ಗುಲಾಬಿ ದಳ ಹೀಗೆ ಬಳಸಿ ಮುಖದ ಅಂದ ಹೆಚ್ಚುತ್ತೆ, ಮೊಡವೆ ಹತ್ತಿರ ಸುಳಿಯಲ್ಲ!!!

ಹೂವಿನ ರಾಜ ಗುಲಾಬಿ ಹೂವನ್ನು ಪ್ರೀತಿಯ ಸಂಕೇತವೆಂದು ಹೇಳುತ್ತಾರೆ. ಗುಲಾಬಿ ಹೂವನ್ನು ಎಲ್ಲರೂ ಇಷ್ಟ ಪಡುತ್ತಾರೆ ಮತ್ತು ತಲೆಗೆ ಮುಡಿಯುತ್ತಾರೆ. ಆದರೆ ನಿಮಗೆ ತಿಳಿದಿದೆಯೇ? ಗುಲಾಬಿ ಹೂವಿನ ಒಂದು ಅದ್ಭುತವಾದ ರೆಸಿಪಿಯ ಮೂಲಕ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಸಹ ಹೆಚ್ಚು ಮಾಡಿಕೊಳ್ಳಬಹುದು ಎಂದು? ಹಾಗಾದರೆ ನಾವಿಂದು ಚರ್ಮದ ಪ್ರಯೋಜನಗಳು ಸೇರಿದಂತೆ ಇನ್ನಿತರ ಆರೋಗ್ಯಕರ ಲಾಭಗಳಿಗೆ ಗುಲಾಬಿ ಹೂಗಳನ್ನು ಯಾವ ರೀತಿ ಬಳಸಬಹುದು ಎಂಬುವುದನ್ನು ತಿಳಿಸಿಕೊಡುತ್ತೇವೆ.

ಸನ್‌ಸ್ಕ್ರೀನ್ ಲೋಷನ್:- ನೀವು ಗುಲಾಬಿ ದಳಗಳನ್ನು ಬಳಸಿ ಸನ್‌ಸ್ಕ್ರೀನ್‌ ಅನ್ನು ಮನೆಯಲ್ಲೇ ತಯಾರಿಸಬಹುದು. ಸ್ವಲ್ಪ ಸೌತೆಕಾಯಿ ರಸ, ಗ್ಲಿಸರಿನ್ ಹಾಗೂ ರೋಸ್‌ ವಾಟರ್ ಮಿಕ್ಸ್ ಮಾಡಿದರೆ ಸಾಕು ಸನ್‌ಸ್ಕ್ರೀನ್‌ ಲೋಷನ್‌ ರೆಡಿಯಾಗುತ್ತೆ. ಬಿಸಿಲಿಗೆ ಹೋಗುವಾಗ ಇದನ್ನು ಹಚ್ಚಿದರೆ ತ್ವಚೆಗೆ ಯಾವುದೇ ಹಾನಿ ಉಂಟಾಗದಂತೆ ರಕ್ಷಣೆ ಮಾಡುತ್ತದೆ.

ಮೊಡವೆ ಸಮಸ್ಯೆ:- ನೈಸರ್ಗಿಕವಾದ ರೀತಿಯಲ್ಲಿ ನಿಮ್ಮ ಮುಖದ ಮೇಲಿನ ಮೊಡವೆಗಳಿಗೆ ಪರಿಹಾರ ಸಿಗಬೇಕು ಎಂದರೆ ನೀವು ರೋಸ್ ವಾಟರ್ ಬಳಕೆ ಮಾಡಬಹುದು.ರೋಸ್‌ ವಾಟರ್‌ ಅನ್ನು ಸ್ಕಿನ್‌ ಟೋನರ್ ಆಗಿ ಬಳಸುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು. ನಿಮ್ಮ ತ್ವಚೆಗೆ ಅನುಕೂಲಕರವಾಗಿ ಇದೊಂದು ಅತ್ಯದ್ಭುತ ಮಾಯಿಶ್ಚರೈಸರ್ ಆಗಿ ಕೆಲಸ ಮಾಡಲಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹೆಚ್ಚಾಗಿರುವ ಕಾರಣ ಮೊಡವೆಗಳ ವಿರುದ್ಧ ಇದು ಕೆಲಸ ಮಾಡಬಲ್ಲದು. ಸೋರೋಸಿಸ್‌ ಸಮಸ್ಯೆ ಇರುವವರಿಗೆ ರೋಸ್‌ ವಾಟರ್‌ ಒಳ್ಳೆಯದು.

