ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಪ್ಪಲಿ ಎಸೆದವರ ಬಂಧನ | ಚಪ್ಪಲಿ ಎಸೆತಕ್ಕೆ ಕಾರಣವೇನು?
ಹೊಸಪೇಟೆಯಲ್ಲಿ ‘ಕ್ರಾಂತಿ’ ಸಿನಿಮಾ ಹಾಡನ್ನು ಬಿಡುಗಡೆ ಮಾಡುವುದಕ್ಕೆ ತೆರಳಿದ್ದ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಪ್ರಕರಣ ನಡೆದ ಬಳಿಕ ದರ್ಶನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದರು. ಇಷ್ಟೇ ಅಲ್ಲದೆ, ಚಪ್ಪಲಿ ಎಸೆದು ತಮ್ಮ ನೆಚ್ಚಿನ ನಟನಿಗೆ ಅವಮಾನ ಮಾಡಿದ ಆರೋಪಿತರನ್ನು ಬಂಧಿಸುವಂತೆ ಪೊಲೀಸರಿಗೆ ದೂರು ಸಲ್ಲಿಸಿ ಒತ್ತಡ ಕೂಡ ಹೇರಲಾಗಿತ್ತು.
ಇದೇ ತಿಂಗಳ 18ನೇ ತಾರೀಕು ಹೊಸಪೇಟೆಯಲ್ಲಿ ‘ಕ್ರಾಂತಿ’ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಮಾಡುವ ಸಮಾರಂಭಕ್ಕೆ ದರ್ಶನ್ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದರು. ಈ ವೇಳೆ, ನಗುತ್ತಲೇ ಪರ್ವಾಗಿಲ್ಲ ಬಿಡು ಚಿನ್ನಾ!! ಎಂದು ಹೇಳಿ ದರ್ಶನ್ ಆ ಪ್ರಕರಣವನ್ನು ಅಲ್ಲೆ ಬಿಟ್ಟು ಬಿಟ್ಟಿದ್ದರು.
ಆದರೆ, ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಖಂಡಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದು, ಈ ನಡುವೆ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ಕೂಡ ನಡೆದಿತ್ತು.
ಈ ಕುರಿತು ಕ್ರಾರ್ಯಕ್ರಮದ ಆಯೋಜಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಲ್ಲಿ ಅಪರಾಧ ಸಂಖ್ಯೆ 180/2022 ಅಡಿಯಲ್ಲಿ ಖಾಕಿ ಪಡೆ ತನಿಖೆಯನ್ನು ಶುರು ಮಾಡಿದ್ದರು.
ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ವಿಜಯನಗರ ಜಿಲ್ಲೆಯ ಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಜೊತೆಗೆ ಡಿಎಸ್‌ಪಿ ಅವರ ನೇತೃತ್ವದಲ್ಲಿ ಆರೋಪಿತರನ್ನು ಕಂಡು ಹಿಡಿಯುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದ್ದಾರೆ.
ನಿನ್ನೆ (ಡಿಸೆಂಬರ್ 25)ರಂದು ದರ್ಶನ್ ಹುಬ್ಬಳ್ಳಿಯಲ್ಲಿ ‘ಕ್ರಾಂತಿ’ ಸಿನಿಮಾದ ಮೂರನೇ ಸಾಂಗ್ ರಿಲೀಸ್ ಮಾಡಿದ್ದು, ಈ ಸಂದರ್ಭದಲ್ಲಿ ಚಪ್ಪಲಿ ಎಸೆದವರ ವಿರುದ್ಧ ಪರೋಕ್ಷವಾಗಿ ದರ್ಶನ್ ಟಾಂಗ್ ನೀಡಿದ್ದಾರೆ.
ಇದೀಗ, ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮೂವರು ಆರೋಪಿತರನ್ನು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತಂತೆ ಹೊಸಪೇಟೆ ಪೊಲೀಸ್ ಠಾಣೆಯಿಂದ ಅಧಿಕೃತ ಮಾಹಿತಿ ನೀಡಿದೆ.
ಹೊಸಪೇಟೆ ಪೊಲೀಸ್ ಠಾಣೆಯ ಪಿ ಐ ಬಾಳನ ಗೌಡ, ಮುನಿರತ್ನಂ ಪಿಎಸ್‌ಐ ಸಿಬ್ಬಂದಿಯವರಾದ ರಾಘವೇಂದ್ರ, ಪ್ರಕಾಶ್ ಕಳಕ ರೆಡ್ಡಿ, ಶ್ರೀನಿವಾಸ, ಜಾವೇದ್ ಹಾಗೂ ಪರಶುರಾಮ ನಾಯ್ಕ ತಂಡವು ಮೂವರು ಆರೋಪಿತರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸದ್ಯ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸದ ಪೊಲೀಸರು ಇನ್ನು ಉಳಿದವರ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ಸದ್ಯ ಬಂಧಿತ ಮೂವರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.