ಗಲ್ಫ್ ರಾಷ್ಟ್ರದಲ್ಲಿ ಕುಟುಂಬಕ್ಕಾಗಿ ಊಟ ನಿದ್ರೆ ಬಿಟ್ಟು ದಶಕಗಳ ಕಾಲ ದುಡಿದ ಭಾರತೀಯ ನಿಧನ । ಮೃತ ದೇಹವನ್ನು ಸ್ವೀಕರಿಸಲು ನಿರಾಕರಿಸಿದ ಕೃತಘ್ನ ಪತ್ನಿ-ಮಕ್ಕಳು !

“ಒಬ್ಬ ವ್ಯಕ್ತಿಯು ಸತ್ತಾಗ, ಅದು ಕೇವಲ ಒಂದು ದೇಹ ಮಾತ್ರ. ಒಬ್ಬ ಶ್ರೀಮಂತನೋ ಅಥವಾ ಬಡವನೋ, ಪರಿಚಿತನೋ ಅಥವಾ ಅಪರಿಚಿತನೋ ಎಂಬುದು ಮುಖ್ಯವಲ್ಲ” – ಅಶ್ರಫ್ ತಾಮರಸ್ಸೆರಿ । ‘ ನಿಧನರಾದ ಪ್ರಸಿದ್ಧ ವ್ಯಕ್ತಿಯ ( ಬಾಲಿವುಡ್ ನಟಿ ಶ್ರೀದೇವಿಯ) ವಿಷಯದಲ್ಲಿ ಸಹಾಯ ಮಾಡುವಲ್ಲಿ ನಿಮಗೆ ತೃಪ್ತಿ ಇದೆಯೇ’ ಎಂದು ಕೇಳಿದಾಗ ನುಡಿದಿದ್ದ ಅಶ್ರಫ್ !

ಆತ ತನ್ನ ಜೀವನದಲ್ಲಿ ಹಲವು ದಶಕಗಳನ್ನು ಮಧ್ಯಪ್ರಾಚ್ಯದಲ್ಲಿ (ಸೌದಿ (Soudi ) ಕುವೈತ್ (Kuwait ) ಮುಂತಾದ ದೇಶಗಳು) (Gulf Countries) ಕೆಲಸ ಮಾಡುತ್ತಾ ಕಳೆದ. ಈ ಭಾರತೀಯ ವಲಸಿಗ ಕಾರ್ಮಿಕನು ತನ್ನ ಕುಟುಂಬಕ್ಕೆ ಉತ್ತಮ ಜೀವನವನ್ನು ನೀಡಲು ಹಗಲಿರುಳು ದುಡಿದಿದ್ದ. ಆದರೆ ಆತ ಮತ್ತೆ ಮನೆಗೆ ಜೀವಂತ ಮರಳಲೇ ಇಲ್ಲ. ಅಲ್ಲೇ ಸತ್ತು ಇನ್ನೇನು ಆತನ ದೇಹವನ್ನು ಮನೆಗೆ ಕಳಿಸೋಣ ಅಂದು ಕೊಂಡಾಗ ಆತನ ಪತ್ನಿ ಮತ್ತು ಮಕ್ಕಳು ಆತನ ಮೃತ ದೇಹವನ್ನು ಸ್ವೀಕರಿಸಲು ತಿರಸ್ಕರಿಸಿದ್ದಾರೆ.

ಮಧ್ಯ ಪ್ರಾಚ್ಯದಲ್ಲಿ ಸಾವನ್ನಪ್ಪಿದ ಸಾವಿರಾರು ಭಾರತೀಯರ ಮೃತ ದೇಹಗಳನ್ನು ಸ್ವದೇಶಕ್ಕೆ ಕಳುಹಿಸಿದ ದುಬೈ ಮೂಲದ ಎನ್‌ಆರ್‌ಐ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ತಾಮರಸ್ಸೆರಿ, ಶವವನ್ನು ಸ್ವೀಕರಿಸಲು ನಿರಾಕರಿಸಿದ 62 ವರ್ಷದ ವ್ಯಕ್ತಿಯ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ತೀವ್ರ ಬೇಸರ ಮತ್ತು ನೋವನ್ನು ವ್ಯಕ್ತಪಡಿಸಿದ್ದಾರೆ.