ಡಾರ್ಕ್ ಸರ್ಕಲ್ :- ರೋಸ್‌ ವಾಟರ್‌ ಸ್ವಲ್ಪ ಹತ್ತಿಯ ಉಂಡೆಗೆ ಹಚ್ಚಿ ಕಣ್ಣಿನ ಕೆಳಭಾಗಕ್ಕೆ ಹಚ್ಚಿ, ಹೀಗೆ ಮಾಡುವುದರಿಂದ ಡಾರ್ಕ್‌ ಸರ್ಕಲ್ ಹೋಗಲಾಡಿಸಬಹುದು.

ತುಟಿಯ ಹೊಳಪು:- ಕೆಂಪು ಗುಲಾಬಿ ದಳದ ರಸ ತುಟಿಗೆ ಹಚ್ಚಿ ಹೀಗೆ ಮಾಡಿದರೆ ತುಟಿಯ ಕಪ್ಪು ಬಣ್ಣ ಕಡಿಮೆಯಾಗುವುದು, ತುಟಿಯ ಹೊಳಪು ಹೆಚ್ಚುವುದು.

ತ್ವಚೆ:- ನಿಮ್ಮ ತ್ವಚೆ ಒರಟಾಗಿದ್ದರೆ ಗುಲಾಬಿ ದಳದ ಎಣ್ಣೆಯ ಮಸಾಜ್ ಮಾಡುವುದರಿಂದ ತ್ವಚೆ ಮೃದುವಾಗುವುದು, ಅದರಲ್ಲೂ ಸೆನ್ಸಿಟಿವ್ ತ್ವಚೆಯವರಿಗೆ ಈ ಎಣ್ಣೆಯ ಮಸಾಜ್ ತುಂಬಾನೇ ಒಳ್ಳೆಯದು.

ಸ್ಕಿನ್ ಟೋನರ್:- ಮುಖದಲ್ಲಿರುವ ಕೊಳೆ, ಮುಖದ ಮೇಕಪ್ ತೆಗೆಯಲು ಸ್ಕಿನ್ ಟೋನರ್ ಆಗಿ ಗುಲಾಬಿಯನ್ನು ಬಳಸಬಹುದು. ಒಂದು ಕಾಟನ್‌ ಬಟ್ಟೆಗೆ ರೋಸ್‌ವಾಟರ್ ಹಾಕಿ ಅದರಿಂದ ಮುಖವನ್ನು ಒರೆಸಿ. ರಾತ್ರಿ ಮಲಗುವಾಗ ಇದನ್ನು ಮೇಕಪ್‌ ತೆಗೆಯಲು ಬಳಸಿ, ಈ ರೋಸ್‌ ವಾಟರ್ ತ್ವಚೆಯನ್ನು ಪೋಷಣೆ ಮಾಡುತ್ತದೆ.

ಗುಲಾಬಿ ದಳದ ಕ್ಲೆನ್ಸರ್:- ಗುಲಾಬಿ ದಳವನ್ನು ಕ್ಲೆನ್ಸರ್ ಆಗಿ ಬಳಸುವುದಾದರೆ, ನೀರಿಗೆ ಗುಲಾಬಿ ದಳಗಳನ್ನು ಹಾಕಿ 4-5 ಗಂಟೆ ಬಿಡಿ ನಂತರ ಅವುಗಳನ್ನು ಪೇಸ್ಟ್ ಮಾಡಿ, ಅದಕ್ಕೆ 2 ಚಮಚ ಜೇನು ಸೇರಿಸಿ. ಈಗ ಈ ಮಿಶ್ರಣ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಹನಿ ರೋಸ್‌ ಮಾಸ್ಕ್:- ಗುಲಾಬಿಗಳನ್ನು ನೀರಿನಲ್ಲಿ 4 ಗಂಟೆ ನೆನೆಹಾಕಿ ರುಬ್ಬಿ, ನಂತರ ಅದಕ್ಕೆ ಮೊಸರು ಹಾಗೂ ಜೇನು ಸೇರಿಸಿ ಮುಖಕ್ಕೆ ಹಚ್ಚಿ, ಚಳಿಗಾಲದಲ್ಲಿ ಮುಖ ಒಡೆಯುವುದನ್ನು ತಡೆಗಟ್ಟಲು ಈ ಮಾಸ್ಕ್‌ ತುಂಬಾನೇ ಸಹಕಾರಿ.

