ಮದುವೆಗಾಗಿ ಧರ್ಮ ಬದಲಿಸುವಂತಿಲ್ಲ ಈ ರಾಜ್ಯದಲ್ಲಿ | ಹೀಗೇನಾದರೂ ಮಾಡಿದರೆ ಕಠಿಣ 10 ವರ್ಷ ಜೈಲು ಶಿಕ್ಷೆ ಗ್ಯಾರಂಟಿ

ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯ ನ್ನು ದಾಟಿ, ಅದೆಷ್ಟೊ ಮಂದಿ ಅಂತರ್ಜಾತಿ ವಿವಾಹವಾದ ಪ್ರಕರಣಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ಉದಾಹರಣೆ ಕೂಡ ಇದೆ. ಇದರ ನಡುವೆ ಎಲ್ಲ ಅಡೆತಡೆಗಳ ಮೆಟ್ಟಿ ನಿಂತು ಸುಂದರ ಜೀವನ ರೂಪಿಸಿಕೊಂಡ ಜೋಡಿಗಳು ಕೂಡ ಇದ್ದಾರೆ ಎಂಬುದು ಅಷ್ಟೆ ಸತ್ಯ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ ಬಿದ್ದು, ಅಂತರ್ಜಾತೀಯ ವಿವಾಹ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ.

ಆದರೆ, ಈ ರಾಜ್ಯದಲ್ಲಿ ಮದುವೆಗಾಗಿ ಧರ್ಮ ಬದಲಿಸುವಂತಿಲ್ಲ, ಅಷ್ಟೆ ಅಲ್ಲದೆ,ಕಾನೂನು ಉಲ್ಲಂಘಿಸಿದರೆ 10 ವರ್ಷ ಜೈಲು ಶಿಕ್ಷೆ ಗ್ಯಾರಂಟಿ!!

ಹೌದು!!.. ಹರ್ಯಾಣದಲ್ಲಿ ಮತಾಂತರ ತಡೆ ಕಾನೂನನ್ನು ಜಾರಿಗೆ ತರಲಾಗಿದ್ದು, ಇದರ ಅನುಸಾರ, ಇನ್ನು ಮುಂದೆ ಕೇವಲ ವಿವಾಹವಾಗುವ ಸಲುವಾಗಿ ಧರ್ಮ ಬದಲಾಯಿಸುವಂತಿಲ್ಲ. ಒಂದೊಮ್ಮೆ ಈ ಕಾನೂನನ್ನು ಉಲ್ಲಂಘಿಸಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದು ಎಂದು ಅಂದಾಜಿಸಲಾಗಿದೆ.

ಈಗ ಎಲ್ಲೆಡೆ ಲವ್ ಜಿಹಾದ್ ಪ್ರಕರಣಗಳೂ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲಿ ಕೂಡ ಮದುವೆಯಾಗುವ ಉದ್ದೇಶದಿಂದ ತನ್ನ ಧರ್ಮವನ್ನು ಮರೆಮಾಚುವ ಪ್ರಕರಣ ಕೂಡ ಬೆಳಕಿಗೆ ಬರುತ್ತಿದೆ. ಹೀಗೆ ಮತಾಂತರ ಮಾಡಿದ್ದಲ್ಲಿ ಮೂರರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಬಹುದು.

ವಾಸ್ತವವಾಗಿ, ಈ ವರ್ಷದ ಮಾರ್ಚ್‌ನ ಬಜೆಟ್ ಅಧಿವೇಶನದಲ್ಲಿ, ಹರ್ಯಾಣ ಸರ್ಕಾರವು ಬಲವಂತದ ಮತಾಂತರವನ್ನು ನಿಲ್ಲಿಸುವ ಮಸೂದೆಯನ್ನು ಅಂಗೀಕರಿಸಿದೆ. ಈ ಬಳಿಕ, 1 ಡಿಸೆಂಬರ್ 2022 ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅದರ ನಿಯಮಗಳನ್ನು ನಿರ್ಣಯ ಮಾಡಲಾಗಿದೆ.

ಅಧಿಸೂಚಿತ ನಿಯಮಗಳ ಅನುಸಾರ, ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಉದ್ದೇಶಿಸಿರುವ ಯಾವುದೇ ವ್ಯಕ್ತಿ, ಅಂತಹ ಮತಾಂತರಗೊಳ್ಳುವ ಮೊದಲು, ಅವರು ಶಾಶ್ವತವಾಗಿ ನೆಲೆಸಿರುವ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಫಾರ್ಮ್ ‘ಎ’ ನಲ್ಲಿ ಘೋಷಣೆಯನ್ನು ನೀಡಬೇಕಾಗಿದೆ.

