ಚಳಿಗಾಲದಲ್ಲಿ ಖರ್ಜೂರ ಸೇವಿಸಿದರೆ ಈ ರೋಗದಿಂದ ದೂರವಿರಬಹುದು

ಖರ್ಜೂರ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಚಳಿಗಾಲದಲ್ಲಿ ಖರ್ಜೂರ ಸೇವಿಸಿದರೆ ಹಲವು ಕಾಯಿಲೆಗಳಿಂದ ದೂರವಿರಬಹುದು ಎನ್ನುತ್ತಾರೆ. ಖರ್ಜೂರವನ್ನು ಪೋಷಕಾಂಶಗಳ ಆಗರ ಎನ್ನುತ್ತಾರೆ. ಯಾಕಂದ್ರೆ, ಖರ್ಜೂರದಲ್ಲಿ ಫೈಬರ್, ಪ್ರೊಟೀನ್, ಆ್ಯಂಟಿಆಕ್ಸಿಡೆಂಟ್‌, ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಹೆಚ್ಚಾಗಿ ಕಂಡು ಬರುತ್ತದೆ. ಇನ್ನೂ ಈ ಖರ್ಜೂರದಿಂದ ಆಗುವ ಹಲವು ಪ್ರಯೋಜನಗಳು ಏನು? ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಚಳಿಗಾಲದಲ್ಲಿ ಖರ್ಜೂರ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ‌.

ಜೀರ್ಣಕ್ರಿಯೆಗೆ ಪ್ರಯೋಜನಕಾರಿ: ಚಳಿಗಾಲದಲ್ಲಿ ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಂಟಾಗಬಹುದು. ಅದಕ್ಕೆಂದು ಖರ್ಜೂರ ಸೇವಿಸಿ. ಖರ್ಜೂರ ಸೇವಿಸಿದರೆ ಈ ಸಮಸ್ಯೆ ದೂರವಾಗುತ್ತದೆ. ಖರ್ಜೂರದಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಇರುವುದರಿಂದ ಇದನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಾಗೇ ಆಯುರ್ವೇದದ ಪ್ರಕಾರ, ಖರ್ಜೂರ ತಿಂದರೆ ಮಲಬದ್ಧತೆ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಉಂಟಾಗುವುದಿಲ್ಲ ಎನ್ನಲಾಗಿದೆ.

ರಕ್ತಹೀನತೆ ಸಮಸ್ಯೆಗೆ ಪರಿಹಾರ: ಇನ್ನೂ, ರಕ್ತಹೀನತೆಯ ಸಮಸ್ಯೆ ಇದ್ದಲ್ಲಿ, ಖರ್ಜೂರವನ್ನು ತಿನ್ನುವುದರಿಂದ ಪರಿಹಾರ ಸಿಗುತ್ತದೆ. ಹಾಗೇ ರಕ್ತಹೀನತೆ ಸಮಸ್ಯೆ ಇರುವವರು ಸುಮಾರು 21 ದಿನಗಳವರೆಗೆ ಖರ್ಜೂರವನ್ನು ತಿನ್ನುವುದು ತುಂಬಾ ಒಳ್ಳೆಯದು. ಅಲ್ಲದೆ, ದೌರ್ಬಲ್ಯವನ್ನು ದೂರಮಾಡಲು ಕೂಡ ಖರ್ಜೂರ ಪ್ರಯೋಜನಕಾರಿಯಾಗಿದೆ. ಹಾಗೇ ಖರ್ಜೂರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಕೂಡ ತುಂಬಾ ಸಹಕಾರಿಯಾಗಿದೆ.

ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ: ಮೆದುಳಿನಲ್ಲಿ ಪ್ಲೇಕ್ ಅನ್ನು ತಡೆಗಟ್ಟಲು ಈ ಖರ್ಜೂರ ತುಂಬಾ ಸಹಕಾರಿಯಾಗಿದೆ. ಇದು ಮೆದುಳನ್ನು ಆರೋಗ್ಯಕರವಾಗಿಸುತ್ತದೆ. ಹಾಗೇ ಖರ್ಜೂರವನ್ನು ಸೇವಿಸುವುದರಿಂದ ಆಲ್ಝೈಮರ್ನಂತಹ ಕಾಯಿಲೆಗಳ ಅಪಾಯ ಕಡಿಮೆ ಆಗುತ್ತದೆ. ಇದನ್ನು ತಿನ್ನುವುದು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗಿದೆ.

ಸೋಂಕನ್ನು ತಡೆಗಟ್ಟಲು: ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದ್ದು, ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿವೆ. ಚಳಿಗಾಲದಲ್ಲಿ ಶೀತ ಮತ್ತು ಜ್ವರದಂತಹ ಸಾಂಕ್ರಾಮಿಕ ರೋಗಗಳನ್ನು ಹೊಡೆದೋಡಿಸಲು ಖರ್ಜೂರ ಸಹಕಾರಿಯಾಗಿದೆ.

ಇನ್ನೂ, ಖರ್ಜೂರವನ್ನು ಯಾವ ರೀತಿ ಸೇವಿಸುವುದರಿಂದ ಹೆಚ್ಚು ಪ್ರಯೋಜನಕಾರಿ ಎಂಬುದು ತಿಳಿಯೋಣ. ಸಾಮಾನ್ಯವಾಗಿ ಎಲ್ಲರೂ ಖರ್ಜೂರವನ್ನು ಹಾಗೆಯೇ ಸೇವಿಸುತ್ತಾರೆ. ಆದರೆ, ಇದರ ಆರೋಗ್ಯಕರ ಪ್ರಯೋಜನಗಳು ಸರಿಯಾಗಿ ಸಿಗಬೇಕು ಎಂದಾದರೆ, ಖರ್ಜೂರವನ್ನು ನೀರಿನಲ್ಲಿ ನೆನೆಸಿ ಅಥವಾ ಹಾಲಿನಲ್ಲಿ ಕುದಿಸಿ ಸೇವಿಸುವುದು ಒಳ್ಳೆಯದು. ಇದನ್ನು ಹಾಲಿನಲ್ಲಿ ಕುದಿಸಿ ತಿಂದರೆ ಶೀತಕ್ಕೆ ಸಂಬಂಧಿಸಿದ ರೋಗಗಳಿಂದ ದೂರ ಉಳಿಯಬಹುದಾಗಿದೆ. ಹಾಗೆಯೇ ನೀರಿನಲ್ಲಿ ನೆನೆಸಿ ತಿಂದರೆ ತೂಕ ಮತ್ತು ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಎನ್ನಲಾಗಿದೆ.

ಇನ್ನೂ, ಈ ಮೇಲೆ ನೀಡಿರುವ ಮಾಹಿತಿಗಳು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಬಳಸುವ ಮೊದಲು ವೈದ್ಯಕೀಯ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

Leave A Reply

Your email address will not be published.