ರಾಜ್ಯದ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧ !? ಅರ್ಚಕರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಮನವಿ

ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆಯನ್ನು ನಿಷೇಧಿಸಬೇಕು ಎಂದು ದೇವಸ್ಥಾನದ ಅರ್ಚಕರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ದೇವಸ್ಥಾನಕ್ಕೆ ಬರುವ ಭಕ್ತರು ಆ ಪವಿತ್ರ ಸ್ಥಳದಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಪೂಜೆಗಳಿಗೆ ತೊಂದರೆ ಆಗುತ್ತಿದೆ. ಅರ್ಚಕರು ಧ್ಯಾನ ಮಾಡುವಾಗ ಅಶ್ಲೀಲ ರಿಂಗ್‌ ಟೋನ್‌ಗಳು ಕೇಳಿ ಬರುತ್ತವೆ. ಕೆಲವರು ದೇವರ ಮೂರ್ತಿ, ಪೂಜೆಯ ಪೋಟೊ ತೆಗೆಯುತ್ತಾರೆ. ಹೀಗೇ ಹಲವಾರು ಕಾರಣಗಳಿಂದ ದೇಗುಲದಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದೆ. ಇನ್ನೂ, ಈ ಒಕ್ಕೂಟ ರಾಜ್ಯದಲ್ಲಿ ಸುಮಾರು 50 ವರ್ಷದಿಂದ ಅರ್ಚಕರು, ಆಗಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಂಸ್ಥೆಯಾಗಿದೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಒಕ್ಕೂಟದ ಮುಖ್ಯಸ್ಥರು, ಪುರೋಹಿತರು, ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ, ಹಜ್ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಹಾಗೇ ಅರ್ಚಕರು ಅರ್ಚನೆ ಮಾಡುವಾಗ ಜನರ ವಿವಿಧ ರೀತಿಯ ವರ್ತನೆಯಿಂದ ಪೂಜೆಯ ಏಕಾಗ್ರತೆ ತಪ್ಪುದಲ್ಲದೆ ಇತರ ಭಕ್ತಾದಿಗಳ ಧ್ಯಾನ, ಪೂಜೆಗಳಿಗೆ ಧಕ್ಕೆ ಉಂಟಾಗುತ್ತದೆ. ಇದರಿಂದಾಗಿ ಭಕ್ತಿಯಿಂದ ಪೂಜಿಸಲು ಬರುವ ಭಕ್ತರಿಗೆ ದೇವಾಲಯದ ವ್ಯವಸ್ಥೆಯ ಬಗ್ಗೆ ತಪ್ಪು ಕಲ್ಪನೆ ಹಾಗೂ ತಪ್ಪು ಭಾವನೆ ಮೂಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ, ದೇಗುಲದಲ್ಲಿ ಪೂಜೆ, ಹೋಮಗಳು ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ನಡೆಯಬೇಕೆಂದರೆ ದೇವಸ್ಥಾನದ ಒಳಗೆ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕು. ಆದರೆ ಮೊಬೈಲ್ ಅನ್ನು ನಿಗದಿತ ಜಾಗದಲ್ಲಿ ಇಡಬಹುದು. ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಬೇರೊಂದು ಜಾಗದಲ್ಲಿ ಮೊಬೈಲ್ ಇಟ್ಟು ಬರಲು ಅವಕಾಶ ನೀಡಲಾಗುವುದು. ಹಾಗೇ ಈ ಬಗ್ಗೆ ಸರ್ಕಾರ ಸೂಕ್ತ ಆದೇಶ ನೀಡುವಂತೆ ಒಕ್ಕೂಟದ ಸದಸ್ಯರು ಮನವಿ ಮಾಡಿದರು. ಇನ್ನೂ, ಸರ್ಕಾರ ಮನವಿ ಪುರಸ್ಕರಿಸಿದರೆ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ ಕಡ್ಡಾಯವಾಗಿ ನಿಷೇಧಗೊಳ್ಳಲಿದೆ ಎನ್ನಲಾಗಿದೆ.

Leave A Reply

Your email address will not be published.