನೂ, ಅಂಚೆ ಇಲಾಖೆ ಪ್ರೀಮಿಯಂ ಉಳಿತಾಯ ಖಾತೆಯಲ್ಲಿ ಯಾರು ಹೂಡಿಕೆ ಮಾಡಬಹುದು? ಈ ಖಾತೆ ತೆರೆದರೆ ಯಾವೆಲ್ಲ ಪ್ರಯೋಜನಗಳಿವೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರೀಮಿಯಂ ಉಳಿತಾಯ ಖಾತೆಯ ಪ್ರಯೋಜನಗಳೇನು?
ಉಳಿದ ಬ್ಯಾಂಕ್ಗಳಂತೆ ಮನೆ ಬಾಗಿಲಿಗೆ ಸೌಲಭ್ಯವೂ ದೊರೆಯುತ್ತದೆ. ಅನಿಯಮಿತ ಹಣವನ್ನು ಹಿಂಪಡೆಯಲು ಮತ್ತು ಜಮಾ ಮಾಡುವ ಸೌಲಭ್ಯವಿದೆ. ವರ್ಚುವಲ್ ಡೆಬಿಟ್ ಕಾರ್ಡ್ ಮೂಲಕ ಮಾಡಿದ ವಹಿವಾಟಿಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ಯಾವುದೇ ರೀತಿಯ ಬಿಲ್ ಪಾವತಿಸಲು ಕ್ಯಾಶ್ಬ್ಯಾಕ್ ಕೂಡ ಲಭ್ಯವಿದೆ. ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಕೆ ಮೇಲೆ ಕ್ಯಾಶ್ ಬ್ಯಾಕ್ ಸಿಗಲಿದೆ.
ಈ ಪ್ರೀಮಿಯಂ ಉಳಿತಾಯ ಖಾತೆಯನ್ನು 10 ವರ್ಷ ಮೇಲ್ಪಟ್ಟವರು ತೆರೆಯಬಹುದಾಗಿದೆ. ಆದರೆ, ಕಡ್ಡಾಯವಾಗಿ ಕೆವೈಸಿಯನ್ನು ಮಾಡಿಸಬೇಕು. ಹಾಗೂ ಖಾತೆಯಲ್ಲಿ ವಾರ್ಷಿಕ ರೂ. 2,000 ಮೊತ್ತ ಇರಬೇಕು. ಹೊಸ ಗ್ರಾಹಕರು ಮತ್ತು ಈಗಾಗಲೇ ಇರುವ ಗ್ರಾಹಕರು ಕೂಡ ಈ ಖಾತೆ ತೆರೆಯಲು 149ರೂ. ಶುಲ್ಕವನ್ನು ಪಾವತಿಸಬೇಕು. ಜೊತೆಗೆ ಎಲ್ಲಾ ಗ್ರಾಹಕರಿಗೂ ವಾರ್ಷಿಕ ಚಂದಾದಾರಿಕೆ ನವೀಕರಣ ಶುಲ್ಕ 99ರೂ. ಆಗಿರುತ್ತದೆ. ಈ ಉಳಿತಾಯ ಖಾತೆಯಲ್ಲಿ 1ಲಕ್ಷ ರೂ. ವರೆಗಿನ ಮೊತ್ತಕ್ಕೆ ಶೇ.2ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಹಾಗೇ 2ಲಕ್ಷ ರೂ. ವರೆಗಿನ ಮೊತ್ತಕ್ಕೆ ಶೇ.2.25 ಬಡ್ಡಿದರ ವಿಧಿಸಲಾಗುತ್ತದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟವಾದ ಮಾಸಿಕ ಮೊತ್ತ ಸಿಗುತ್ತದೆ. ಈ ಮಾಸಿಕ ಆದಾಯ ಖಾತೆ (MIS) ತೆರೆಯಲು ಕನಿಷ್ಠ 1000 ರೂ. ಹೂಡಿಕೆ ಮಾಡಬೇಕು. ನಂತರವೇ ಖಾತೆದಾರರು 1000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಡಬೇಕು. ಒಂದು ಖಾತೆಯಲ್ಲಿ ಗರಿಷ್ಠ ಹೂಡಿಕೆ ಮಿತಿ 4.5ಲಕ್ಷ ರೂ. ಆಗಿದ್ದು, ಜಂಟಿ ಖಾತೆಗಳಲ್ಲಿ ಗರಿಷ್ಠ ಹೂಡಿಕೆ ಮಿತಿ 9 ಲಕ್ಷ ರೂ. ಆಗಿದೆ.