Guinness World Record: ಅಬ್ಬಬ್ಬಾ!!! ಬರೋಬ್ಬರಿ 2.90 ಮೀಟರ್ ಉದ್ದದ ಹೇರ್ ಸ್ಟೈಲ್ ಮಾಡಿದ ಮಹಿಳೆ !
ಮಹಿಳೆಯರಲ್ಲಿ ತಾವು ಚೆನ್ನಾಗಿ ಕಾಣಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಚೆನ್ನಾಗಿ ಕಾಣೋದ್ರಲ್ಲಿ ಮುಖದ ಸೌಂದರ್ಯದ ಜೊತೆಗೆ ಹೇರ್ ಸ್ಟೈಲ್ ನ ಪಾತ್ರ ಕೂಡ ತುಂಬಾನೇ ಇದೆ. ಹೇರ್ ಸ್ಟೈಲ್ ಗಳಲ್ಲಿ ವಿವಿಧ ರೀತಿಯ ಹೇರ್ ಸ್ಟೈಲ್ ಗಳಿವೆ. ಅದು ಎಲ್ಲರಿಗೂ ಗೊತ್ತಿದೆ ಕೂಡ. ಆದರೆ ಬರೋಬ್ಬರಿ 2.90 ಮೀಟರ್‌ಗಳಷ್ಟು ದೊಡ್ಡದಾದ ಹೇರ್ ಸ್ಟೈಲ್ ಅನ್ನು ನೀವೆಲ್ಲೂ ಕಂಡು,ಕೇಳಿರಲಿಕ್ಕಿಲ್ಲ.
ಇಲ್ಲೊಬ್ಬ ಪ್ರಸಿದ್ಧ ಹೇರ್ ಸ್ಟೈಲಿಸ್ಟ್ ದಾನಿ ಹಿಸ್ವಾನಿ ಅವರು ಒಬ್ಬ ಮಹಿಳೆಗೆ ಮಾಡಿದ ಹೇರ್ ಸ್ಟೈಲ್ ಅನ್ನು ನೀವೆಲ್ಲೂ ನೋಡಿರಲು ಅಥವಾ ಮಾಡಿಸಿಕೊಂಡಿರಲು ಸಾಧ್ಯವಿಲ್ಲ. ಯಾಕಂದ್ರೆ ಅಷ್ಟು ದೊಡ್ಡದಾದ ಹೇರ್ ಸ್ಟೈಲ್ ಆಗಿದೆ. ಈ ಕೇಶವಿನ್ಯಾಸದಿಂದ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದಾರೆ. ಈ ವರ್ಷದ ಸೆಪ್ಟೆಂಬರ್ 16 ರಂದು ಯುಎಇಯ ದುಬೈನಲ್ಲಿ 2.90 ಮೀಟರ್ (9 ಅಡಿ 6.5 ಇಂಚುಗಳು) ಕ್ರಿಸ್ಮಸ್ ಮರದ ಆಕಾರದಲ್ಲಿ ಮಹಿಳೆಯ ಕೂದಲನ್ನು ದಾನಿ ಹಿಸ್ವಾನಿ ಅವರು ವಿನ್ಯಾಸಗೊಳಿಸಿದರು. ಈ ವಿನ್ಯಾಸ ಎಲ್ಲರನ್ನು ಅಚ್ಚರಿ ಮತ್ತು ನಿಬ್ಬೆರಗಾಗಿಸಿತ್ತು.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ಮಹಿಳೆ ತಲೆಯ ಮೇಲೆ ಹೆಲ್ಮೆಟ್ ರೀತಿಯಲ್ಲಿ ಧರಿಸಿದ್ದಾರೆ. ಅದರಲ್ಲಿ ಮೂರು ಸಣ್ಣ ಕಂಬಗಳು ನೆಟ್ಟಗೆ ನಿಂತಿರುವ ಹಾಗಿದೆ. ಕ್ರಿಸ್‌ಮಸ್ ಮರವನ್ನು ರಚಿಸಲು ದಾನಿ ಹಿಸ್ವಾನಿ ಅವರು ಕೋಯಿಫ್ಯೂರ್ ಅನ್ನು ರಚಿಸಲು ವಿಗ್ ಗಳು, ಕೂದಲಿನ ವಿಸ್ತರಣೆಗಳನ್ನು ಬಳಸಿದರು ಮತ್ತು ಚೆಂಡುಗಳಂತಹ ಕ್ರಿಸ್‌ಮಸ್ ಅಲಂಕಾರಕ ವಸ್ತುಗಳನ್ನು ಸೇರಿಸಿದ್ದಾರೆ ಎನ್ನಲಾಗಿದೆ. ಇನ್ನೂ ಈ ವೀಡಿಯೋದಲ್ಲಿ ದಾನಿ ಹಿಸ್ವಾನಿ ಅವರ ಅತ್ಯಂತ ದೊಡ್ಡ ಕೇಶವಿನ್ಯಾಸ 2.90 ಮೀಟರ್ (9 ಅಡಿ 6.5 ಇಂಚು) ಎಂದು ಬರೆಯಲಾಗಿದೆ.
ಇನ್ನೂ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ಪ್ರಕಟಣೆಯ ಪ್ರಕಾರ, ಹಿಸ್ವಾನಿ ಕಳೆದ ಏಳು ವರ್ಷಗಳ ಹಿಂದೆ ಫ್ಯಾಷನ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಕೂದಲಿನಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು. ಒಂದು ಬಾರಿ ಹಿಸ್ವಾನಿ ಮಹಿಳೆಯ ಕೂದಲನ್ನು ಬಳಸಿಕೊಂಡು ತಲೆಯ ಮೇಲೆ ಒಂದು ಸಣ್ಣ ಕ್ರಿಸ್‌ಮಸ್ ಮರವನ್ನು ಸೃಷ್ಟಿಸಿದ್ದರು. ಆದರೆ ಇದೀಗ ಮತ್ತೊಂದು ಬಾರಿ ಬಹುದೊಡ್ಡ ಕ್ರಿಸ್‌ಮಸ್ ಮರದ ಆಕಾರದಲ್ಲಿ ಅತ್ಯುನ್ನತ, ಅದ್ಭುತವಾದ ಕೇಶವಿನ್ಯಾಸವನ್ನು ಯಶಸ್ವಿಯಾಗಿ ರಚಿಸುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋಗೆ ಸಾಕಷ್ಟು ಲೈಕ್ಸ್, ಕಾಮೆಂಟ್ ಗಳು ಬಂದಿದ್ದು, ಜನರು ತಮ್ಮ ಅಭಿಪ್ರಾಯಗಳನ್ನು ವಿಭಿನ್ನ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ವ್ಹಾ!! ಎಂದರೆ, ಇನ್ನೂ ಕೆಲವರು ನೈಜ ಕೂದಲಿನಿಂದ ಮಾಡಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ. ಒಟ್ಟಾರೆ ಈ ಹೇರ್ ಸ್ಟೈಲ್ ಒಂದು ಬಾರಿ ಎಲ್ಲರ ಕಣ್ಮನ ಸೆಳೆದಿದ್ದಂತು ನಿಜ.