ನನ್ನ ಸಮಾಧಿ ಬಳಿ ಕುರಾನ್ ಪಠಿಸಬೇಡಿ, ಸಂಗೀತದ ಜತೆ ಸಾವನ್ನು ಸಂಭ್ರಮಿಸಿ – ಇರಾನ್‌ನಲ್ಲಿ ಕ್ರೇನ್‌ನಲ್ಲಿ ಮೇಲೆತ್ತಿ ನೇಣು ಹಾಕುವ ಮುನ್ನ 23ರ ಯುವಕನ ಕೊನೆಯ ಆಸೆ
ಇರಾನ್‌ನಲ್ಲಿ ಹಿಜಾಬ್ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಮರಣ ದಂಡನೆಗೆ ಗುರಿಯಾದ 23 ವರ್ಷದ ಮಜಿದ್ರೇಜಾ ರಹ್ನಾವಾರ್ಡ್ ನ ಕೊನೆಯ ಆಸೆ ಎಂಥವರ ಕಟು ಮನಸ್ಸನ್ನು ಕೂಡಾ ಕದಡಿಸಿ ಬಿಡುತ್ತದೆ.
ಸಾವಿನ ಕೊನೆಯ ಹಂತದಲ್ಲಿ ಹೇಳಿಕೆ ನೀಡಿದ ಮಜಿದ್ರೇಜಾ, ” ತನ್ನ ಸಾವಿಗೆ ಯಾರೂ ದುಃಖಿಸಬಾರದು. ನನ್ನ ಸಮಾಧಿ ಬಳಿ ಕುರಾನ್ ಪಠಿಸಬಾರದು. ಆದರೆ ನನ್ನ ಸಾವನ್ನು ವಿಜಯವನ್ನಾಗಿ ಸಂಭ್ರಮಿಸಿ ” ಎಂದು ಹೇಳಿದ್ದಾನೆ. ಇರಾನಿನ ಮಶ್ಹದ್ ನಗರದಲ್ಲಿ ಸೋಮವಾರ ಮಜಿದ್ರೇಜಾ ರಹ್ನವರದ್ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಅವರ ಕೊನೆಯ ಆಸೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೊನ್ನೆ ಮೊನ್ನೆ ಡಿಸೆಂಬರ್ 8 ರಂದು ಇರಾನ್‌ನಲ್ಲಿ ಅಂತಾರಾಷ್ಟ್ರೀಯ ಪ್ರತಿಭಟನೆಗಳನ್ನು ಕೂಡಾ ಲೆಕ್ಕಿಸದೆ 23 ವರ್ಷದ ಮೊಹ್ಸೆನ್ ಶೆಕ್ರಿ ಅವರನ್ನು ಗಲ್ಲಿಗೇರಿಸಲಾಯಿತು. ಇರಾನ್‌ನಲ್ಲಿ ಹಿಜಾಬ್ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಿದ ಮೊದಲ ಪ್ರಕರಣ ಇದಾಗಿತ್ತು. ನಾಲ್ಕು ದಿನಗಳ ನಂತರ, ಡಿಸೆಂಬರ್ 12ರಂದು 23 ವರ್ಷದ ಮಾಜಿದ್ರೆಜಾ ರಹ್ನವರದ್ ಅವರನ್ನು ಸಾರ್ವಜನಿಕವಾಗಿ ಕ್ರೇನ್‌ನಲ್ಲಿ ಮೇಲೆತ್ತಿ ನೇಣು ಕುಣಿಕೆಗೆ ಸಿಕ್ಕಿಸಿ ಗಲ್ಲು ಹಾಕಲಾಯಿತು. ಇಬ್ಬರು ಭದ್ರತಾ ಪಡೆಗಳ ಹತ್ಯೆಗೆ ಸಂಬಂಧಿಸಿದಂತೆ ಒಂದು ತಿಂಗಳಿಗಿಂತ ಕಡಿಮೆ ಅವಧಿಯ ಜೈಲುವಾಸದ ಮತ್ತು ವಿಚಾರಣೆಯ ನಂತರ ಮಾಜಿದ್ರೇಜಾ ಅವರನ್ನು ಗಲ್ಲಿಗೇರಿಸಲಾಯಿತು. ಇದೀಗ ಮಾಧ್ಯಮ ಒಂದಕ್ಕೆ ಆತ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಾಜಿದ್ರೇಜಾ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಇಬ್ಬರು ಮುಸುಕುಧಾರಿ ಗಾರ್ಡ್‌ಗಳಿಂದ ಸುತ್ತುವರೆದಿರುವಾಗ ಕ್ಯಾಮೆರಾದೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಇಂಗ್ಲಿಷ್ ಉಪ ಶೀರ್ಷಿಕೆಗಳಲ್ಲಿ ಬರೆಯಲಾಗಿದೆ. ‘ತನ್ನ ಸಾವಿಗೆ ಯಾರೂ ದುಃಖಿಸಬಾರದು. ನನ್ನ ಸಮಾಧಿ ಬಳಿ ಕುರಾನ್ ಪಠಿಸುವುದು ನನಗೆ ಇಷ್ಟವಿಲ್ಲ. ಕೇವಲ ಆಚರಿಸಿ ಮತ್ತು ಸಂಗೀತದೊಂದಿಗೆ ಆಚರಿಸಿ ಎಂದು ಆತ ಸಾವಿಗೆ ಮುಂಚೆ ಹೇಳಿದ್ದಾರೆ. ಈ ವಿಡಿಯೋವನ್ನು ಬೆಲ್ಜಿಯಂ ಸಂಸದೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ದರಿಯಾ ಸಫಾಯಿ ಸೇರಿದಂತೆ ಹಲವಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇರಾನ್‌ನಲ್ಲಿ ಮಹ್ಸಾ ಅಮಿನಿಯ ಕಸ್ಟಡಿಯಲ್ ಸಾವು ಮತ್ತು ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಹತ್ಯೆಯ ಬಗ್ಗೆ ಗಮನ ಸೆಳೆಯಲು ಬೆಲ್ಜಿಯಂ ಸಂಸತ್ತಿನಲ್ಲಿ ತನ್ನ ಕೂದಲನ್ನು ಕತ್ತರಿಸಿಕೊಂಡಿದ್ದರು ಸಂಸದೆ ಇದೇ ದರಿಯಾ ಸಫಾಯಿ.
ಇರಾನ್‌ನಲ್ಲಿ ಮಹ್ಸಾ ಅಮಿನಿಯ ಕಸ್ಟಡಿಯಲ್ ಸಾವಿನ ನಂತರ ಭದ್ರತಾ ಪಡೆಗಳ ಇಬ್ಬರು ಸದಸ್ಯರನ್ನು ಇರಿದು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ್ದಕ್ಕಾಗಿ ಮಜಿದ್ರೇಜಾ ಅವರಿಗೆ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಡಿಸೆಂಬರ್ 12 ರಂದು ಆತನನ್ನು ಗಲ್ಲಿಗೆ ಏರಿಸಲಾಯಿತು.