ನಿಮ್ಮನ್ನು ಮುಜುಗುರದಿಂದ ತಪ್ಪಿಸಲು ವಾಟ್ಸಪ್‌ನಲ್ಲಿ ಬಂದಿದೆ ಹೊಸ ಫೀಚರ್
ವಾಟ್ಸಪ್ ಈಗ ಎಲ್ಲರಲ್ಲೂ ಮನೆ ಮಾತಾಗಿದೆ. ಹೌದು ಕೂತಲ್ಲಿ ನಿಂತಲ್ಲಿ ವಾಟ್ಸಪ್ ವಾಟ್ಸಪ್ ವಾಟ್ಸಪ್ ಆಗಿದೆ. ಏನೇ ಇದ್ದರೂ ವಾಟ್ಸಪ್ ಶೇರ್ ಅಂತ ಮಾಡಿ ಬಿಟ್ಟರೆ ಕೆಲಸ ಆಗೋಯ್ತು. ಆಧುನಿಕ ಯುಗದಲ್ಲಿ ಜನರಿಗೆ ಸ್ವಲ್ಪ ಆತುರ ಜಾಸ್ತಿ ಅಂದರೆ ತಪ್ಪಾಗಲಾರದು. ಯಾಕೆಂದರೆ ಉದಾಹರಣೆಗೆ ವಾಟ್ಸಾಪ್ ನಲ್ಲಿ ನಾವು ತಪ್ಪಾಗಿ ಯಾರಿಗೋ ಕಳುಹಿಸುವ ಸಂದೇಶವನ್ನು ಮತ್ಯಾವುದೋ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸುವುದು . ಗೊತ್ತಾದ ಕೂಡಲೇ ಅದನ್ನು ಡಿಲೀಟ್ ಮಾಡುವ ಭರದಲ್ಲಿ, “ಡಿಲೀಟ್ ಫಾರ್ ಎವ್ರಿವನ್’ ಆಯ್ಕೆ ಒತ್ತುವ ಬದಲು, “ಡಿಲೀಟ್ ಫಾರ್ ಮಿ’ ಎಂದು ಒತ್ತುವುದು ನಂತರ ಆ ಗ್ರೂಪ್‌ನಲ್ಲಿ ನೀವು ಕಳುಹಿಸಿದ ಸಂದೇಶ ಉಳಿದವರೆಲ್ಲರಿಗೂ ಅದು ಕಾಣಿಸುತ್ತದೆ, ನಿಮಗೊಬ್ಬರಿಗೆ ಕಾಣಿಸದೇ ಇದ್ದಾಗ ಪಜೀತಿ ಗೆ ಸಿಕ್ಕಿಕೊಳ್ಳುವುದು ದಿನಾ ಇದ್ದದ್ದೇ ಗೋಳು. ಈ ಸಂದರ್ಭದಲ್ಲಿ ಏನು ಮಾಡುವುದೆಂದು ನಿಮಗೆ ತೋಚುವುದಿಲ್ಲ. ಈ ಸಮಸ್ಯೆಗೆ ಈಗ ವಾಟ್ಸ್‌ಆ್ಯಪ್ ಕಂಪನಿ ಪರಿಹಾರ ಕಂಡುಕೊಂಡಿದೆ.
ಹೌದು ನೀವು ಮೆಸೇಜ್ ಡಿಲೀಟ್ ಮಾಡಿದ ಕೂಡಲೇ ನಿಮಗೆ ತಪ್ಪು ಸರಿಪಡಿಸಲು “5 ಸೆಕೆಂಡು’ಗಳ ಕಾಲಾವಕಾಶ ಸಿಗಲಿದೆ. ಮೆಸೇಜ್ ಡಿಲೀಟ್ ಆದ ಜಾಗದಲ್ಲೇ ಒಂದು ಪುಟ್ಟ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ “ಅನ್‌ಡೂ'(UNDO) ಎಂಬ ಬಟನ್ ಕಾಣಿಸಿಕೊಳ್ಳುತ್ತದೆ. ಆ ಬಟನ್ ಕ್ಲಿಕ್ ಮಾಡಿದ ಕೂಡಲೇ, ನೀವು ಆಗಷ್ಟೇ ಡಿಲೀಟ್ ಮಾಡಿದ್ದ ಸಂದೇಶ ಮತ್ತೆ ನಿಮ್ಮ ಕಣ್ಣೆದುರಿಗೆ ಬರುತ್ತದೆ. ಆಗ ನೀವು ಹಿಂದಿನಂತೆ ತಪ್ಪು ಮಾಡದೇ “ಡಿಲೀಟ್ ಫಾರ್ ಎವ್ರಿವನ್’ ಎಂಬ ಆಯ್ಕೆ ಕ್ಲಿಕ್ ಮಾಡಬಹುದು. ನಂತರ ಆ ಗ್ರೂಪ್‌ನಲ್ಲಿರುವ ಎಲ್ಲರಿಗೂ ಸಂದೇಶ ಡಿಲೀಟ್ ಆಗುತ್ತದೆ.
ಈ ಹೊಸ ಫೀಚರ್‌ಗೆ ವಾಟ್ಸ್‌ಆ್ಯಪ್ “ಆ್ಯಕ್ಸಿಡೆಂಟಲ್ ಡಿಲೀಟ್’ ಎಂದು ಹೆಸರು ನೀಡಿದ್ದಾರೆ. ಇದರಿಂದಾಗಿ ನೀವು ಗೊತ್ತಿಲ್ಲದೇ ಅಥವಾ ಗಡಿಬಿಡಿಯಲ್ಲಿ ಡಿಲೀಟ್ ಮಾಡಿದ ಮೆಸೇಜ್ ನ್ನು ಸರಿಪಡಿಸಿಕೊಂಡು ನಿಮಗೆ ಆಗುವ ಮುಜುಗರವನ್ನು ತಪ್ಪಿಸಿಕೊಳ್ಳಬಹುದಾಗಿದೆ.