ಮೃತರು ಮಧ್ಯಪ್ರಾಚ್ಯದಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದರು ಮತ್ತು ಕಳೆದ ಐದು ವರ್ಷಗಳಿಂದ ಮನೆಗೆ ಕೂಡಾ ಅವರಿಗೆ ಹೋಗಲಾಗಿರಲಿಲ್ಲ. ಅವರು ಹಗಲಿರುಳು ದುಡಿದಿದ್ದರು ಮತ್ತು ತಾನು ಸರಿಯಾಗಿ ಊಟ ಕೂಡಾ ಮಾಡದೆ ಹಣವನ್ನು ಉಳಿಸಿ ಆ ಹಣವನ್ನು ಭಾರತದಲ್ಲಿನ ಅವರ ಕುಟುಂಬಕ್ಕೆ ಕಳುಹಿಸಿದ್ದರು. ಅಂತಹಾ ವ್ಯಕ್ತಿ ಈ ವಾರದ ಆರಂಭದಲ್ಲಿ ನಿಧನರಾದರು. ಅವರ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದಾಗ ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಒಮ್ಮತದಿಂದ ” ನಮಗೆ ಅವರ ದೇಹವು ಅಗತ್ಯವಿಲ್ಲ ” ಎಂದು ಸಾರಾಸಗಟಾಗಿ ಹೇಳಿದ್ದಾರೆ. ತಮಗೆ ಮೃತದೇಹದ ಅಗತ್ಯವಿಲ್ಲ ಎಂದು ಆತನ ಪತ್ನಿ ಖುದ್ದು ಪೊಲೀಸರಿಗೆ ವಾಗ್ದಾನವನ್ನೂ ನೀಡಿದ್ದರು. ಕೊನೆಗೆ ಮೃತನ ಸಹೋದರಿಯ ಕುಟುಂಬದವರು ಮೃತದೇಹವನ್ನು ಸ್ವೀಕರಿಸಿ ಅಂತ್ಯಕ್ರಿಯೆಗಳನ್ನು ಮಾಡಲು ಮುಂದೆ ಬಂದಿತ್ತು ಎಂದು ಅಶ್ರಫ್ ಅವರು ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

“ಸಾವಿನ ನಂತರ ದೇಹಕ್ಕೆ ಅಗೌರವ ತೋರಿಸಬೇಡಿ. ನಮಗೂ ದೇಹವಿದೆ, ನಾಳೆ ಏನಾಗಬಹುದು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಯಾರಿಗೂ ಈ ರೀತಿ ಆಗಬಾರದೆಂದು ಪ್ರಾರ್ಥಿಸುತ್ತೇನೆ” ಎಂದು ಫೇಸ್ ಬುಕ್ ನಲ್ಲಿ ಕಣ್ಣೆವೆ ಒದ್ದೆಯಾಗುವಂತೆ ಬರೆದುಕೊಂಡಿದ್ದಾರೆ ಅಶ್ರಫ್.

ಅಶ್ರಫ್ ತಾಮರಸ್ಸೆರಿ ಯಾರು?
ಕೇರಳದ ಥಾಮರಸ್ಸೆರಿ ಮೂಲದ ಅಶ್ರಫ್, ಗಲ್ಫ್ ರಾಷ್ಟ್ರಗಳಲ್ಲಿ ಸತ್ತ ಮೃತರನ್ನು ಅವರ ಸ್ವಸ್ಥಾನಗಳಿಗೆ ಹಿಂದಿರುಗಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನುಭಾವ. ಕಳೆದ ಎಷ್ಟೋ ವರ್ಷಗಳಲ್ಲಿ ಅಶ್ರಫ್ 2018 ರಲ್ಲಿ ದುಬೈನಲ್ಲಿ ನಿಧನರಾದ ನಟಿ ಶ್ರೀದೇವಿ ಸೇರಿದಂತೆ ಸಾವಿರಾರು ಶವಗಳನ್ನು ಸ್ವೀಕರಿಸಿದ್ದಾರೆ ಮತ್ತು ಸ್ವದೇಶಕ್ಕೆ ಕಳುಹಿಸಿದ್ದಾರೆ.
ತನಗೆ ಇಂತಹ ಅನುಭವ ಆಗುತ್ತಿರುವುದು ಇದೇ ಮೊದಲಲ್ಲವಾದರೂ, ಕುಟುಂಬಕ್ಕಾಗಿ ತನ್ನ ಜೀವನವನ್ನೇ ವ್ಯಯಿಸಿದ ವ್ಯಕ್ತಿಯನ್ನು ತಾನು ಸತ್ತ ನಂತರ ತನ್ನ ಪ್ರೀತಿ ಪಾತ್ರರಿಂದ ತಿರಸ್ಕರಿಸಲ್ಪಟ್ಟಿದೆ ಎಂದು ತಿಳಿಯುವುದು ನೋವಿನ ಸಂಗತಿ ಎಂದು ಅಶ್ರಫ್ ನೋವಿನಿಂದ ಹೇಳಿಕೊಂಡಿದ್ದಾರೆ.

