ಆನ್ಲೈನ್ ಶಾಪಿಂಗ್ ಪ್ರಿಯರೇ ನೀವು ? ಹಾಗಿದ್ದರೆ ಈ ಸುದ್ದಿ ಓದಿ, ಆನ್ಲೈನ್‌ನಲ್ಲಿ ನಕಲಿ ವಸ್ತುಗಳನ್ನು ಪತ್ತೆ ಹಚ್ಚುವುದು ಹೇಗೆ ?
ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸುವ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಶಾಪಿಂಗ್ ಮಾಡಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಇಲ್ಲ. ಮುಂಚಿನ ಹಾಗೆ ಅಂಗಡಿಗಳಿಗೆ ಹೋಗಿ ಬೇಕಾದ ದಿನಸಿ ಸಾಮಾನುಗಳನ್ನು ಕೊಳ್ಳಲು ಅಂಗಡಿಗೆ ಹೋಗಬೇಕಾದ ಅನಿವಾರ್ಯತೆ ಈಗಿಲ್ಲ. ಏಕೆಂದರೆ, ಬಿಝಿ ಶೆಡ್ಯೂಲ್ ನಲ್ಲಿ ಹೆಚ್ಚಿನವರು ಆನ್ಲೈನ್ ಶಾಪಿಂಗ್ ಗೆ ಮೊರೆ ಹೊಕ್ಕು ಬೇಕಾದನ್ನು ಮನೆ ಬಾಗಿಲಿಗೆ ತರಿಸಿಕೊಳ್ಳುತ್ತಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ಶಾಪಿಂಗ್ನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರೊಂದಿಗೆ ಆನ್ಲೈನ್ ವಂಚನೆ ಕೂಡ ಸರಾಗವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಅನೇಕ ಬಾರಿ ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳಿಂದ ಆರ್ಡರ್ ಮಾಡಿದ ಉತ್ಪನ್ನಗಳು ನಾವು ಆರ್ಡರ್ ಮಾಡಿದ ವಸ್ತುವಿನ ಬದಲಿಗೆ ಬೇರೆ ವಸ್ತುಗಳಾಗಿರುವ ಸಾಧ್ಯತೆ ಇದೆ ಇಲ್ಲವೇ ನಕಲಿ ವಸ್ತುಗಳು ಕೂಡ ಇರಬಹುದು.
ಪ್ರತಿಯೊಂದು ಆನ್ಲೈನ್ ಸೈಟ್ ನಲ್ಲಿ ಲಭ್ಯವಿರುವ ಉತ್ಪನ್ನಗಳ ಬಗ್ಗೆ ಗ್ರಾಹಕರು ತಮ್ಮ ಅನಿಸಿಕೆ, ವಿಮರ್ಶೆ ಯನ್ನು ಹಂಚಿಕೊಂಡಿರುತ್ತಾರೆ. ಈ ಮೂಲಕ ನೀವು ಖರೀದಿಸಲು ಬಯಸುವ ವಸ್ತುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಖರೀದಿ ಮಾಡಲು ಬಯಸುವ ವಿಮರ್ಶೆಯನ್ನು ಗಮನಿಸಿದಾಗ ಉತ್ತಮ ಪ್ರತಿಕ್ರಿಯೆ ಇಲ್ಲದೇ ಹೋದರೆ ಆ ಉತ್ಪನ್ನವನ್ನು ಖರೀದಿಸದೆ ಬೇರೆ ಬ್ರಾಂಡ್ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ಇಲ್ಲಿ ಗಮನಿಸಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಯಾವುದೇ ಇ-ಕಾಮರ್ಸ್ ಸೈಟ್ನಿಂದ ಉತ್ಪನ್ನವನ್ನು ಆರ್ಡರ್ ಮಾಡಿದಾಗ, ವಿತರಣೆಯ ಸಮಯದಲ್ಲಿ ಖರೀದಿ ಮಾಡಿದ ವಸ್ತುವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ಬಳಿಕ, ಆರ್ಡರ್ ಮಾಡಿದ ವಸ್ತು ಅಲ್ಲದೆ ಹೋದರೆ,ಅದನ್ನು ವಿತರಣಾ ವ್ಯಕ್ತಿಯ ಮುಂದೆ ವೀಡಿಯೊ ಮಾಡುವುದು ಉತ್ತಮ.
