ಧರ್ಮಸ್ಥಳ : ತಿರುವು ಪಡೆಯಿತೇ ದಲಿತ ವ್ಯಕ್ತಿಯ ಕೊಲೆ ಪ್ರಕರಣ!? ಕೊಲೆಯ ಹಿಂದಿದೆ ‘ಆ…ಕೆ’ಯ ವಿಚಾರ-ನೈಜ ಆರೋಪಿಗಳೆಲ್ಲಿ!??
ಧರ್ಮಸ್ಥಳ : ಇಲ್ಲಿನ ಠಾಣಾ ವ್ಯಾಪ್ತಿಯ ಶಿಬಾಜೆ ಎಂಬಲ್ಲಿನ ತೋಟವೊಂದರಲ್ಲಿ ಕೆಲಸಕ್ಕಿದ್ದ ದಲಿತ ವ್ಯಕ್ತಿಯೊಬ್ಬನನ್ನು ಹಲ್ಲೆಗೈದು, ಬಳಿಕ ಕೊಲೆ ನಡೆಸಿ ಬೆತ್ತಲೆಯಾಗಿ ತೋಟದಲ್ಲಿ ಎಸೆದುಹೋದ ಘಟನೆಯೊಂದು ಡಿಸೆಂಬರ್ 17 ರಂದು ಬೆಳಕಿಗೆ ಬಂದಿದ್ದು, ದಲಿತ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡು ದಿನಗಳೇ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ ಎನ್ನುವ ಬಗ್ಗೆ ಆಕ್ರೋಶವೊಂದು ಹೊರಬಿದ್ದಿದ್ದು,ದಲಿತ ಸಂಘಟನೆಗಳು ಬೀದಿಗಿಳಿಯುವ ಬಗ್ಗೆ ಎಚ್ಚರಿಕೆ ನೀಡಿದೆ.
ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಅವರಿಗೆ ಸೇರಿದ ತೋಟವೊಂದರಲ್ಲಿ ಮೇಲ್ವಿಚಾರಕನಾಗಿದ್ದ ಶ್ರೀಧರ(30) ಎಂಬವರಿಗೆ ನಾಲ್ವರ ತಂಡವೊಂದು ಹಲ್ಲೆಗೈದಿದ್ದರು. ಹಲ್ಲೆಯ ಬಳಿಕ ಇತರ ಕೆಲಸಗಾರರು ಅಲ್ಲೇ ಪಕ್ಕದಲ್ಲಿರುವ ಕೊಠಡಿಯೊಂದರಲ್ಲಿ ವಿಶ್ರಾಂತಿ ಪಡೆಯಲು ಕಳುಹಿಸಿದ್ದರು ಎನ್ನಲಾಗಿದೆ.
ಮಾರನೇ ದಿನ ಡಿ.18 ರಂದು ಶ್ರೀಧರ ನನ್ನು ಕರೆದಾಗ ಯಾವುದೇ ಸುಳಿವು ಸಿಗದೇ ಇದ್ದುದರಿಂದ ಗಾಬರಿಗೊಂಡ ಇತರ ಕೆಲಸಗಾರರು ಎಲ್ಲೆಡೆ ಹುಡುಕಾಡಿದ್ದು, ಈ ವೇಳೆ ತೋಟದಲ್ಲಿ ಬೆತ್ತಲೆಯಾಗಿ ಮೃತದೇಹವು ಪತ್ತೆಯಾಗಿದ್ದು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆಗಮಿಸಿ ಸ್ಥಳ ಮಹಜರು ನಡೆಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಹಲ್ಲೆ ಹಾಗೂ ಕೊಲೆ ಪ್ರಕರಣದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದ ಪೂಜಾರಿ, ಹಾಗೂ ಮಹೇಶ್ ಪೂಜಾರಿ ಎಂಬವರ ವಿರುದ್ಧ 302,392 ಸಹಿತ ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಭೇಟಿ ನೀಡಿ ತನಿಖೆ ಮುಂದುವರಿಸಿದ್ದರು.
ಈ ಬಗ್ಗೆ ದಲಿತ ಸಂಘಟನೆ ಮುಖಂಡರು ಧ್ವನಿ ಎತ್ತಿದ್ದು,ಕೃತ್ಯ ನಡೆದು ದಿನಗಳೇ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಕೂಡಲೇ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ವಿಚಾರ ಸುದ್ದಿಯಾಗಿದ್ದು, ಕೊಲೆಗೆ ಆಕೆಯೊಬ್ಬಳು ಕಾರಣವಾಗಿದ್ದಾಳೆ, ಆಕೆಯ ವಿಚಾರದಲ್ಲೇ ಜಗಳ ನಡೆದು ಓರ್ವನ ಹತ್ಯೆಯಾಗಿದೆ ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿಬರುತ್ತಿದ್ದು, ಕೊಲೆ ನಡೆಸಿದ ಆರೋಪಿಗಳಾದರೂ ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿದ್ದು ಪೊಲೀಸರ ತನಿಖೆಯಿಂದ ಎಲ್ಲಾ ಉಹಾಪೋಹಗಳಿಗೆ ಉತ್ತರಸಿಗಲಿದೆ.