ಗಂಟೆಗಳ ಅಂತರದಲ್ಲಿ ಸತ್ತ ದಂಪತಿಯ ಕಥೆ
ಈ ವಾರದ ಆರಂಭದಲ್ಲಿ, ಅಶ್ರಫ್ ಒಂದೆರಡು ಗಂಟೆಗಳ ಅಂತರದಲ್ಲಿ ಸಾವನ್ನಪ್ಪಿದ ದಂಪತಿಗಳ ಮತ್ತೊಂದು ಹೃದಯವನ್ನು ಮುಟ್ಟುವ ಕಥೆಯನ್ನು ಹಂಚಿಕೊಂಡಿದ್ದರು. ಪತಿ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಮಕ್ಕಳ ಮದುವೆಯಾದ ನಂತರ ಹೆಂಡತಿ ಮನೆಯಲ್ಲಿ ಒಬ್ಬಳೇ ಇದ್ದಳು. ಅವರಲ್ಲಿ ಯಾರಿಗೂ ಒಂಟಿತನ ಕಾಡದಂತೆ ನೋಡಿಕೊಳ್ಳಲು ಅವರು ಪ್ರತಿದಿನ ಸುದೀರ್ಘ ದೂರವಾಣಿ ಸಂಭಾಷಣೆಗಳನ್ನು ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಪತಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದನ್ನು ಪತಿ ಪತ್ನಿಯಿಂದ ಮುಚ್ಚಿಟ್ಟಿದ್ದಾರೆ. ಆದರೆ ಆರು ದಿನಗಳ ನಂತರ ಆತ ತನ್ನ ಆರೋಗ್ಯದ ಬಗ್ಗೆ ಪತ್ನಿಗೆ ತಿಳಿಸಿದ್ದಾನೆ. ಆ ವಿಷ್ಯ ಕೇಳುತ್ತಲೇ ಪತ್ನಿ ಕುಸಿದು ಹೋಗಿದ್ದಳು. ಅಲ್ಲಿಗೆ ಸಂಭಾಷಣೆ ಥಟ್ಟನೆ ಮೊಟಕಾಗಿತ್ತು. ಒಂದೆರಡು ಗಂಟೆಗಳ ನಂತರ, ಆತನ ಅನಾರೋಗ್ಯದ ಬಗ್ಗೆ ಸುದ್ದಿ ಕೇಳಿದ ಪತ್ನಿ ಹೃದಯಾಘಾತದಿಂದ ನಿಧನರಾದರು. ಪತ್ನಿ ಸತ್ತ ಸುದ್ದಿಯನ್ನು ಆತನಿಗೆ ತಿಳಿಸಲಾಯಿತು. ಹೆಂಡತಿಯ ಸಾವಿನ ಸುದ್ದಿ ಕೇಳಿದ ನಂತರ ಗಂಡನ ಆರೋಗ್ಯ ಸ್ಥಿತಿ ಹದಗೆಟ್ಟಿತು. ಮತ್ತು ಆತ ಹತ್ತು ನಿಮಿಷಗಳ ನಂತರ ನಿಧನರಾಗಿದ್ದರು.

ಬಾಲಿವುಡ್ ನಟಿ ಶ್ರೀದೇವಿ ಶವ ಭಾರತಕ್ಕೆ ತರಲು ಕೂಡ ಈತ ಸಹಾಯ ಮಾಡಿದ್ದರು. “ಶ್ರೀದೇವಿ ಸೆಲೆಬ್ರಿಟಿಯಾಗಿದ್ದರು. ಆದರೆ ಅದು ಮುಖ್ಯ ಆಗಲ್ಲ? ಸತ್ತಾಗ ಕಾರ್ಯವಿಧಾನಗಳು ಎಲ್ಲರಿಗೂ ಒಂದೇ ಆಗಿವೆ” ಎಂದು ಅವರು ಅಶ್ರಫ್ ಒಂದು ಬಾರಿ ಹೇಳಿದ್ದರು. “ನನ್ನ ಸೇವೆಗಳು ಉಚಿತವಾಗಿವೆ. ಇಲ್ಲಿ ಜನರು ನರಳುವುದನ್ನು ನಾನು ನೋಡಿದ್ದೇನೆ. ಜನರಿಗೆ ಎಲ್ಲಿಗೆ ಹೋಗಬೇಕು ಮತ್ತು ಮೃತ ದೇಹಗಳನ್ನು ತೆರವುಗೊಳಿಸಲು ಏನು ಮಾಡಬೇಕು ಎಂದು ತಿಳಿದಿಲ್ಲದ ಸಂದರ್ಭ ನಾನು ಅಂತಹ ಜನರಿಗೆ ನಾನು ಸಹಾಯ ಮಾಡಬೇಕು ಎಂದು ನಾನು ಭಾವಿಸಿದೆ” ಎಂದು ಅವರು ತಮ್ಮ ಸೇವೆ ಶುರುವಾದ ಬಗ್ಗೆ ಹೇಳಿದ್ದರು.

Leave A Reply

Your email address will not be published.