ಪಕ್ಕದ ಮನೆಯ ಹುಂಜ ತುಂಬಾ ಡಿಸ್ಟರ್ಬ್ ಮಾಡ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಪೊಲೀಸರ ಮೊರೆ ಹೋದ ಬೆಂಗಳೂರು ನಿವಾಸಿ !
ವ್ಯಕ್ತಿಯೊಬ್ಬ ಹುಂಜದ ಮೇಲೆ ಕಂಪ್ಲೇಂಟ್ ನೀಡಿದ್ದಾನೆ. ಹುಂಜ ತನಗೆ ಮತ್ತು ತನ್ನ ಕುಟುಂಬಕ್ಕೆ ವಿಪರೀತ ಡಿಸ್ಟರ್ಬ್ ಮಾಡ್ತಿದೆ, ಸಹಾಯ ಮಾಡಿ ಎಂದು ಆತ ಪೋಲೀಸರ ಮೊರೆ ಹೋಗಿದ್ದಾನೆ. ಅಷ್ಟಕ್ಕೂ ಹುಂಜ ಅದೇನು ತೊಂದ್ರೆ ಕೊಡ್ತು ಅಂತ ನೋಡಿದರೆ ಸಿಕ್ಕಿದ್ದು ಹುಂಜ ಬೆಳ್ ಬೆಳಗ್ಗೆ ಬಿಡುತ್ತಿದ್ದ ಅಲಾರಾಂ !!!
ಪಕ್ಕದ ಮನೆಯ ಹುಂಜನಿಗೆ ಬೇಗ ಎಚ್ಚರ ಆಗ್ತದೆ. ಬೆಳಿಗ್ಗೆ 3.30 ಕ್ಕೆಲ್ಲ ಎದ್ದು ಒಂದೇ ಸಮನೆ ” ಕೊಕ್ಕೋಕೋ ಕೋ ” ಎಂದು ಅಲಾರಾಂ ಹೊರಡಿಸ್ತದೆ. ಮುಂಜಾನೆಯ ಈ ಹಳ್ಳಿಯ ನ್ಯಾಚುರಲ್ ಅಲಾರಾಂನಿಂದ ತನಗೆ ಡಿಸ್ಟರ್ಬ್ ಆಗ್ತಿದೆ. ಹೊತ್ತಲ್ಲದ ಹೊತ್ತಲ್ಲಿ ಇಲ್ಲಿನ ಕೋಳಿ ಕೂಗುತ್ತಿದೆ. ಇದರಿಂದ ನಿದ್ದೆಗೆ ಸಮಸ್ಯೆಯಾಗುತ್ತಿದೆ ಎಂದಿದ್ದಾನೆ ಆ ದೂರುದಾರ.
ಬೆಂಗಳೂರಿನ ಜೆ.ಪಿ.ನಗರದ 8ನೇ ಹಂತದ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಇದು ತನ್ನ ಮಗನಿಗೆ ಮತ್ತು ಇತರ ಮನೆ ಮಂದಿಯ ನಿದ್ದೆಗೆ ಭಂಗ ತಂದಿದೆ. ಹೀಗಾಗಿ ವ್ಯಕ್ತಿಯೊಬ್ಬ ಸಮಸ್ಯೆಯಿಂದ ಪಾರು ಮಾಡುವಂತೆ ಪೊಲೀಸರಲ್ಲಿ ಆಗ್ರಹಿಸಿದ್ದಾನೆ.
ಈ ಬಗ್ಗೆ ನಗರ ಪೊಲೀಸರಿಗೆ ಟ್ವಿಟ್ ಮಾಡಿ ಬೆಂಗಳೂರಿನ ಈ ನಿವಾಸಿ ದೂರು ಸಲ್ಲಿಸಿದ್ದಾನೆ. ‘ ನಮ್ಮ ವಠಾರದ ಮನೆಯೊಂದರಲ್ಲಿ ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಇವುಗಳು ಮುಂಜಾನೆ ಮೂರು ಗಂಟೆಗೆಲ್ಲಾ ಕೋಳಿಗಳು ಜೋರಾಗಿ ಕೂಗುತ್ತಿವೆ. ಇದರಿಂದ ನಮ್ಮ ಎರಡು ವರ್ಷದ ಮಗ ನಿದ್ದೆಯಿಂದ ಎದ್ದು ಬಿಡುತ್ತಾನೆ. ಕೊನೆಗೆ ನಮಗೂ ನಿದ್ದೆ ಇಲ್ಲದಂತೆ ಆಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ‘ ಎಂದು ಆತ ಟ್ವಿಟ್ ಮೂಲಕ ಆಗ್ರಹಿಸಿದ್ದಾನೆ. ಜತೆಗೆ ಕೋಳಿ ಕೂಗುವ ಸಡ್ಡು ಬರುವ ವಿಡಿಯೋ ಅನ್ನು ಕೂಡಾ ಶೇರ್ ಮಾಡಿಕೊಂಡಿದ್ದಾನೆ. ಹುಂಜದ ಮೇಲಿನ ದೂರಿಗೂ ಪೊಲೀಸ್ ಟೀಮು ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೂಡಲೇ ದೂರನ್ನು ಸಂಬಂಧಪಟ್ಟ ಪ್ರದೇಶದ ಡಿಸಿಪಿಯವರಿಗೆ ವರ್ಗಾಯಿಸಿದೆ. ದೂರು ಹೋದ ಮೇಲೆ ಇನ್ನು ಹುಂಜದ ಆಯುಷ್ಯ ‘ಅಷ್ಟೇ’ ಅಂತಿದ್ದಾರೆ ಸೋಶಿಯಲ್ ಮೀಡಿಯಾದ ಮಂದಿ.