ವಿಷ್ಣುವನ್ನೇ ವರಿಸಿದ ಮಹಿಳೆ | ಏನು ಸ್ಪೆಷಲ್ ಅಂತೀರಾ? ಇಲ್ಲಿದೆ ಮ್ಯಾಟರ್
ಮದುವೆ ಎಂದರೆ ಕೆಲವರ ಪಾಲಿಗೆ ನವೀನ ಅನುಭವ. ನೂರಾರು ಕನಸುಗಳ ಸಂಗಮ. ಅದೇ ಕೆಲವರ ಪಾಲಿಗೆ ಮದುವೆ ಎಂಬ ವಿಚಾರ ಕೇಳಿದರೆ ಜಿಗುಪ್ಸೆ ಹೊಂದಿರುವವರು ಕೂಡ ನಮ್ಮ ನಡುವೆ ಇದ್ದಾರೆ. ಮದುವೆಯ ಬಳಿಕ ಹೊಸ ಜವಾಬ್ದಾರಿಯ ಜೊತೆಗೆ ಹಣಕಾಸಿನ ತಾಪತ್ರಯ ಅಲ್ಲದೆ, ಸಂಸಾರದ ಜಂಜಾಟಗಳು ಸಹಜ. ಮದುವೆಯಾದ ಮೇಲೆ ಸತಿ ಪತಿಗಳ ನಡುವೆ ಸಣ್ಣ ಮುನಿಸು, ಮುಂಗೋಪ ಕೂಡ ಸಾಮಾನ್ಯ. ಆದರೆ ರಾಜಸ್ಥಾನದ ಮಹಿಳೆಯೊಬ್ಬರಿಗೆ ಮದುವೆಯ ಜಂಜಾಟದ ಜೀವನವೇ ಬೇಡವೆನಿಸಿ ತಾನು ಇಷ್ಟಪಟ್ಟ ಭಗವಂತನನ್ನೇ ಮದುವೆಯಾಗಿರುವ ವಿಶೇಷ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮದುವೆ ಎಂಬ ಸುಂದರ ಬೆಸುಗೆಗೆ ಮಹತ್ವ ದೊರೆಯಲು ಸತಿ ಪತಿಗಳ ನಡುವೆ ಪ್ರೀತಿ, ಬಾಂಧವ್ಯ ಮುಖ್ಯವಾಗಿ ಹೊಂದಾಣಿಕೆ ಇದ್ದಾಗ ಮಾತ್ರ ದಾಂಪತ್ಯವು ಹಾಲು ಜೇನಿನಂತೆ ಸರಾಗವಾಗಿ ಸಾಗಲೂ ಸಾಧ್ಯ. ಮದುವೆಯಾಗುವ ಪ್ರತಿ ಜೋಡಿಯು ಕೂಡ ತನ್ನದೆ ಆದ ನೂರಾರು ಕನಸು ಹೊತ್ತು ಹಸೆಮಣೆ ಏರುತ್ತಾ ಶುಭಗಳಿಗೆಯ ಪ್ರತಿ ಕ್ಷಣಗಳನ್ನು ಅನುಭವಿಸುತ್ತಾ ನವ ಜೀವನಕ್ಕೆ ಮುನ್ನುಡಿ ಬರೆಯುವುದು ಸಹಜ. ಆದರೆ, ಇಲ್ಲೊಬ್ಬ ಮಹಿಳೆ ಸಾಕ್ಷಾತ್ ಪರಬ್ರಹ್ಮನನ್ನೆ ವರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂಬ ಮಾತಿದೆ ಆದರೆ ಇಲ್ಲೊಬ್ಬ ವಧು, ಸಕಲ ಲೋಕಗಳ ಪಾಲಕ ವಿಷ್ಣು ಪರಮಾತ್ಮನನ್ನೇ ವರಿಸಿಕೊಂಡು ಸುದ್ದಿಯಾಗಿದ್ದಾಳೆ. ಹೌದು, ರಾಜಸ್ಥಾನದ ಗೋವಿಂದಗಢ ಸಮೀಪದ ಪುಟ್ಟ ಗ್ರಾಮ ನರಸಿಂಘಪುರದ ನಿವಾಸಿ ಪೂಜಾ ಸಿಂಗ್ (30) ದೇವರನ್ನು ವರಿಸಿಕೊಂಡು ಎಲ್ಲರನ್ನು ಬೆರಗುಗೊಳಿಸಿದ್ದಾರೆ. ತನ್ನ ಬಾಲ್ಯದ ದಿನದಿಂದಲೂ ಕೂಡ ಪೂಜಾಗೆ ದೇವರೆಂದರೆ ಅಗಾಧ ಭಕ್ತಿ, ಶ್ರದ್ಧೆ ಎನ್ನಲಾಗಿದೆ. ಸಕಲ ಚರಾಚರವೆಲ್ಲ ಭಗವಂತನ ಸೃಷ್ಟಿ ಎಂದು ಪ್ರತಿಪಾದಿಸುತ್ತ ”ಆ ಶಕ್ತಿಯ ಮುಂದೆ ಉಳಿದದ್ದೆಲ್ಲವೂ ಶೂನ್ಯ,” ಎಂಬುದನ್ನು ಬಲವಾಗಿ ನಂಬಿದ್ದಳು ಎನ್ನಲಾಗಿದೆ.
ಮನೆಯವರೆಲ್ಲ ಮಗಳ ವರ್ತನೆ ಕಂಡು ನಿರ್ಲಕ್ಷ್ಯ ತೋರುತ್ತಿದ್ದರು ಎನ್ನಲಾಗಿದ್ದು, ” ಹುಚ್ಚು ಹುಡುಗಿ, ಇಲ್ಲದ್ದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಾಯಿಗೆ ಬಂದದ್ದನ್ನು ಮಾತಾಡುತ್ತ ಇದ್ದು, ಮದುವೆ ಆದ ಬಳಿಕ ಸರಿ ಹೋಗುತ್ತಾಳೆ ” ಎಂಬ ಆಶಾವಾದ ದಿಂದ ಮನೆಯವರು ಸುಮ್ಮನಾಗಿದ್ದರು. ರಾಜ್ಯಶಾಸ್ತ್ರದಲ್ಲಿ ಸ್ನಾಕೋತ್ತರ ಪದವಿ ಅಧ್ಯಯನ ಮಾಡಿರುವ ಪೂಜಾ ಸಿಂಗ್ ಮೂವತ್ತು ವರ್ಷ ತುಂಬುತ್ತಿದ್ದಂತೆ ಊರಿನವರೆಲ್ಲ ಮದುವೆಯ ಪ್ರಸ್ತಾಪ ಆರಂಭಿಸಿದ್ದು, ”ನಿಮ್ಮ ಹುಡುಗಿ ಸುರ ಸುಂದರಿ ಯಾಗಿದ್ದು, ವಯಸ್ಸು ಕೂಡ ತುಂಬುತ್ತಿದೆ. ಹಾಗಾಗಿ, ಆಕೆಗೆ ತಕ್ಕ ಒಳ್ಳೆಯ ವರ ಸಿಗುವುದು ಕಷ್ಟವಲ್ಲ, ಬೇಗ ಮದುವೆ ಮಾಡಿ,’ ಎಂಬ ಸಲಹೆಗಳನ್ನು ನೀಡಿದ್ದಾರೆ.
ಇದೆ ರೀತಿ ಕೆಲವು ಒಳ್ಳೆಯ ಸಂಬಂಧ ಕೂಡ ಬಂದಿತ್ತು.ಆದರೆ, ಹುಡುಗಿಯ ವರಸೆ ಕಂಡು ಮನೆಯವರೆಲ್ಲ ಸುಸ್ತಾಗಿ ಬಿಟ್ಟಿದ್ದರು. ಆಕೆಯದ್ದು ಒಂದೇ ವಾದ, ”ದೇವರನ್ನು ಬಿಟ್ಟು ನನಗೆ ಯಾರೂ ಬೇಡ,” ಎಂದು ಹಟಹಿಡಿದು ಕುಳಿತಿದ್ದ ಪೂಜಾಳ ಮನವೊಲಿಸಲು ಮನೆಯವರು ಹರಸಾಹಸ ಪಡಬೇಕಾಯಿತು. ”ಯಾಕಮ್ಮ ಹೀಗೆ ಹಟ ಮಾಡ್ತೀಯಾ? ದೇವರೇನು ನಿನ್ನ ಜೊತೆ ಸಂವಾದ ನಡೆಸಲು ಸಾಧ್ಯವೇ?? ಇಲ್ಲವೆ ಪ್ರೀತಿ ಮಾಡಲು ಹೇಗೆ ಸಾಧ್ಯ? ಜೀವನ ಬೇರೆ, ಭಕ್ತಿ ಬೇರೆ ಅರ್ಥ ಮಾಡಿಕೋ’ ಎಂದು ಹಿರಿಯರು ಬುದ್ಧಿವಾದ ಹೇಳಿದ್ದಾರೆ.
ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಪೂಜಾ ”ಅದೆಲ್ಲ ನಿಮ್ಮ ಕರ್ಮ. ನನ್ನ ಪ್ರಕಾರ ಮಾತಾಡುವುದೇ ವ್ಯರ್ಥ. ನೀವೆಲ್ಲ ಸಂಸಾರ ಮಾಡುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ದಿನಾ ಕಿತ್ತಾಟದ ಜೊತೆಗೆ ಪ್ರತಿ ಬೇಡದ ವಿಚಾರಕ್ಕೆ ಪರದಾಟ. ಈ ರೀತಿಯ ಬದುಕು ಯಾರಿಗೆ ಬೇಕು? ಜಗಳ, ಗಲಾಟೆ ಇದ್ಯಾವುದನ್ನು ಮಾಡದ ಭಗವಂತನೇ ನನಗೆ ಸಾಕು,” ಎಂದು ಮನೆಯಿಂದ ಆಚೆಗೆ ಬಂದಿದ್ದಳು ಎನ್ನಲಾಗಿದೆ.
ಭಕ್ತಿ ಹಾಗೂ ಪ್ರೀತಿಯಲ್ಲಿ ಈಗಲೂ ಜನರ ಮನಸ್ಸಿನಲ್ಲಿ ಉಳಿದಿರುವ ಮೀರಾ ಭಾಯಿಯ ತವರಾಗಿರುವ ರಾಜಸ್ತಾನ. ಪೂಜಾ ಸಿಂಗ್ ಆಧುನಿಕ ಮೀರಾ ಎಂದು ಜನರು ಮಾತನಾಡುತ್ತಿದ್ದಾರೆ. ಮರುದಿನವೇ ಮದುವೆ ಸಾಮಗ್ರಿಗಳೊಂದಿಗೆ ಗ್ರಾಮದ ವಿಷ್ಣು ಮಂದಿರದಲ್ಲಿ ಹಾಜರಾಗಿ, ಒಡ್ಡೋಲಗದ ಆಡಂಬರವಿಲ್ಲದೇ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾಳೆ.
ಇದೀಗ, ಆಕೆ ಭಕ್ತ ಪರಾಧೀನ ವಿಷ್ಣು ಪರಮಾತ್ಮನನ್ನು ಮದುವೆಯಾಗಿದ್ದಾಳೆ. ‘ಇದು ಮಾನಸಿಕ ಸಮಸ್ಯೆಯಾಗಿದ್ದು, ಅತಿ ಭಾವುಕ ಭಕ್ತಿಯ ಪರಾಕಾಷ್ಠತೆಯ ಪ್ರಭಾವ ಎಂದು ಜೊತೆಗೆ ನಿಧಾನವಾಗಿ ತಿಳಿವಳಿಕೆ ತುಂಬಿ ವಾಸ್ತವಕ್ಕೆ ಕರೆತರಬೇಕಾಗಿದೆ’ ಎಂದು ಮಾನಸಿಕ ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಬೆಳೆದ ಮಗಳ ಈ ನಡೆ ಕಂಡು ಪೋಷಕರು ದಿಗ್ಬ್ರಂತರಾಗಿದ್ದಾರೆ.