ನಿಮ್ಮ ದೇಹದ ತೂಕ ಇಳಿಸಿಕೊಳ್ಳಬೇಕೇ? ಹಾಗಾದ್ರೆ ಈ ಜ್ಯೂಸ್ ಕುಡಿಯಿರಿ
ಕೆಲವರು ತೂಕ ಇಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡುತ್ತಾರೆ. ವರ್ಕ್ ಔಟ್, ಡಯಟ್ ಹೀಗೇ ಹಲವಾರು ವಿಧಾನಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲಿ ನೀಡಿರುವ ಕೆಲವು ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ನಿಮ್ಮ ಕೂಡ ತೂಕ ಇಳಿಕೆಗೆ ಸಹಕಾರಿಯಾಗಿದೆ. ಜ್ಯೂಸ್ ಕುಡಿಯುವುದರಿಂದ ಹೆಚ್ಚಿನ ಪ್ರಮಾಣ ಖನಿಜಾಂಶಗಳು, ವಿಟಮಿನ್ ಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ದೇಹಕ್ಕೆ ಲಭ್ಯವಾಗುತ್ತದೆ. ಇದು ಚಯಾಪಚಯ ಕ್ರಿಯೆಗೆ ವೇಗ ನೀಡುವ ಮೂಲಕ ಕ್ಯಾಲರಿ ದಹಿಸಲು ನೆರವಾಗುತ್ತದೆ. ಇನ್ನೂ
ತೂಕ ಇಳಿಸಲು ಸಹಕಾರಿಯಾದ ಜ್ಯೂಸ್ ಯಾವುದು? ಅದರಿಂದಾಗುವ ಉಪಯೋಗ ಏನು? ಎಂಬುದನ್ನು ತಿಳಿಯೋಣ.
ದಾಳಿಂಬೆ ಜ್ಯೂಸ್ : ಈ ಜ್ಯೂಸ್ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಹಾಗೇ ತೂಕ ಇಳಿಸಲು ಕೂಡ ಸಹಕಾರಿಯಾಗಿದೆ. ದಾಳಿಂಬೆಯಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್, ಪಾಲಿಫೆನಾಲ್ ಮತ್ತು ಲಿನೊಲೆನಿಕ್ ಆಮ್ಲವಿದ್ದು, ಇದು ಚಯಾಪಚಾಯ ಕ್ರಿಯೆಗೆ ವೇಗ ನೀಡುತ್ತದೆ ಮತ್ತು ಕೊಬ್ಬು ಕರಗಲು ಸಹಕಾರಿಯಾಗಿದೆ. ಹಾಗಾಗಿ ನಿಮ್ಮ ದೈನಂದಿನ ಆಹಾರದ ಜೊತೆಗೆ ಈ ದಾಳಿಂಬೆ ಜ್ಯೂಸ್ ಅನ್ನು ಸೇರಿಸಿ.
ಬೀಟ್ರೂಟ್ ಜ್ಯೂಸ್ : ಬೀಟ್ರೂಟ್ ತುಂಬಾ ಪೌಷ್ಟಿಕಾಂಶವುಳ್ಳ ತರಕಾರಿಯಾಗಿದೆ. ಬೀಟ್ರೂಟ್ ರಸವು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ತುಂಬಾ ಉಪಯುಕ್ತವಾಗಿದೆ. ಇದು ಫೈಬರ್, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು, ಇದರಲ್ಲಿ ಕ್ಯಾಲೋರಿ ತುಂಬಾ ಕಡಿಮೆಯಿದೆ. ಹಾಗಾಗಿ ಇದರ ಜ್ಯೂಸ್ ನಿಮ್ಮ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.
ಬಾಟಲ್ ಸೋರೆಕಾಯಿ ಜ್ಯೂಸ್ : ಬಾಟಲ್ ಸೋರೆಕಾಯಿ ಜ್ಯೂಸ್ ಆರೋಗ್ಯಕರ ಉತ್ತಮ ಪಾನೀಯವಾಗಿದೆ. ತೂಕ ಇಳಿಕೆಗೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದಿಷ್ಟೇ ಅಲ್ಲದೆ, ಬಾಟಲ್ ಸೋರೆಕಾಯಿ ಜ್ಯೂಸ್ ಕೊಲೆಸ್ಟ್ರಾಲ್ ಮತ್ತು ಮಧುಮೇಹ ರೋಗಿಗಳಿಗೆ ಉಪಯುಕ್ತವಾಗಿದೆ.
ಕ್ಯಾರೆಟ್ ಜ್ಯೂಸ್ : ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯ ತರಕಾರಿಯಾಗಿದೆ. ಹಾಗೇ ನೇತ್ರ ಸಂಬಂಧಿ ಕಾಯಿಲೆಗೆ ಇದರ ಜ್ಯೂಸ್ ಕುಡಿದರೆ ಉತ್ತಮ. ಕ್ಯಾರೆಟ್ ಜ್ಯೂಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನೂ, ಈ ಜ್ಯೂಸ್ ನಿಂದ ದೇಹಕ್ಕೆ ಸಾಕಷ್ಟು ಫೈಬರ್, ವಿಟಮಿನ್ ಮತ್ತು ಮಿನರಲ್ಸ್ ಸಿಗುತ್ತದೆ. ಇದರಿಂದ ಪಿತ್ತರಸ ಸ್ರವಿಸುವಿಕೆಯು ಸುಧಾರಿಸುತ್ತದೆ. ಆಗ ಕೊಬ್ಬು ಸುಡುವಿಕೆ ಪ್ರಾರಂಭವಾಗುತ್ತದೆ.
ಕಿತ್ತಳೆ ಜ್ಯೂಸ್ : ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುವ ಶಕ್ತಿಯನ್ನು ಪಡೆದಿದೆ. ಇದರಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪರಿಣಾಮಕಾರಿ ಪೋಷಕಾಂಶವಾಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಕೊಬ್ಬನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ.