BF.7 Variant In India: ಚೀನಾದಲ್ಲಿ ಅಬ್ಬರಿಸುತ್ತಿರುವ ಬಿಎಫ್.7 ವೈರಸ್ ಭಾರತಕ್ಕೂ ಲಗ್ಗೆ | ಒಟ್ಟು 3 ಕೇಸ್ ಪತ್ತೆ!
ಚೀನಾದಲ್ಲಿ ಅಬ್ಬರಿಸುತ್ತಿರುವ ಕೊರೊನಾ ವೈರಸ್ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಬಿಎಫ್.7 ವೈರಾಣು ಭಾರತದಲ್ಲೂ ಪತ್ತೆಯಾಗಿರುವ ಆಘಾತಕಾರಿ ಅಂಶವೊಂದು ಪತ್ತೆಯಾಗಿದೆ. 3 ಪ್ರತ್ಯೇಕ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ ಎಂದು ಸರ್ಕಾರದ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಓಮಿಕ್ರಾನ್‌ನ ಬಿಎಫ್.7 ಉಪ ರೂಪಾಂತರಿಯು ಬಿಎ.5 ರೂಪಾಂತರಿಯಿಂದ ಉಗಮವಾಗಿದೆ ಎಂದು ತಿಳಿದು ಬಂದಿದೆ. ಇದು ಅತ್ಯಂತ ವೇಗವಾಗಿ ಹರಡುವ ಜೊತೆಗೆ ಸೋಂಕುಕಾರಕ ಗುಣ ಹೊಂದಿದೆ. ಮನುಷ್ಯನ ದೇಹ ಪ್ರವೇಶಿಸಿದ ಬಳಿಕ ಈ ವೈರಾಣು ಅತ್ಯಂತ ಕಡಿಮೆ ಅವಧಿಯಲ್ಲಿ ದ್ವಿಗುಣಗೊಳ್ಳಲು ಆರಂಭವಾಗುತ್ತದೆ. ಜೊತೆಗೆ ಮರು ಸೋಂಕಿಗೆ ಕಾರಣವಾಗುವ ಗುಣವೂ ಈ ವೈರಾಣುವಿನಲ್ಲಿದೆ.
ಅಕ್ಟೋಬರ್‌ನಲ್ಲಿ, ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಬಿಎಫ್.7 ವೈರಾಣುವಿನ ಮೊದಲ ಪ್ರಕರಣ ಪತ್ತೆಯಾಗಿತ್ತು. ಮತ್ತೊಂದು ಬಿಎಫ್.7 ಸೋಂಕು ಪ್ರಕರಣ ಕೂಡಾ ಗುಜರಾತ್‌ನಲ್ಲೇ ಪತ್ತೆಯಾಗಿದೆ. ವಡೋದರಾದಲ್ಲಿ ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎನ್‌ಆರ್‌ಐ ಮಹಿಳೆಗೆ ಈ ವೈರಾಣುವಿನಿಂದ ಸೋಂಕು ತಗುಲಿರೋದು ಇದೀಗ ದೃಢಪಟ್ಟಿದೆ. 3ನೇ ಪ್ರಕರಣ ಒಡಿಶಾ ರಾಜ್ಯದಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.
ಚೀನಾದಲ್ಲಿ ಸದ್ಯ ಎದುರಾಗಿರುವ ಕೋವಿಡ್ ತುರ್ತು ಪರಿಸ್ಥಿತಿಗೆ ಕಾರಣವಾಗಿರೋದು ಓಮಿಕ್ರಾನ್‌ನ ಉಪ ರೂಪಾಂತರಿ ಬಿಎಫ್.7 ವೈರಸ್ ಎಂದು ಭಾರತ ಸರ್ಕಾರಕ್ಕೆ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಬೀಜಿಂಗ್ ಸೇರಿದಂತೆ ಚೀನಾ ದೇಶಾದ್ಯಂತ ಇದೇ ವೈರಾಣು ಭಾರೀ ಪ್ರಮಾಣದಲ್ಲಿ ಹರಡುತ್ತಿದೆ. ದೇಶಾದ್ಯಂತ ದಿಢೀರ್ ಸೋಂಕಿನಬ್ಬರ ಹೆಚ್ಚಾಗಲು ಇದೇ ವೈರಾಣು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಅಂದ ಹಾಗೆ ಚೀನಾ ಜನತೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದು, ಇದರ ಜೊತೆಗೆ ಈ ಹಿಂದಿನ ವೈರಾಣುವಿನಿಂದ ಸೋಂಕಿಗೆ ಒಳಗಾದವರಿಗೆ ಓಮಿಕ್ರಾನ್ ಬಿಎಫ್.7 ವೈರಾಣು ಮಾರಣಾಂತಿಕವಾಗಿ ಪರಿಣಮಿಸುತ್ತೆ. ಅಷ್ಟು ಮಾತ್ರವಲ್ಲದೇ, ಈ ವೈರಾಣು ಅತಿ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಚೀನಾದ ದೇಶೀಯ ಲಸಿಕೆ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡಿಲ್ಲ.