ಈ ರೈಲಿನ ಒಂದು ಟಿಕೆಟ್ ನ ಬೆಲೆ ಬರೋಬ್ಬರಿ 19.9 ಲಕ್ಷ ರೂಪಾಯಿ | ಅಂಥದ್ದೇನಿದೆ ಮಹಾರಾಜ ಎಕ್ಸ್ ಪ್ರೆಸ್ ಟ್ರೈನಿನಲ್ಲಿ ?

ನವದೆಹಲಿ: ಭಾರತದಲ್ಲಿ ರೈಲುಗಳು ಜನಸಾಮಾನ್ಯರ ನೆಚ್ಚಿನ ಸಂಪರ್ಕ ಸಾಧನಗಳು. ಅತ್ಯಂತ ಕಡಿಮೆ ವೆಚ್ಚದಲ್ಲಿ ಗರಿಷ್ಠ ದೂರವನ್ನು ತಲುಪಲು ದೇಶದ ಹೆಚ್ಚಿನ ನಾಗರಿಕರು ಆಯ್ಕೆ ಮಾಡಿಕೊಳ್ಳುವುದು ರೈಲುಗಳನ್ನು. ಭಾರತೀಯ ರೈಲ್ವೆ ಅಂದರೆ ಅದು ಅತ್ಯಂತ ಕಡಿಮೆ ವೆಚ್ಚದ ಪ್ರಯಾಣ ಎನ್ನುವುದು ಈತನದ ನಮ್ಮ ನಂಬಿಕೆ. ಆದರೆ ಈಗ ಅದಕ್ಕೊಂದು ದೊಡ್ಡ ಅಪವಾದವೇನೋ ಎಂಬಂತೆ ‘ ಮಹಾರಾಜ ‘ ಹೊರಟು ನಿಂತಿದ್ದಾನೆ. ಮಹಾರಾಜ ಎಕ್ಸ್ಪ್ರೆಸ್ ಎಂಬ ಭಾರತೀಯ ರೈಲ್ವೆಯ ಲಕ್ಸರಿ ಟ್ರೈನಿನ ಟಿಕೆಟ್ ಬೆಲೆ ಬರೋಬ್ಬರಿ 19 ಲಕ್ಷ ರೂಪಾಯಿಗಳು !!!

ನಿತ್ಯ ಸಾಮಾನ್ಯ ರೈಲುಗಳಲ್ಲಿ (Railway) ಪ್ರಯಾಣಿಸುವಾಗ ಹಳಿಗಳ ಕುಲುಕಾಟದ ಶಬ್ಧ, ಸೀಟಿಗಾಗಿ ಗದ್ದಲ, ಸಹ ಪ್ರಯಾಣಿಕರ ಬೆವರ ವಾಸನೆಯನ್ನು ಅನಿವಾರ್ಯವಾಗಿ ಅನುಭವಿಸುತ್ತಾ ಎಷ್ಟೋ ಸಲ ಸಲ ನಿಂತುಕೊಂಡೆ ಪ್ರಯಾಣಿಸಬೇಕಾದ ಅಗತ್ಯ, ಟ್ರೈನಿನ ಟಾಯ್ಲೆಟ್ ನಿಂದ ಬರುವ ಕೊಳಕು ವಾಸನೆ, ದೀರ್ಘ ಸಮಯದವರೆಗೆ ತೆಗೆದುಕೊಳ್ಳುವ ಪ್ರಯಾಣ ಇಂತಹಾ ಎಲ್ಲ ರೀತಿಯ ಅನುಭವ ಸಾಮಾನ್ಯ ರೈಲುಗಳಲ್ಲಿ ಸಾಮಾನ್ಯ. ಆದರೆ ಇವುಗಳ ಕಿರಿಕಿರಿ ಇಲ್ಲದೆ ಮಹಾರಾಜನಂತೆ ರೈಲಿನಲ್ಲಿ ಪ್ರಯಾಣಿಸಬೇಕು ಎಂಬ ಇರಾದೆ ನಿಮಗಿದ್ದರೆ ಮತ್ತು ಅದಕ್ಕೆ ಖರ್ಚು ಮಾಡಬಲ್ಲ ಕರೆನ್ಸಿ ನಿಮ್ಮ ಜೇಬಿನಲ್ಲಿದ್ದರೆ ನಿಮಗೆ ಹೇಳಿ ಮಾಡಿಸಿದ ರೈಲು ಮಹಾರಾಜ ಎಕ್ಸ್ಪ್ರೆಸ್. ಇದೀಗ ಲಕ್ಷ-ಲಕ್ಷ ಹಣ ಕೊಟ್ಟು ಮಹಾರಾಜನಂತೆ ಪ್ರಯಾಣಿಕರು ಪ್ರವಾಸ ಕೈಗೊಳ್ಳುವ ಅವಕಾಶ ರೈಲ್ವೆ ಇಲಾಖೆ ಕಲ್ಪಿಸಿದೆ. ಅದಕ್ಕಾಗಿ ಮಹಾರಾಜ ಎಕ್ಸ್‌ಪ್ರೆಸ್‌ ವಿಶೇಷ ರೈಲು (Maharajas Express) ಸೇವೆಯನ್ನು ಜಾರಿಗೊಳಿಸಿದೆ.

ಹೌದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನಿರ್ವಹಿಸುವ ಮಹಾರಾಜ ಎಕ್ಸ್‌ಪ್ರೆಸ್‌ ರೈಲು ಅತ್ಯಂತ ಐಷಾರಾಮಿ ಅನುಭವವನ್ನು ನೀಡುತ್ತದೆ. ಬರುವ ಅತಿಥಿಗಳಿಗೆ ಸ್ವರ್ಗ ಲೋಕವನ್ನೇ ತೆರೆದಿಟ್ಟು ಫೈವ್ ಸ್ಟಾರ್ ಆತಿಥ್ಯವನ್ನಿ ನೀಡಿ ಗ್ರಾಹಕರನ್ನು ಸಂತೃಪ್ತಿಪಡಿಸುತ್ತದೆ. ದಿ ಇಂಡಿಯನ್ ಪನೋರೋಮಾ, ಟ್ರೆಷರ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಸ್ಪ್ಲೆಂಡರ್ ಮತ್ತು ದಿ ಹೆರಿಟೇಜ್ ಆಫ್ ಇಂಡಿಯಾ ನಾಲ್ಕು ವಿಭಾಗಗಳಲ್ಲಿ ಈ ಐಷಾರಾಮಿ ರೈಲು ಸಂಚರಿಸಲಿದ್ದು, ಪ್ರಯಾಣಿಕರು ಯಾವುದಾರೂ ಒಂದನ್ನು ಆಯ್ಕೆ ಮಾಡಿಕೊಂಡು 7 ದಿನಗಳ ಕಾಲ ಈ ಟ್ರೈನಿನಲ್ಲಿ ಪ್ರವಾಸ ಮಾಡಬಹುದಾಗಿದೆ. ಎಲ್ಲ ರೀತಿಯ ಅತ್ಯಾಧುನಿಕ ಸೇವೆಗಳೂ ಇದರಲ್ಲಿ ಲಭ್ಯವಿರಲಿದೆ. ಆದ್ರೆ ಒಬ್ಬರಿಗೆ ಟಿಕೆಟ್ ದರ 19 ಲಕ್ಷ ರೂ., GST ಸೇರಿಸಿದರೆ 19,90,800 ರೂಪಾಯಿಗಳು ಎಂದು ಐಆರ್‌ಸಿಟಿಸಿ ಹೇಳಿದೆ.

ಈ ಟ್ರೈನಿನಲ್ಲಿ ಇರುವ ವಿಶೇಷತೆಗಳೇನು ಗೊತ್ತಾ ?

ಮಹಾರಾಜ ಎಕ್ಸ್ಪ್ರೆಸ್ ರೈಲಿನ ಒಂದು ಕೋಚ್‌ನಲ್ಲಿ ಡೈನಿಂಗ್ ಹಾಲ್, ಸ್ನಾನಗೃಹ ಹಾಗೂ ಎರಡು ಐಷಾರಾಮಿ ಬೆಡ್‌ರೂಮ್‌ಗಳು, ಎರಡು ದೊಡ್ಡ ಕಿಟಕಿಗಳು ಇರಲಿವೆ. ಪ್ರತಿ ಪ್ಯಾಸೆಂಜರ್‌ಗೂ ಪ್ರತ್ಯೇಕ ಬಟ್ಲರ್‌ಗಳ ಸೇವೆಗೆ ಮೀಸಲಾಗಿರುತ್ತದೆ. ಮಿನಿ ಬಾರ್, ಎಸಿ ಹಾಗೂ ವೈ-ಫೈ ಸೌಲಭ್ಯ, ಇಂಟರ್‌ನೆಟ್, ಟಿವಿ ಹಾಗೂ ತಮ್ಮಿಷ್ಟದ ಸಿನಿಮಾಗಳನ್ನು ನೋಡಲು ಡಿವಿಡಿ ಪ್ಲೇಯರ್‌ಗಳ ಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ. ಇದು ಭಾರತೀಯ ರೈಲ್ವೆಯಲ್ಲೇ ಅತ್ಯಂತ ದುಬಾರಿ ಟಿಕೆಟ್ ಕೋಚ್ ಆಗಿದೆ.

ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಮಹಾರಾಜ ಎಕ್ಸ್‌ಪ್ರೆಸ್‌ ರೈಲಿನ ವಿಶೇಷತೆಯ ವೀಡಿಯೋ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೆಯೇ ಟೀಕೆಗಳೂ ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋಶಿಯಲ್ ಮೀಡಿಯಾದ ಒಬ್ಬರು, ನಾನು ಆ ದರದಲ್ಲಿ ಆಸ್ತಿಯನ್ನೇ ಖರೀದಿಸುತ್ತೇನೆ ಅಂದಿದ್ದಾರೆ. ಮತ್ತೊಬ್ಬರು ಇಷ್ಟು ದುಬಾರಿ ಮೊತ್ತದಲ್ಲಿ ನಾನು ನ್ಯೂಯಾರ್ಕ್ ನಗರ ಅಥವಾ ವಿದೇಶದಲ್ಲಿ ಯಾವುದೇ ದೇಶಕ್ಕಾದರೂ ಭೇಟಿ ನೀಡಬಹುದು. ಅಲ್ಲದೆ, ಅಲ್ಲಿ ಭೇಟಿ ನೀಡಿದ ಮೇಲೂ ಹಣ ಉಳಿಯುತ್ತದೆ ಎಂದು ದುಬಾರಿ ಟ್ರೈನ್ ಟಿಕೆಟ್ ನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

https://www.instagram.com/reel/CllnQdKjnTp/?igshid=YmMyMTA2M2Y=

Leave A Reply

Your email address will not be published.