ಗ್ಯಾಸ್ ಸಿಲಿಂಡರ್ ಬೆಲೆಯಿಂದ ಕಂಗೆಟ್ಟಿ ಹೋದವರಿಗೆ ಗುಡ್ ನ್ಯೂಸ್ | ಈ ಹೊಸ ತಂತ್ರಜ್ಞಾನ ಬಳಸುವ ಮೂಲಕ ಅನಿಲ ಅಥವಾ ವಿದ್ಯುತ್ ಖರ್ಚು ಮಾಡದೇ ತಯಾರಿಸಬಹುದು ಅಡುಗೆ
ಇಂದಿನ ಕಾಲದಲ್ಲಿ ಅಡುಗೆ ತಯಾರಿಸುವುದೇ ದೊಡ್ಡ ಸವಾಲಾಗಿ ಹೋಗಿದೆ. ಯಾಕಂದ್ರೆ, ಈ ದುಬಾರಿ ದುನಿಯಾದಲ್ಲಿ ಯಾವುದೇ ವಸ್ತು ಖರೀದಿಸ ಬೇಕಾದರೂ ಒಮ್ಮೆಗೆ ಯೋಚಿಸುವಂತೆ ಆಗಿದೆ. ಅದರಲ್ಲೂ ಗ್ಯಾಸ್ ಸಿಲಿಂಡರ್.
ಹೌದು. ಗ್ಯಾಸ್ ಸಿಲಿಂಡರ್ ಬೆಲೆ ಕೇಳಿದ್ರೇನೇ ತಲೆ ಕೆಟ್ಟೋಗೋ ಪರಿಸ್ಥಿತಿ. ಇಂತಹ ಕಾಲದಲ್ಲಿ ಹೇಗಪ್ಪಾ ಈ ಗ್ಯಾಸ್ ಖರ್ಚು ಉಳಿಸೋದುಯೆಂದು ಯೋಚಿಸೋರಿಗೆ ಇಲ್ಲಿದೆ ಒಂದು ಬೆಸ್ಟ್ ಟೂಲ್. ಯಸ್ ಇದುವೇ ಅನಿಲ ಅಥವಾ ವಿದ್ಯುತ್’ನ್ನ ಖರ್ಚು ಮಾಡದೇ ಜೀವನ ಪರ್ಯಂತ ಅಡುಗೆ ಮಾಡಬಹುದಾದ ತಂತ್ರಜ್ಞಾನ. ಅದುವೇ ಸೂರ್ಯ ನೂತನ್ ಸೋಲಾರ್ ಸ್ಟೌವ್(Surya Nutan Solar Stove).
ಹಣದುಬ್ಬರದಿಂದ ಸಾರ್ವಜನಿಕರಿಗೆ ಪರಿಹಾರ ನೀಡಲು ಸರ್ಕಾರವು ವಿಶೇಷ ರೀತಿಯ ತಂತ್ರಜ್ಞಾನವನ್ನ ಪರಿಚಯಿಸಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಈ ಒಲೆಯನ್ನ ತಯಾರಿಸಿದೆ. ಈ ಹೊಸ ಒಲೆಯೊಂದು ಮಾರುಕಟ್ಟೆಗೆ ಬರುತ್ತಿದ್ದು, ಇದಕ್ಕೆ ಅಡುಗೆ ಅನಿಲ ಅಥವಾ ಇಂಡಕ್ಷನ್ ಅಗತ್ಯವಿಲ್ಲ. ಇದು ತುಂಬಾ ಅಗ್ಗವಾಗಿದೆ. ಕೇವಲ 12 ಸಾವಿರ ರೂಪಾಯಿಗಳನ್ನ ಖರ್ಚು ಮಾಡುವ ಮೂಲಕ, ನೀವು ನಿಮ್ಮ ಜೀವನದುದ್ದಕ್ಕೂ ಯಾವುದೇ ಖರ್ಚಿಲ್ಲದೇ ಅಡುಗೆ ಬೇಯಿಸಬಹುದು. ಈ ಸ್ಟವ್ ಇಂಡಿಯನ್ ಆಯಿಲ್ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಪಂಪ್’ನಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗುತ್ತಿದೆ.
ಸೂರ್ಯ ನೂತನ್ ಸೋಲಾರ್ ಸ್ಟೌವ್ ‘ನ ಎರಡು ರೂಪಾಂತರಗಳು ಮಾರುಕಟ್ಟೆಗೆ ಬಂದಿವೆ. ಒಂದು ಬೆಲೆ 12,000 ರೂ.ಗಳಾಗಿದ್ದು, ಟಾಪ್ ವೇರಿಯಂಟ್ ಬೆಲೆ 23,000 ರೂ. ಇದು ಹಳೆಯ ಸೌರ ಒಲೆಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹಳೆಯ ಸೌರ ಒಲೆಯನ್ನ ಬಿಸಿಲಿನಲ್ಲಿ ಇಡಬೇಕಾಗಿತ್ತು. ಆದ್ರೆ, ಇದು ಹಾಗಿಲ್ಲ, ಅಡುಗೆಮನೆಯಲ್ಲಿಯೇ ಫಿಟ್ ಮಾಡುವ ಮೂಲಕ ನೀವು ಅದನ್ನ ಬಳಸಬಹುದು. ಒಮ್ಮೆ ಶಕ್ತಿ ಸಂಗ್ರಹಿಸಿದ್ರೆ, 24 ಗಂಟೆಗಳ ಕಾಲ ಬಳಸಬಹುದು. ಸನ್ ನೂತನ್ ಸೋಲಾರ್ ಸ್ಟವ್’ನಲ್ಲಿ ಎರಡು ಘಟಕಗಳಿವೆ. ಒಂದು ಘಟಕವನ್ನ ಅಡುಗೆಮನೆಯಲ್ಲಿ ಇರಿಸಿದ್ರೆ, ಇತರ ಘಟಕಗಳನ್ನ ಬಿಸಿಲಿನಲ್ಲಿ ಹೊರಗೆ ಇಡಲಾಗುತ್ತದೆ. ಇದನ್ನ ಹಗಲು ಮತ್ತು ರಾತ್ರಿ ಎರಡರಲ್ಲೂ ಬಳಸಬಹುದು. ಹಗಲಿನಲ್ಲಿ ಶಕ್ತಿಯನ್ನ ಸಂಗ್ರಹಿಸುವ ಮೂಲಕ, ಇದು ರಾತ್ರಿಯಲ್ಲಿ ಸುಲಭವಾಗಿ ಕೆಲಸ ಮಾಡುತ್ತದೆ.