ಗೂಗಲ್ ಕ್ರೋಮ್ ನಲ್ಲಿ ‘ಶಾಪಿಂಗ್’ ಫೀಚರ್ಸ್ | ಕ್ಷಣ ಮಾತ್ರದಲ್ಲಿ ಟ್ರ್ಯಾಕ್ ಮಾಡಬಹುದು ನಿಮ್ಮ ನೆಚ್ಚಿನ ಉತ್ಪನ್ನದ ಬೆಲೆ!
ಇಂದಿನ ಟೆಕ್ನಾಲಜಿ ಯುಗದಲ್ಲಿ ಶಾಪಿಂಗ್ ಗಾಗಿ ಅಂಗಡಿಗಳಿಗೆ ಹೋಗಬೇಕಾಗಿಲ್ಲ. ಅಮೆಜಾನ್, ಫ್ಲಿಪ್ಕಾರ್ಟ್ ಹೀಗೆ ಅನೇಕ ಶಾಪಿಂಗ್ ಮಾಲ್ ಮೂಲಕ ಖರೀದಿ ಮಾಡಬಹುದು. ಅಷ್ಟೇ ಅಲ್ಲದೆ ಈಗ ಗೂಗಲ್ ಕ್ರೋಮ್ ಮೂಲಕನೂ ಶಾಪಿಂಗ್ ಮಾಡಬಹುದಾಗಿದೆ.
ಹೌದು. ಗೂಗಲ್ ಕ್ರೋಮ್ನಲ್ಲಿ ಶಾಪಿಂಗ್ ಎಂಬ ಫೀಚರ್ಸ್ ಅನ್ನು ಪರಿಚಯಿಸಲಾಗಿದ್ದು, ಕ್ಷಣ ಮಾತ್ರದಲ್ಲಿ ಯಾವ ಪ್ಲಾಟ್ಫಾರ್ಮ್ನಲ್ಲಿ ಯಾವ ವಸ್ತುವಿಗೆ ಎಷ್ಟು ಬೆಲೆ ಎಂಬುದನ್ನು ಕಂಡುಕೊಳ್ಳಬಹುದು. ಗೂಗಲ್ ಕ್ರೋಮ್ ಇದೀಗ ನಿಮ್ಮ ಮೆಚ್ಚಿನ ಉತ್ಪನ್ನದ ಬೆಲೆಗಳನ್ನು ಟ್ರ್ಯಾಕ್ ಮಾಡಲು ಅನುಮತಿ ನೀಡಿದೆ. ಈ ಮೂಲಕ ಆ ಪ್ರೊಡಕ್ಟ್ನ ಬೆಲೆ ಯಾವಾಗ ಕಡಿಮೆಯಾಗುತ್ತದೆಯೋ ಆ ವೇಳೆ ನೀವು ಖರೀದಿ ಮಾಡಬಹುದು. ಇದಕ್ಕೆ ನೀವು ಮಾಡಬೇಕಿರುವುದು ಏನೆಂದರೆ ವಿವಿಧ ವೆಬ್ಸೈಟ್ಗಳಲ್ಲಿನ ಬೆಲೆಗಳನ್ನು ಹೋಲಿಸಿ, ಅವುಗಳಲ್ಲಿನ ಕೊಡುಗೆಗಳನ್ನು ಪರಿಶೀಲಿಸಿ ನಂತರ ನಿಮ್ಮ ಆಯ್ಕೆಯ ಉತ್ಪನ್ನವನ್ನು ಕಡಿಮೆ ಬೆಲೆಗೆ ಯಾವ ಪ್ಲಾಟ್ಫಾರ್ಮ್ ಮಾರಾಟ ಮಾಡುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೀವು ಖರೀದಿಸಲು ಬಯಸುವ ಪ್ರೊಡಕ್ಟ್ ಕೆಲವೊಮ್ಮೆ ಆಯ್ದ ಪ್ಲಾಟ್ಫಾರ್ಮ್ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಈ ರೀತಿ ಸಂದರ್ಭ ಎದುರಾದಾಗ ಪದೇ ಪದೇ ಈ ಪ್ರೊಡಕ್ಟ್ನ ಟ್ಯಾಬ್ ಓಪನ್ ಮಾಡಿಕೊಂಡು ಬೆಲೆ ಎಷ್ಟಿದೆ ಎಂಬುದನ್ನು ನೋಡುವುದು ಕಷ್ಟದ ಕೆಲಸ. ಇದಕ್ಕಾಗಿ ನೀವು ಗೂಗಲ್ ಕ್ರೋಮ್ನ ಈ ಹೊಸ ಸೌಲಭ್ಯ ಆಶ್ರಯಿಸಬಹುದಾಗಿದೆ.
ಈ ಟ್ರ್ಯಾಕ್ ವ್ಯವಸ್ಥೆಯಿಂದಾಗಿ ಪ್ರೊಡಕ್ಟ್ನ ಬೆಲೆ ಯಾವಾಗ ಕಡಿಮೆಯಾಗುತ್ತದೆಯೋ ಆವಾಗ ನಿಮಗೆ ಮಾಹಿತಿ ಇಮೇಲ್ ಮೂಲಕ ಬರುತ್ತದೆ. ಇದರಿಂದ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇದರಿಂದ ನಿಮ್ಮ ಹಣ ಉಳಿತಾಯ ಆಗುವ ಜೊತೆಗೆ ಆಗಾಗ್ಗೆ ಕ್ರೋಮ್ ಓಪನ್ ಮಾಡಿ ನೋಡುವ ಸಮಯವೂ ತಗ್ಗುತ್ತದೆ.
ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಪ್ರೊಡಕ್ಟ್ ಬೆಲೆಗಳನ್ನು ನೀವು ಹೇಗೆ ಟ್ರ್ಯಾಕ್ ಎನ್ನುವುದಕ್ಕೆ ಈ ಮಾರ್ಗ ಅನುಸರಿಸಿ. ಮೊದಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕ್ರೋಮ್ ಆಪ್ ಓಪನ್ ಮಾಡಿ. ನಂತರ ಡಿಸ್ಪ್ಲೇ ನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
ಇದಾದ ಬಳಿಕ ಸೆಟ್ಟಿಂಗ್ ಆಯ್ಕೆಗೆ ಹೋಗಿ ಅಲ್ಲಿ ಗೂಗಲ್ ಸೇವೆಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರಲ್ಲಿ ಟ್ರ್ಯಾಕ್ ಪ್ರೈಸ್ ಆನ್ ಟ್ಯಾಬ್ಸ್ ಅನ್ನು ಆನ್ ಮಾಡಿ. ಇದಾದ ನಂತರ ಯಾವ ಇ-ಕಾಮರ್ಸ್ ತಾಣದಲ್ಲಿ ಯಾವ ಪ್ರೊಡಕ್ಟ್ ಅನ್ನು ಖರೀದಿ ಮಾಡಬೇಕು ಎಂದುಕೊಂಡಿರುವಿರೋ ಅದರ ಮೇಲೆ ಟ್ಯಾಪ್ ಮಾಡಿ ನಂತರ ಡಿಸ್ಪ್ಲೇ ಬಲ ಮೂಲೆಯಲ್ಲಿ ಕಾಣಿಸಿಕೊಳ್ಳುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ. ಈ ಮೂಲಕ ನಿಮ್ಮ ಇಷ್ಟದ ಪ್ರೊಡಕ್ಟ್ನ ಬೆಲೆ ಕಡಿಮೆಯಾದಾಗ ನಿಮಗೆ ಇಮೇಲ್ ಸಂದೇಶ ಬರುತ್ತದೆ.