ಮತಾಂತರಗೊಳ್ಳಲು ಉದ್ದೇಶಿಸಿರುವ ವ್ಯಕ್ತಿಯು ಅಪ್ರಾಪ್ತರಾಗಿದ್ದರೆ, ಪೋಷಕರು ಫಾರ್ಮ್ ‘ಬಿ’ ನಲ್ಲಿ ಘೋಷಣೆಯನ್ನು ನೀಡಬೇಕು. ಯಾವುದೇ ಧಾರ್ಮಿಕ ಪುರೋಹಿತರು ಅಥವಾ ಕಾಯಿದೆಯ ಅಡಿಯಲ್ಲಿ ಮತಾಂತರವನ್ನು ಸಂಘಟಿಸಲು ಉದ್ದೇಶಿಸಿರುವ ಯಾವುದೇ ವ್ಯಕ್ತಿ ಅಂತಹ ಮತಾಂತರವನ್ನು ಆಯೋಜಿಸಲು ಉದ್ದೇಶಿಸಿರುವ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಿ ನಮೂನೆಯಲ್ಲಿ ಪೂರ್ವ ಸೂಚನೆಯನ್ನು ನೀಡಬೇಕು ಎಂದು ನಿಯಮಗಳು ಸೂಚಿಸುತ್ತವೆ.

ಇದರ ಜೊತೆಗೆ ಜಿಲ್ಲಾಧಿಕಾರಿಗಳು ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಬೇಕಾಗಿದ್ದು, ಉದ್ದೇಶಿತ ಪರಿವರ್ತನೆಗೆ ಯಾವುದಾದರೂ ಆಕ್ಷೇಪಣೆಗಳನ್ನು ಲಿಖಿತವಾಗಿ ಆಹ್ವಾನಿಸಬೇಕಾಗಿದೆ. ಉದ್ದೇಶಪೂರ್ವಕವಾಗಿ ಇಲ್ಲವೆ ಒತ್ತಾಯಪೂರ್ವಕ ವಾಗಿ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಉದ್ದೇಶಿಸಿರುವ ವ್ಯಕ್ತಿಯು, ಯಾವುದೇ ತಪ್ಪು ನಿರೂಪಣೆ, ಬಲದ ಬಳಕೆ, ಬೆದರಿಕೆ, ಅನಗತ್ಯ ಪ್ರಭಾವ, ಬಲವಂತ, ಆಮಿಷ ಅಥವಾ ಯಾವುದೇ ಮೋಸದ ವಿಧಾನಗಳನ್ನು ಅನುಸರಿಸದೆ ನಿರ್ಣಯ ಘೋಷಣೆ ಮಾಡಿದ ಬಳಿಕ ಅಂತಹ ಸೂಚನೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಘೋಷಣೆ ಮಾಡುವಾಗ, ಮತಾಂತರ ಆಗುವ ವ್ಯಕ್ತಿಗಳು ಮತಾಂತರಕ್ಕೆ ಕಾರಣ, ಎಷ್ಟು ದಿನದಿಂದ ಅವರು ತ್ಯಜಿಸಲು ನಿರ್ಧರಿಸಿದ ಧರ್ಮವನ್ನು ಪ್ರತಿಪಾದಿಸುತ್ತಿದ್ದರು. ಅವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರೇ, ಉದ್ಯೋಗ ಇಲ್ಲವೇ ಇನ್ನಿತರೆ ಕಾರಣಕ್ಕಾಗಿ ಮತಾಂತರ ಹೊಂದಲು ಬಯಸುತ್ತಿದ್ದಾರೆಯೇ ಎಂಬಿತ್ಯಾದಿ ವಿವರಗಳನ್ನು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದ್ದಾರೆ.

ಹರ್ಯಾಣದಲ್ಲಿ ಜಾರಿಯಾಗಿರುವ ಮತಾಂತರ ವಿರೋಧಿ ಕಾನೂನನ್ನು ಉಲ್ಲಂಘಿಸುವವರಿಗೆ 10 ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಮತಾಂತರ ವಿರೋಧಿ ಕಾನೂನನ್ನು ಉಲ್ಲಂಘಿಸಿರುವುದು ದೃಢಪಟ್ಟರೆ ತಪ್ಪಿತಸ್ಥರಿಗೆ ಗರಿಷ್ಠ ಹತ್ತು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದ್ದು, ಇದರೊಂದಿಗೆ ಸಂತ್ರಸ್ತರು ಜೀವನಾಂಶವನ್ನೂ ಪಾವತಿಸಬೇಕಾಗುತ್ತದೆ.

ಇನ್ನೊಂದೆಡೆ, ಆರೋಪಿಯು ಮೃತಪಟ್ಟರೆ ,ಈ ಬಳಿಕ ಅವನ ಸ್ಥಿರ ಆಸ್ತಿಯನ್ನು ಮಾರಾಟ ಮಾಡಲಾಗುತ್ತದೆ. ಜೊತೆಗೆ ಸಂತ್ರಸ್ತರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗುತ್ತದೆ. ಕಾನೂನಿನ ಉಲ್ಲಂಘನೆಯು ಗುರುತಿಸಬಹುದಾದ ಮತ್ತು ಜಾಮೀನು ರಹಿತ ಅಪರಾಧವಾಗಿ ಪರಿಗಣಿಸಲಾಗುತ್ತದೆ.

Leave A Reply

Your email address will not be published.