ರೋಸ್ ವಾಟರ್:- 1 ಕಪ್ ಗುಲಾಬಿ ಹೂಗಳ ತಾಜಾ ದಳಗಳನ್ನು ಪಾತ್ರೆಗೆ ಹಾಕಿ ಶುದ್ಧವಾದ ನೀರನ್ನು ಸುರಿಯಿರಿ.ನಂತರ ಕಡಿಮೆ ಉರಿಯಲ್ಲಿ ಒಂದು ಗಂಟೆ ಕಾಯಿಸಿ. ನಂತರ ತಣ್ಣಗಾದ ಮೇಲೆ ಸೋಸಿ ಬಾಟಲಿನಲ್ಲಿ ಹಾಕಿಟ್ಟು ಬಳಸಬಹುದು. ಈ ರೀತಿ ಮಾಡಿದರೆ ಯಾವುದೇ ಕೆಮಿಕಲ್ ಇಲ್ಲದ ರೋಸ್‌ ವಾಟರ್ ನೀವು ಮನೆಯಲ್ಲಿಯೇ ಮಾಡಬಹುದು.

ರೋಸ್ ಆಯಿಲ್:- ರೋಸ್‌ ಆಯಿಲ್ ಮಾರುಕಟ್ಟೆಯಲ್ಲಿ ಸಿಗುತ್ತೆ, ಇಲ್ಲದಿದ್ದರೆ ಸ್ವಲ್ಪ ಗುಲಾಬಿ ದಳಗಳನ್ನು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹಾಕಿ ಒಂದು ರಾತ್ರಿ ಬಿಟ್ಟು ಸೋಸಿ ಅದನ್ನು ಮುಖದ ಮಸಾಜ್‌ಗೆ ಬಳಸಿ.

ರೋಸ್‌ ದಳಗಳ ಜ್ಯೂಸ್‌:- ನೀವು ದಿನಾ ಅಥವಾ ವಾರದಲ್ಲಿ ಎರಡರಿಂದ-ಮೂರು ಬಾರಿ ಗುಲಾಬಿ ದಳಗಳ ಜ್ಯೂಸ್ ಕುಡಿಯುವುದರಿಂದ ಮುಖದ ಕಾಂತಿ ತುಂಬಾನೇ ಹೆಚ್ಚುವುದು. ನೀವು ಹಾಲಿಗೆ ಗುಲಾಬಿ ದಳಗಳನ್ನು ಹಾಕಿ ಜ್ಯೂಸ್‌ ಮಾಡಿ ಕುಡಿಯಿರಿ. ತುಂಬಾ ಒಳ್ಳೆಯದು.

ಈ ಎಲ್ಲಾ ಸೌಂದರ್ಯ ವರ್ಧಕಗಳನ್ನು ತಯಾರಿಸುವಾಗ ನಿಮ್ಮ ಮನೆಯಲ್ಲಿ ಬೆಳೆದ ಗುಲಾಬಿ ಹೂವನ್ನೇ ಆದಷ್ಟು ಬಳಸಿರಿ. ಏಕೆಂದರೆ ಮಾರುಕಟ್ಟೆಯಿಂದ ತರುವ ಗುಲಾಬಿಗಳಿಗೆ ಬೇಗನೆ ಬಾಡದಿರಲು ಕೆಮಿಕಲ್ ಸ್ಪ್ರೇ ಮಾಡಿರುತ್ತಾರೆ, ಅವುಗಳನ್ನು ಬಳಸಬೇಡಿ, ಬಳಸುವುದಾದರೂ ಅವುಗಳಲ್ಲಿ ಕೆಮಿಕಲ್ ಹಾಕಿಲ್ಲ ಎಂದು ಖಾತರಿಪಡಿಸಿ ಆನಂತರ ಬಳಸಿ.

Leave A Reply

Your email address will not be published.