Hair Care Tips: ಬೋಳು ತಲೆ ಸಮಸ್ಯೆಗೆ ಇಲ್ಲಿದೆ ಪರಿಹಾರ | ಕರಿಮೆಣಸು ಮಾಡುತ್ತೆ ಈ ಸಮಸ್ಯೆಗಳ ಮಾಯ
ಸಾಂಬಾರು ಪದಾರ್ಥಗಳ ರಾಜ ಎಂದೇ ಕರೆಯಲ್ಪಡುವ ಕಾಳು ಮೆಣಸು ಅಥವಾ ಕರಿಮೆಣಸು ಒಂದು ದಿವ್ಯೌಷಧ ಎಂಬುದು ಹಲವರಿಗೆ ತಿಳಿದಿಲ್ಲ. ಈ ಕಾಳು ಮೆಣಸಿನಲ್ಲಿ ಹಲವು ರೀತಿಯ ಔಷಧೀಯ ಗುಣಗಳಿವೆ. ಇದನ್ನು ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಹೊಟ್ಟೆ ಸಮಸ್ಯೆಗಳಂತಹ ಹಲವು ರೀತಿಯ ತೊಂದರೆಗಳಿಗೆ ಪರಿಹಾರ ನೀಡುತ್ತದೆ.
ಇಷ್ಟು ಮಾತ್ರವಲ್ಲದೆ ಈ ಕರಿಮೆಣಸು ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ಕರಿಮೆಣಸು ನೈಸರ್ಗಿಕವಾದಂತದ್ದು, ಅದರಲ್ಲಿ ಯಾವುದೇ ರೀತಿಯ ರಾಸಾಯನಿಕವಿಲ್ಲ. ಹಾಗಾಗಿ ಇದನ್ನು ಕೂದಲಿಗೆ ಬಳಸುವುದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಹೇಳುತ್ತಾರೆ. ಹಲವು ರೋಗಗಳ ನಿವಾರಕ ಕರಿಮೆಣಸು ಕೂದಲಿಗೆ ಸಂಬಂಧಪಟ್ಟ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನೋಡೋಣ.
ತಲೆಹೊಟ್ಟು ಸಮಸ್ಯೆ : ಕರಿಮೆಣಸು ತಲೆಹೊಟ್ಟು ಸಮಸ್ಯೆಯ ನಿವಾರಣೆಗೆ ಸಹಕಾರಿಯಾಗಿದೆ. ಇದನ್ನು ಯಾವ ರೀತಿ ಬಳಸಬೇಕು ಅಂದ್ರೆ, ಮೊದಲು ಕರಿಮೆಣಸನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಿ ನಂತರ ಕೂದಲಿಗೆ ಹಚ್ಚಿಕೊಳ್ಳಿ ಹಾಗೂ 30 ನಿಮಿಷಗಳ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ಪ್ರತಿದಿನ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.
ಹಾಗೇ ಕರಿಮೆಣಸು ನೆತ್ತಿಯ ಸೋಂಕನ್ನು ಕೂಡ ನಿವಾರಿಸಲು ಸಹಕಾರಿಯಾಗಿದೆ.
ಬೋಳು ತಲೆ ಸಮಸ್ಯೆ : ಕರಿಮೆಣಸಿನಿಂದ ಬೋಳು ತಲೆ ಸಮಸ್ಯೆಯನ್ನು ನಿವಾರಿಸಬಹುದು. ಇದು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ. ಇದನ್ನು ಬಳಸುವ ಸುಲಭ ವಿಧಾನ ಹೇಗೆಂದರೆ, ಕರಿಮೆಣಸನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ನಂತರ ತಲೆಗೆ ಹಚ್ಚಿಕೊಳ್ಳಿ. ಇಷ್ಟೇ ಈ ರೀತಿ ಪ್ರತಿದಿನ ಮಾಡಿದರೆ ತಲೆಯಲ್ಲಿ ಹೊಸ ಕೂದಲಿನ ಬೆಳವಣಿಗೆ ಪ್ರಾರಂಭವಾಗುತ್ತದೆ. ಹಾಗೂ ಬೋಳು ತಲೆ ಸಮಸ್ಯೆಯಿಂದ ಬೇಗನೆ ಮುಕ್ತಿ ಪಡೆಯಬಹುದು.
ಶುಷ್ಕತೆಯ ಸಮಸ್ಯೆ : ಈ ಕರಿಮೆಣಸಿನಿಂದ ಒಣ ಕೂದಲಿನ ಸಮಸ್ಯೆಯನ್ನು ಕೂಡ ಸುಲಭವಾಗಿ ನಿವಾರಿಸಬಹುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಎ ಹೆಚ್ಚಾಗಿದ್ದು, ಇದು ಕೂದಲನ್ನು ಆರೋಗ್ಯವಾಗಿರಿಸುತ್ತದೆ ಮತ್ತು ನಿರ್ಜೀವ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಶುಷ್ಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಕರಿಮೆಣಸನ್ನು ಜೇನುತುಪ್ಪದೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ಇದರಿಂದ ಒಣ ಕೂದಲಿನ ಸಮಸ್ಯೆ ದೂರಾಗುತ್ತದೆ.