ಯಾವಾಗಲೂ ಪ್ರಸಿದ್ಧ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಿಂದ ಆನ್ಲೈನ್ ಶಾಪಿಂಗ್ ಮಾಡುವುದು ಉತ್ತಮ. ಏಕೆಂದರೆ, ಈ ಕಂಪನಿಗಳು ಹೆಚ್ಚಿನ ಬಳಕೆದಾರರನ್ನು ಹೊಂದಿರುವುದರಿಂದ, ಗ್ರಾಹಕರಿಗೆ ಯಾವುದೇ ರೀತಿಯ ಸಮಸ್ಯೆ ಬರದ ರೀತಿಯಲ್ಲಿ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವತ್ತ ಗಮನ ಹರಿಸುತ್ತದೆ.
ನೀವು ಹೊಸ ವೆಬ್ಸೈಟ್ನಿಂದ ಖರೀದಿ ಮಾಡಿದರೆ, ನೀವು ಕೊಂಚ ಎಚ್ಚರ ವಹಿಸುವುದು ಸೂಕ್ತ. ಏಕೆಂದರೆ ಇಲ್ಲಿ ನಕಲಿ ವಸ್ತುಗಳು ಸಿಗುವ ಸಾಧ್ಯತೆಗಳು ಸಂಭವ ಹೆಚ್ಚು ಹಾಗೆಂದು ಎಲ್ಲ ಹೊಸ ವೆಬ್ ಸೈಟ್ ಮೋಸ ಮಾಡುತ್ತವೆ ಎನ್ನಲಾಗದು. ಕೆಲವೊಮ್ಮೆ ಹಣ ಪಾವತಿಸಿದ ಬಳಿಕ ಉತ್ಪನ್ನ ದೊರೆಯದೆ ಹೋದರೆ ಎಂಬ ಆತಂಕ ಸಹಜವಾಗಿ ಮೂಡುತ್ತದೆ. ಹೀಗಾಗಿ, ಕಂಪನಿಗೆ ಸಂಬಂಧಿಸಿದ ವಿಮರ್ಶೆಗಳನ್ನು ಪರಿಶೀಲಿಸಿದ ನಂತರ ಖರೀದಿಸುವುದು ಉತ್ತಮ.
ಇ-ಕಾಮರ್ಸ್ ಸೈಟ್ನಲ್ಲಿ ಲಭ್ಯವಿರುವ ಉತ್ಪನ್ನದ ಹೆಸರಿನಲ್ಲಿ ನೀವು ಬೇರೆ ಹೆಸರನ್ನು ಕಂಡರೆ ಉತ್ಪನ್ನವು ನಕಲಿಯಾಗಿರುವ ಸಂಭವ ಹೆಚ್ಚು ಎಂದರೆ ತಪ್ಪಾಗದು.
ಅನೇಕ ಬಾರಿ ಕೆಲವು ಕಂಪನಿಗಳು ಬ್ರಾಂಡ್ ಹೆಸರುಗಳಿಗೆ ಹೋಲುವ ಹೆಸರುಗಳನ್ನು ಬಳಸಿಕೊಂಡು ಗ್ರಾಹಕರನ್ನೂ ಯಾಮಾರಿಸುವ ಪ್ರಯತ್ನ ನಡೆಸುತ್ತವೆ. ಆದರೆ, ಬ್ರಾಂಡೆಡ್ ಉತ್ಪನ್ನಗಳ ಹೆಸರಿನಲ್ಲಿ ವಿಶಿಷ್ಟವಾದ ಗುರುತನ್ನು ಹೊಂದಿರುತ್ತದೆ ಎಂಬುದನ್ನು ನೀವು ಗಮನಿಸಬೇಕು.