ಮಹಿಳೆಯರೇ ನಿಮಗೊಂದು ಗುಡ್‌ನ್ಯೂಸ್: ಈ ಕೆಲಸದಲ್ಲಿ ಶೇ 50 ರಷ್ಟು ವಿನಾಯಿತಿ | ಇಲ್ಲಿದೆ ಡಿಟೇಲ್ಸ್
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಹತ್ವದ ಆದೇಶ ನೀಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ MNREGA, ಮೊದಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ ಅಥವಾ NREGA ಎನ್ನಲಾಗುತ್ತಿತ್ತು. ಭಾರತೀಯ ಕಾರ್ಮಿಕ ಕಾನೂನು ಮತ್ತು ಸಾಮಾಜಿಕ ಭದ್ರತಾ ಕ್ರಮವಾಗಿದ್ದು, ಇದು ‘ಕೆಲಸ ಮಾಡುವ ಹಕ್ಕನ್ನು’ ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ.ಈ ಯೋಜನೆಯನ್ನು 2005ರ ಸೆಪ್ಟೆಂಬರ್ 5ರಂದು ಜಾರಿಗೆ ತರಲಾಗಿದೆ.
ಈ ಯೋಜನೆಯಡಿ ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ 1 ದಿನದ ಕೂಲಿ ಕೆಲಸದ ಪ್ರಮಾಣದಲ್ಲಿ ಸರ್ಕಾರ ಶೇ.50 ರಿಯಾಯಿತಿ ನೀಡುತ್ತಿದ್ದು, ಇದೀಗ ಗರ್ಭಿಣಿ ಮಹಿಳೆಯರಿಗೆ ಹಾಗೂ ಬಾಣಂತಿಯರಿಗೂ ವಿಸ್ತರಿಸಿ ಆದೇಶ ಹೊರಡಿಸಿದೆ. ಹೌದು!!..ನರೇಗಾ ಯೋಜನೆ ಅಡಿಯಲ್ಲಿ ಇನ್ನು ಮುಂದೆ ಒಂದು ದಿನಕ್ಕೆ ನಿಗದಿಪಡಿಸಿ ಕೂಲಿ ಪಡೆಯಲು ಮಾಡಬೇಕಾದ ಕೆಲಸದಲ್ಲಿ ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ 50% ರಷ್ಟು ವಿನಾಯಿತಿಯನ್ನು ನೀಡುವುದಾಗಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್‌ಗಳ CEO ಗಳಿಗೆ ಆದೇಶ ಹೊರಡಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ವರ್ಷವೊಂದಕ್ಕೆ ನೂರು ದಿನಗಳ ಖಾತರಿ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಅದೆಷ್ಟೊ ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಚೇತರಿಕೆ ಕಾಣಲು ನೆರವಾಗಿದ್ದು ಈ ಯೋಜನೆ ಹಿಂದುಳಿದ ವರ್ಗಗಳ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ರಿಯಾಯಿತಿ ವಿಸ್ತರಣೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ:
6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗು ಜನನ ಆಗುವ ಸಮಯದವರೆಗೆ ಜೊತೆಗೆ ಬಾಣಂತಿಯರಿಗೆ ಮಗು ಜನಸಿದ ದಿನದಿಂದ ಮುಂದಿನ 6 ತಿಂಗಳ ಅವಧಿಯಲ್ಲಿ ಅಂದರೆ, ಈ ಎರಡು ಸಮಯದಲ್ಲಿ ನಿಗದಿತ ಕೂಲಿ ಪಡೆಯಲು ಕೆಲಸದ ಪ್ರಮಾಣದಲ್ಲಿ 50 % ರಷ್ಟು ರಿಯಾಯಿತಿ ನೀಡಲು ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಯೋಜನೆಯಡಿ ಉದ್ಯೋಗಾವಕಾಶ ನೀಡುವ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಪುನರ್ನಿರ್ಮಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೀವನ ನಿರ್ವಹಣೆಗೆ ಬೆಂಬಲ ನೀಡುವ ಮತ್ತು ಆಸ್ತಿಗಳನ್ನು ಸೃಷ್ಟಿಸುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ.