ನಾಲ್ಕು ಕಾಲಿರುವ ಹೆಣ್ಣುಮಗುವಿಗೆ ಜನ್ಮನೀಡಿದ ಮಹಿಳೆ !

ಸಾಮಾನ್ಯವಾಗಿ ಮನುಷ್ಯರಿಗೆ ಎರಡು ಕಾಲು, ಎರಡು ಕೈಗಳಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಮಗುವೊಂದು ನಾಲ್ಕು ಕಾಲಿನ ಜೊತೆಗೆ ಜನಿಸಿದೆ ಎಂದರೆ ಕೇಳಲು ಆಶ್ಚರ್ಯವೆನಿಸುತ್ತದೆ ಅಲ್ವಾ!! ಆದರೆ ಇದು ನಿಜ. ಹೌದು, ಇಲ್ಲೊಬ್ಬರು ಮಹಿಳೆ ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.

 

ಸಿಕಂದರ್ ಕಂಪೂವಿನ ಆರತಿ ಕುಶ್ವಾಹ ಎಂಬ ಮಹಿಳೆ ಅಲ್ಲಿನ ಕಮಲರಾಜ ಆಸ್ಪತ್ರೆಯಲ್ಲಿ ನಾಲ್ಕು ಕಾಲುಗಳಿರುವ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ಈ ಮಗುವಿನ ತೂಕ 2.3 ಕೆಜಿ ಇದ್ದು, ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾಗೇ ಮಗುವಿಗೆ ನಾಲ್ಕು ಕಾಲುಗಳು ಇರುವುದರಿಂದ ದೈಹಿಕ ವಿಕಲತೆ ಇದೆ. ಬೆಳವಣಿಗೆ ಸಂದರ್ಭದಲ್ಲಿ ಕೆಲವು ಭ್ರೂಣಗಳು ಹೆಚ್ಚುವರಿ ಆಗಿರುತ್ತವೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಗೊಂಡು ದೇಹ ಎರಡು ಸ್ಥಳಗಳಲ್ಲಿ ಬೆಳವಣಿಗೆ ಆಗುತ್ತದೆ. ಈ ಹೆಣ್ಣು ಶಿಶುವಿನ ಸೊಂಟದ ಕೆಳಗಿನ ಭಾಗ ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿ ಆಗಿದ್ದು, ಆ ಕಾಲುಗಳು ನಿಷ್ಕ್ರಿಯವಾಗಿದೆ ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ತಿಳಿಸಿದ್ದಾರೆ.

ಹೆಣ್ಣು ನವಜಾತ ಶಿಶುವಿನ ದೇಹದ ಬೇರೆ ಯಾವುದಾದರೂ ಭಾಗಗಳಲ್ಲಿ ಅಂಗವಿಕಲತೆ ಇದೆಯಾ ಎಂದು ಮಕ್ಕಳ ವೈದ್ಯರು ಇದೀಗ ಪರಿಶೀಲಿಸುತ್ತಿದ್ದಾರೆ. ಇನ್ನೂ ಪರೀಕ್ಷೆ ನಂತರ ಮಗು ಆರೋಗ್ಯವಾಗಿದ್ದರೆ, ಶಸ್ತ್ರಚಿಕಿತ್ಸೆಯ ಮೂಲಕ ಆ ಎರಡು ಕಾಲುಗಳನ್ನು ತೆಗೆಯಬಹುದು. ಆನಂತರ ಮಗು ಎಲ್ಲರಂತೆ ಎರಡು ಕಾಲುಗಳಲ್ಲಿ ನಡೆಯಬಹುದು ಹಾಗೂ ಸಹಜ ಜೀವನ ನಡೆಸಬಹುದು ಎಂದು ಡಾ.ಆರ್.ಕೆ.ಎಸ್.ಧಕಡ್ ಹೇಳಿದರು.

ಇದೀಗ ಹೆಣ್ಣು ಶಿಶುವನ್ನು ಕಮಲರಾಜ ಆಸ್ಪತ್ರೆಯ ಶಿಶು ವೈದ್ಯಕೀಯ ವಿಭಾಗದ ವಿಶೇಷ ನವಜಾತ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಹಾಗೂ ಹೆಣ್ಣು ಶಿಶುವಿನ ಆರೋಗ್ಯ ಸ್ಥಿತಿಯ ಬಗ್ಗೆ ನಿರಂತರವಾಗಿ ಗಮನಿಸಲಾಗುತ್ತಿದೆ. ಸದ್ಯ ಮಗು ಆರೋಗ್ಯವಾಗಿದ್ದು, ವೈದ್ಯರು ಮಗುವಿನ ಕಾಲಿನ ಶಸ್ತ್ರಚಿಕಿತ್ಸೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಂತು ಅಪರೂಪದ ಘಟನೆ ಆಗಿದ್ದು, ಜನಸಾಮಾನ್ಯರಲ್ಲಿ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ.

Leave A Reply

Your email address will not be published.