ನಿಮಗಿದು ಗೊತ್ತೇ? ಇಲ್ಲಿ ಮಹಿಳೆಯರು ಮಾತ್ರವೇ ರಥ ಎಳೆಯುತ್ತಾರೆ!!!
ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕು ಇದೆ. ಆದರೆ ದೇವರ ಪೂಜಾ ವಿಧಿ ವಿಧಾನಗಳನ್ನು ಪುರುಷರು ಹೆಚ್ಚು ನಡೆಸುತ್ತಾರೆ. ಅದಲ್ಲದೆ ಸಾಮಾನ್ಯವಾಗಿ ನಡೆಯುವ ಎಲ್ಲ ರಥೋತ್ಸವಗಳಲ್ಲಿ ಪುರುಷರೇ ರಥಗಳನ್ನ ಎಳೆಯುತ್ತಾರೆ. ಆದರೆ, ಇಲ್ಲಿ ಮಾತ್ರ ರಥ ಎಳೆಯುವವರು ಮಹಿಳೆಯರು. ಹೌದು ಇಲ್ಲೊಂದು ಕಡೆ ಮಹಿಳೆಯರಿಗೆ ಸೂಕ್ತ ಮೀಸಲಾತಿ ಹಾಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಇಂತಹದೊಂದು ವಿಶಿಷ್ಟ ಸಂಪ್ರದಾಯ ಮಾಡಲಾಗಿದೆ.
ಕರಿಬಸವೇಶ್ವರ ಅಜ್ಜನ ರಥೋತ್ಸವದಲ್ಲಿ ಮಹಿಳೆಯರು ರಥೋತ್ಸವನ್ನು ಸಂಭ್ರಮದಿಂದ ಆಚರಿಸುವ ಮೂಲಕ ತಮ್ಮ ಇಷ್ಟಾರ್ಥಗಳು ಬೇಗ ಸಿದ್ದಿಸಲಿ ಎಂದು ವಿಶೇಷ ಪೂಜೆಗಳನ್ನ ಸಲ್ಲಿಸುತ್ತಾರೆ. ನೂರಾರು ಮಹಿಳೆಯರೇ ಸೇರಿಸುವ ಈ ರಥೋತ್ಸವವನ್ನ ನೋಡುವುದೇ ವಿಸ್ಮಯ.
ಕಾರ್ತಿಕ ಮಾಸದಲ್ಲಿ ನಡೆಯುವ ದಾವಣಗೆರೆ ತಾಲೂಕಿನ ಯರಗುಂಟೆ ಕರಿಬಸವೇಶ್ವರ ಅಜ್ಜನ ಜಾತ್ರೆಯಲ್ಲಿ ಮಹಿಳೆಯರೇ ತೇರನ್ನ ಎಳೆಯುವುದಕ್ಕೆ ಪ್ರಮುಖ ಕಾರಣವೂ ಇದೆ. ಸಮಾಜದಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ಬೇಕು, ಸಮಾನತೆ ಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಮಹಿಳೆಯರಿಗೆ ಸೂಕ್ತ ಮೀಸಲಾತಿ ಹಾಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಇಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಾದಾನ್ಯತೆ. ಅಲ್ಲದೇ, ರಥವನ್ನು ಎಳೆಯಲು ಅವರಿಗೆ ಅವಕಾಶ ನೀಡಲಾಗಿದೆ. ಕಳೆದ 12 ವರ್ಷಗಳಿಂದ ಯರಗುಂಟೆಯಲ್ಲಿ ಕರಿಬಸವೇಶ್ವರ ಅಜ್ಜನ ಜಾತ್ರೆಯನ್ನು ವಿಜೃಂಬನೆಯಿಂದ ನಡೆಸಲಾಗುತ್ತಿದೆ. ಜಾತ್ರೆಯಲ್ಲಿ ಮಹಿಳೆಯರಿಗೆ ಸರಿಸಮನಾದ ಮೀಸಲಾತಿ ಹಾಗೂ ಸಮಾನತೆ ತತ್ವ ಅನುಸರಿಸುವ ಉದ್ದೇಶದಿಂದ ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಸಸ್ತ್ಯ ನೀಡಲಾಗುತ್ತಿದೆ.
ಇದು ಕರಬಸವೇಶ್ವರ ಅಜ್ಜನ ಆಸೆಯೂ ಆಗಿದ್ದು, ಗ್ರಾಮಸ್ಥರು ಕೂಡ ಕಳೆದ ಹನ್ನೆರಡು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಹೀಗೆ ಮಾಡಿದರೆ ಕರಿಬಸವೇಶ್ವರ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿಯ ಗ್ರಾಮಸ್ಥರದ್ದು.
ಹೀಗಾಗಿ ಪ್ರತಿವರ್ಷವೂ ಜಾತ್ರೆಯಲ್ಲಿ ಮಹಿಳೆಯರು ಕರಿಬಸವೇಶ್ವರ ಅಜ್ಜನ ತೊಟ್ಟಿಲು ತೂಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಯನ್ನ ಸಲ್ಲಿಸುತ್ತಾರೆ. ಮತ್ತು ಜಾತ್ರೆಯಲ್ಲಿ ಅಜ್ಜನ ಸನ್ನಿಧಿಯಿಂದ ಊರ ಹೊರಗಿನ ಬನ್ನಿ ಕಟ್ಟೆಯವರೆಗೂ ಮಹಿಳೇಯರೇ ರಥವನ್ನು ಎಳೆದು ಮತ್ತೆ ದೇವಸ್ಥಾನದ ಮುಂದೆ ರಥವನ್ನ ತಂದು ನಿಲ್ಲಿಸುತ್ತಾರೆ. ಬಳಿಕ, ಅಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮರಕ್ಕೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ರಥೋತ್ಸವದಲ್ಲಿ ಯರಗುಂಟೆಯಲ್ಲದೆ ಸುತ್ತಮುತ್ತಲಿನ ಭಾಗದಿಂದ ನೂರಾರು ಮಹಿಳೇಯರು ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ ಸಂಭ್ರಮದಿಂದ ಭಾಗವಹಿಸುತ್ತಾರೆ.
ಯರಗುಂಟೆ ಕರಿಬಸವೇಶ್ವರ ಅಜ್ಜ ಮಹಿಳೆಯರ ಬೇಡಿಕೆಗಳನ್ನ ಶೀಘ್ರ ಈಡೇರಿಸುತ್ತಾನೆ ಎಂದು ನಂಬಿಕೆಯೂ ಇಲ್ಲಿಯ ಮಹಿಳೆಯರಲ್ಲಿದೆ. ಈ ಅಜ್ಜನ ತೊಟ್ಟಿಲು ತೂಗಿದರೆ ಮಕ್ಕಳಾಗದ ಮಹಿಳೆಯರಿಗೆ ಮಕ್ಕಳಾಗುತ್ತವೆ ನಂಬಿಕೆ ಇದೆ.
ಈ ಸಮಾನತೆಯ ಭಾವನೆ ಸಮಾಜಕ್ಕೆ ಒಂದು ಉತ್ತಮ ಮಾದರಿಯೂ ಆಗಿದೆ.