ವಾಹನ ಸವಾರರೇ ಎಚ್ಚರ | ಈ ನಿಯಮ ನೀವು ಇನ್ನು ಉಲ್ಲಂಘಿಸಿದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುವುದು ಖಂಡಿತ
ಫುಟ್ ಪಾತ್ ಗಳಲ್ಲಿ ತಮ್ಮ ವಾಹನಗಳನ್ನು ಚಲಾಯಿಸುವವರ ಮೇಲೆ ಬೆಂಗಳೂರು ನಗರ ಸಂಚಾರ ಪೊಲೀಸರು ಹೊಸ ಅಸ್ತ್ರ ಪ್ರಯೋಗ ನಡೆಸಿ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಇನ್ಮುಂದೆ ವಾಹನಗಳನ್ನು ಫುಟ್ ಪಾತ್ ಮೇಲೆ ಚಲಾಯಿಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸುವತ್ತ ಪೊಲೀಸ್ ಇಲಾಖೆ ಅಣಿಯಾಗಿದೆ.
ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಹಾಗಾಗಿ, ಹೀಗೆ ರೂಲ್ಸ್ ಬ್ರೇಕ್ ಮಾಡುವವರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಹೊಸ ಮಾಸ್ಟರ್ ಪ್ಲಾನ್ ಮಾಡಲಾಗಿದೆ.
ವಾಹನ ಸವಾರರು ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದರೆ, ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವುದರ ಜೊತೆಗೆ ಅವರ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಖಾಕಿ ಪಡೆ ಮಾಹಿತಿ ನೀಡಿದೆ.
ವಾಹನ ಸವಾರರಿಗೆ ಅದರಲ್ಲೂ ಕೂಡ, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಸಂಚಾರ ದಟ್ಟಣೆಯಿಂದ ಮುಂದೆ ಹೋಗಲು ಫುಟ್ ಪಾತ್ ಗಳಲ್ಲಿ ಅಡ್ಡಾದಿಡ್ಡಿ ಸಂಚಾರ ನಡೆಸಿ ಸ್ಥಳವನ್ನು ಅತಿಕ್ರಮಿಸುವುದು ನಗರದಲ್ಲಿ ಸಾಮಾನ್ಯ ಸಂಗತಿಯಾಗಿದೆ.
ಹೀಗೆ ಬೇಜವಾಬ್ದಾರಿ ಹಾಗೂ ಅಜಾಗರೂಕತೆ ಧೋರಣೆಯಿಂದ ಅಪಾಯಗಳಿಗೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ಅಷ್ಟೆ ಅಲ್ಲದೆ, ಈ ರೀತಿಯ ಚಾಲನೆಯು ಪಾದಚಾರಿಗಳಿಗೆ ಕೂಡ ಅಪಾಯವನ್ನುಂಟುಮಾಡುತ್ತಿದೆ. ಹೀಗಾಗಿ ಫುಟ್ ಪಾತ್ ಗಳಲ್ಲಿ ಸವಾರಿ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ಪೋಲಿಸ್ ಪಡೆ ಮುಂದಾಗಿದ್ದು , ಪರವಾನಗಿಗಳನ್ನು ಅಮಾನತುಗೊಳಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಸಿದ್ಧರಾಗಿದ್ದಾರೆ