ಕತ್ತರಿಯಿಂದ ಹಲ್ಲೆ ಮಾಡಿ, ಶಾಲಾ ಬಾಲಕಿಯನ್ನು ಮಹಡಿಯಿಂದ ಎಸೆದು ಬಿಟ್ಟ ಕ್ರೂರಿ ಶಿಕ್ಷಕಿ | ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಟ

ಇತ್ತೀಚೆಗೆ ಶಾಲೆಯಲ್ಲಿ ನಡೆಯುವ ಕೆಲವೊಂದು ಆಘಾತಕಾರಿ ಘಟನೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕೋ ಬೇಡವೋ ಎಂಬ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ ಎಂದರೆ ತಪ್ಪೇನಿಲ್ಲ. ಏಕೆಂದರೆ ಇಲ್ಲೊಂದು ಶಾಲೆಯಲ್ಲಿ ಶಿಕ್ಷಕಿಯೇ ಬಾಲಿಕಿಯೋರ್ವಳನ್ನು ಮೇಲಿಂದ ಕೆಳಕ್ಕೆ ಎಸೆದ ಘಟನೆಯೊಂದು ನಡೆದಿದ್ದು, ವಿದ್ಯಾರ್ಥಿನಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

 

ಈ ಘಟನೆ ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಶಿಕ್ಷಕರೊಬ್ಬರು 5 ನೇ ತರಗತಿ ವಿದ್ಯಾರ್ಥಿನಿಯನ್ನು ಮೊದಲ ಮಹಡಿಯಿಂದ ಎಸೆದಿದ್ದಾರೆ. ವಂದನಾ ಎಂಬ ಮಗು ಆಸ್ಪತ್ರೆಯಲ್ಲಿದ್ದು, ಚಿಂತಾಜನಕ ಸ್ಥಿತಿಯಲ್ಲಿದೆ. ಪ್ರಕರಣದ ಸಂಬಂಧ ಗೀತಾ ದೇಶ್ವಾಲ್ ಎಂಬ ಶಿಕ್ಷಕಿಯನ್ನು ಬಂಧಿಸಲಾಗಿದೆ.

ದೆಹಲಿ ನಗರ ನಿಗಮ್ ಬಾಲಿಕಾ ವಿದ್ಯಾಲಯದಲ್ಲಿ ಬೆಳಗ್ಗೆ ( ನಿನ್ನೆ) 11.15ರ ಸುಮಾರಿಗೆ ಈ ಘಟನೆ ನಡೆದಿದೆ. ಈ 5ನೇ ತರಗತಿಯ ವಿದ್ಯಾರ್ಥಿನಿಯನ್ನು ಮೊದಲ ಮಹಡಿಯ ತರಗತಿಯಿಂದ ಹೊರಗೆ ಎಸೆಯುವುದಕ್ಕೂ ಮುನ್ನ ಈ ಶಿಕ್ಷಕಿ ವಿದ್ಯಾರ್ಥಿನಿ ವಂದನಾಳ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾಳೆ. ತನ್ನ ಸಹೋದ್ಯೋಗಿಯು ಮಗುವನ್ನು ಥಳಿಸದಂತೆ ತಡೆಯಲು ಮತ್ತೊಬ್ಬ ಶಿಕ್ಷಕಿ ರಿಯಾ ಯತ್ನಿಸಿದ್ದಾರೆ ಎನ್ನಲಾಗಿದೆ.

ಬಾಲಕಿ ಮೊದಲ ಮಹಡಿಯಿಂದ ಬಿದ್ದಾಗ, ಅಲ್ಲಿದ ಬೇರೆ ಶಿಕ್ಷಕರು ಪೊಲೀಸರಿಗೆ ಕರೆ ಮಾಡಿದರು. ಆ ನಂತರ ಶಾಲೆಗೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಗುವನ್ನು ಬಾರಾ ಹಿಂದೂ ರಾವ್ ಆಸ್ಪತ್ರೆಗೆ ಕರೆದೊಯ್ದಲಾಗಿದೆ. ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ದೆಹಲಿಯ ಹಿರಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸರು ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಎಂಸಿಡಿ ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಶಿಕ್ಷಕಿ ಇಷ್ಟೊಂದು ಕ್ರೂರವಾಗಿ ವಿದ್ಯಾರ್ಥಿನಿಯ ಜೊತೆ ವರ್ತಿಸೋದಕ್ಕೆ ಕಾರಣವೇನೆಂದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ತನಿಖೆಯಿಂದ ಇನ್ನು ತಿಳಿಯಬೇಕಷ್ಟೇ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.