ಜನವರಿಯಲ್ಲಿ ರಾಜ್ಯದ ರೈತರಿಗೊಂದು ಸಿಗಲಿದೆ ಭರ್ಜರಿ ಸಿಹಿಸುದ್ದಿ !
ಪ್ರಸ್ತುತ ಕೃಷಿ ಮತ್ತು ಕೃಷಿಯೇತರ ಉದ್ಯಮಗಳಿಗೆ ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ರೈತರು ನಮ್ಮ ದೇಶದ ಬೆನ್ನೆಲುಬು ಆ ಪ್ರಯುಕ್ತ ರೈತ ಸಮುದಾಯಕ್ಕೆ ಸರ್ಕಾರದಿಂದ ಹೊಸ ಯೋಜನೆ ಜಾರಿ ಮಾಡುವ ಆಶ್ವಾಸನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಹೌದು ಮುಂದಿನ ತಿಂಗಳು ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲು ಯೋಜನೆ ಜಾರಿಗೆ ತರಲಾಗುವುದು ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
ಸವಣೂರು ತಾಲ್ಲೂಕಿನ ಕಾರಡಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಯಾತ್ರಿನಿವಾಸ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ರೈತ ಶಕ್ತಿ ಡೀಸೆಲ್ ಯೋಜನೆಯನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸಲಾಗುತ್ತಿದೆ ಎಂದರು.
ಕೃಷಿ ಇಲಾಖೆ ವತಿಯಿಂದ ರೈತಶಕ್ತಿ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250/- ರೂ.ನಂತೆ ಗರಿಷ್ಟ 5 ಎಕರೆಯವರೆಗೆ 1250/- ರೂ.ಗಳನ್ನು ಡಿಬಿಟಿ ಮೂಲಕ ಡೀಸೆಲ್ ಸಬ್ಸಿಡಿ ನೀಡುವ ರೈತಶಕ್ತಿ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಜೊತೆಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯ ಮೂಲಕ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ, ಸ್ತ್ರೀ ಸಾಮರ್ಥ್ಯ ಯೋಜನೆಯ ಮೂಲಕ 5 ಲಕ್ಷ ಆರ್ಥಿಕ ಸಹಾಯ ನೀಡಿ ಸ್ವಯಂ ಉದ್ಯೋಗ, ಹೀಗೆ ದುಡಿಯುವ ವರ್ಗಕ್ಕೆ ಆರ್ಥಿಕ ಸಬಲೀಕರಣಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಅದಲ್ಲದೆ ಗ್ರಾಮಗಳ ಮೂಲಭೂತ ಸೌಕರ್ಯ ವೃದ್ಧಿಸಲಾಗುವುದು ಮತ್ತು ರೈತ ಸಮುದಾಯದ ಬೆನ್ನೆಲುಬಾಗಿ ಸರ್ಕಾರ ಯಾವತ್ತಿಗೂ ಜೊತೆಗಿರುತ್ತದೆ ಎಂದು ತಿಳಿಸಿದರು.