ಸಾವಿನ ಮನೆಯ ಕದ ತಟ್ಟಿದ 3 ತಿಂಗಳ ಗರ್ಭಿಣಿ | ನವವಧುವಿನ ಬಾಳಿನಲ್ಲಿ ಆಗಿದ್ದಾದರೂ ಏನು?
ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಅಡಿಯಿಟ್ಟು ನೂರಾರು ಕನಸುಗಳ ಜೊತೆಗೆ ಹಸೆಮಣೆ ಏರಿ ನವ ಜೀವನಕ್ಕೆ ಮುನ್ನುಡಿ ಬರೆದ 23 ವರ್ಷದ ಯುವತಿ ಮದುವೆಯಾಗಿ ಬದುಕು ಕಟ್ಟಿಕೊಳ್ಳಬೇಕಾದ ಯುವತಿ ಮದುವೆಯಾದ 7 ತಿಂಗಳಿಗೆ ಸಾವಿನ ಮನೆಗೆ ಆಮಂತ್ರಿತಳಾಗಿ ದುರಂತಮಯ ಅಂತ್ಯ ಕಂಡಿದ್ದು, ಇದೀಗ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ರೋಹಿಣಿ(23) ಮೃತ ದುರ್ದೈವಿಯಾಗಿದ್ದು, ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನ ಜೊತೆ ರೋಹಿಣಿ ಮದುವೆ ಆಗಿತ್ತು. 3 ತಿಂಗಳ ಗರ್ಭಿಣಿಯಾಗಿದ್ದ ರೋಹಿಣಿ, ನಿನ್ನೆ ಮನೆಯಿಂದ ಹೊರ ಬಂದ ರೈಲಿನ ಮೂಲಕ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ರೈಲ್ವೆ ಸ್ಟೇಷನ್ಗೆ ಬಂದಿಳಿದಿದ್ದರು.
ಅಲ್ಲೇ ಸಮೀಪದಲ್ಲಿದ್ದ ಕೆರೆ ಬಳಿ ತೆರಳಿದ್ದ ರೋಹಿಣಿ, ಅಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರ ಜತೆ ಕೆಲಕಾಲ ಮಾತನಾಡಿದ್ದು, ಸಂಬಂಧಿಕರ ಮನೆಗೆ ಬಂದಿದ್ದೀನಿ ಎಂದು ಮಹಿಳೆಯರಿಗೆ ಹೇಳಿದ್ದಾಳೆ. ಅತ್ತ ಮಹಿಳೆಯರು ಬಟ್ಟೆ ಒಗೆದುಕೊಂಡು ಹಿಂತಿರುಗುತ್ತಿದ್ದಂತೆ ಇತ್ತ ರೋಹಿಣಿ ದುರಂತ ಅಂತ್ಯ ಕಂಡಿದ್ದಾಳೆ. ಸಾವಿಗೂ ಮುನ್ನ ಕೆರೆ ದಡದಲ್ಲಿ 1760 ರೂಪಾಯಿ, ಮೊಬೈಲ್, ಚಪ್ಪಲಿ ಬಿಟ್ಟು ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ.
ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣವೆಂದು ಪೋಷಕರು ಆರೋಪಿಸಿದ್ದು, ಕೌಟುಂಬಿಕ ಕಲಹ ಕೂಡ ಕಾರಣ ಎಂದಿದ್ದಾರೆ. ಪತಿಯ ಮನೆಯವರ ನಡೆಗೆ ಬೇಸತ್ತು ಮಗಳು ಸಾವಿನ ಮನೆಯ ಕದ ತಟ್ಟಿದ್ದಾಳೆ ಎಂದು ಮೃತಳ ಪಾಲಕರು ಆರೋಪಿಸಿದ್ದಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರೂ ಕೂಡ ರೋಹಿಣಿ ಮಾವನ ಮನೆಯವರು ಅರ್ಧ ಕೆಜಿ ಚಿನ್ನ ಕೇಳಿದ್ದರು. ನಮಗೆ ಅಷ್ಟು ಕೊಡಲು ಸಾಧ್ಯವಿಲ್ಲ ಎಂದು 250 ಗ್ರಾಂ ಚಿನ್ನ ನೀಡಿದ್ದೇವೆ. ಆದರೂ ಅಳಿಯ ಸುಮಂತ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ರೋಹಿಣಿ ಪೋಷಕರು ಆರೋಪಿಸಿದ್ದಾರೆ.
ಅತ್ತ ಮಗಳು ಕಾಣೆಯಾಗಿರುವ ಬಗ್ಗೆ ಕೆ.ಆರ್.ನಗರ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ಟವರ್ ಲೊಕೇಷನ್ ಮೂಲಕ ರೋಹಿಣಿ ಹುಡುಕಿಕೊಂಡು ಬಂದ ಪೊಲೀಸರಿಗೆ ಕೆರೆ ಬಳಿ ಮೊಬೈಲ್, ದುಡ್ಡು, ಚಪ್ಪಲಿ ಲಭ್ಯವಾಗಿದೆ. ಕೆರೆಯಲ್ಲಿ ಶೋಧ ನಡೆಸಿದ ಅಗ್ನಿಶಾಮಕ ಸಿಬ್ಬಂದಿಯು ರೋಹಿಣಿಯ ಶವವನ್ನು ಹೊರತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.