ನಡು ರಸ್ತೆಯಲ್ಲಿ ಪ್ರೇಯಸಿಗೆ ಹೀನಾಯವಾಗಿ ಥಳಿಸಿದ ಪ್ರೇಮಿ | ವೀಡಿಯೋ ವೈರಲ್, ಯುವಕನ ಮನೆ ಬುಲ್ಡೋಜರ್‌ನಿಂದ ಧ್ವಂಸ
ಕೆಲವೊಮ್ಮೆ ದಬ್ಬಾಳಿಕೆ ಅನ್ನೋದು ಯಾರಿಗೆ ಯಾವ ರೀತಿ ಆದರೂ ಆಗಬಹುದು. ಹಾಗೆಯೇ ಪ್ರೀತಿ ಅನ್ನೋದು ಕೆಲವರ ಪಾಲಿಗೆ ದಬ್ಬಾಳಿಕೆ ರೂಪ ತಾಳುತ್ತಿದೆ. ಹೌದು ಪ್ರೇಯಸಿ ಒಬ್ಬಳು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ ಕಾರಣ ಆಕೆಯನ್ನು ಯುವಕನು ಮನಸೋ ಇಚ್ಛೆ ತಳಿಸಿದ ಘಟನೆ ಬೆಳಕಿಗೆ ಬಂದಿದೆ.
24 ವರ್ಷದ ಪಂಕಜ್ 19 ವರ್ಷದ ಪ್ರೇಯಸಿಯನ್ನು ಥಳಿಸುವ ವಿಡಿಯೋ ವೈರಲ್ ಆಗಿದ್ದು ಸದ್ಯ ಘಟನೆ ಬೆನ್ನಲ್ಲೇ, ಆರೋಪಿ ಪಂಕಜ್ ತ್ರಿಪಾಠಿಗೆ ಸೇರಿದ ಅಕ್ರಮ ಮನೆಯನ್ನು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದ ಆದೇಶದಂತೆ ನೆಲಸಮಗೊಳಿಸಲಾಗಿದೆ.
ಈ “ಕಿಡಿಗೇಡಿಯು ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಆತನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗಿದ್ದು ಹಾಗೆಯೇ ಆತನ ಅನಧಿಕೃತ ಮನೆಯನ್ನು ನೆಲಸಮಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಮೌಗಂಜ್ ಪೊಲೀಸ್ ಠಾಣೆಯ ಟಿಐ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಶಿವರಾಜ್ ಚೌಹಾಣ್ ತಿಳಿಸಿದ್ದಾರೆ .
ಅದಲ್ಲದೆ “ಮಧ್ಯಪ್ರದೇಶದ ನೆಲದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಯಾರೊಬ್ಬರನ್ನೂ ಬಿಡುವುದಿಲ್ಲ” ಎಂದು ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.
ಯುವತಿಯು ತನ್ನನ್ನು ಮದುವೆಯಾಗುವಂತೆ ಆರೋಪಿಯನ್ನು ಕೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದರಿಂದ ಕಿರಿಕಿರಿಗೆ ಒಳಗಾದ ಆರೋಪಿ, ಆಕೆಗೆ ಒದ್ದು, ಮುಖಕ್ಕೆ ಪದೇ ಪದೇ ಬಾರಿಸಿದ್ದಾನೆ.
ಈ ಅಹಿತಕರ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಆರೋಪಿ ವಿರುದ್ಧ ಕ್ರಮಕ್ಕೆ ಆದೇಶ ನೀಡಿತ್ತು. “ರೇವಾದ ಮೌಗಂಜ್ ಪ್ರದೇಶದಲ್ಲಿ ರಾಜ್ಯ ಹೆಣ್ಣುಮಗಳ ಜತೆ ನಡೆದ ದುರಂತದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ” .
ಇದೀಗ ಯುವತಿ ತನಗೆ ಹೊಡೆದವನನ್ನು ಮನ್ನಿಸಿದ್ದು, ವಿಡಿಯೋ ಚಿತ್ರೀಕರಿಸಿದವನ ವಿರುದ್ಧವೇ ದೂರು ನೀಡಿದ್ದಾಳೆ. ಆರೋಪಿಯನ್ನು ಐಪಿಸಿ ಸೆಕ್ಷನ್ 151ರ ಅಡಿ ಬಂಧಿಸಲಾಗಿತ್ತು. ಆದರೆ ಯುವತಿ ದೂರು ಕೊಡಲು ನಿರಾಕರಿಸಿದ್ದರಿಂದ ಆತನನ್ನು ಬಿಡುಗಡೆ ಮಾಡಲಾಗಿದೆ. ತನ್ನ ಮೇಲಿನ ಹಲ್ಲೆಯ ವಿಡಿಯೋ ಮಾಡಿ, ಅದನ್ನು ಹಂಚಿಕೊಂಡ ವ್ಯಕ್ತಿ ವಿರುದ್ಧ 19 ವರ್ಷದ ಯುವತಿ ದೂರು ನೀಡಿದ್ದು, ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಸದ್ಯ ವಿಡಿಯೋದಲ್ಲಿ ಕಾಣಿಸಿದ ವ್ಯಕ್ತಿ ಮೌಗಂಜ್ ಪ್ರದೇಶದ ಧೇರಾ ಗ್ರಾಮದ ನಿವಾಸಿಯಾಗಿದ್ದು, ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.