ಎರಡು ವರ್ಷದ ಮಗುವನ್ನು ಜೀವಂತ ನುಂಗಿ ಹಾಕಿದ ಹಿಪಪಾಟಮಾಸ್ | ಮುಂದೇನಾಯ್ತು?
ಪ್ರಾಣಿಗಳು ಮೂಕ ಜೀವಿ ಆದ್ದರಿಂದ ಮನುಷ್ಯನ ವಿದ್ಯಮಾನಗಳ ಅರಿವು ಅವುಗಳಿಗೆ ಸಹಜವಾಗಿ ಇರುವುದಿಲ್ಲ. ಮತ್ತು ಪ್ರಾಣಿಗಳ ಬದುಕಿಗೂ, ಮನುಷ್ಯನ ಬದುಕಿಗೂ ಎಷ್ಟೋ ವ್ಯತ್ಯಾಸಗಳು ಇವೆ. ಇನ್ನು ದೊಡ್ಡ ದೊಡ್ಡ ಪ್ರಾಣಿಗಳು ಆಹಾರಕ್ಕಾಗಿ ಸಿಕ್ಕ ಸಿಕ್ಕ ಪ್ರಾಣಿಗಳನ್ನು, ಮನುಷ್ಯರನ್ನು ನುಂಗಿರುವ ಎಷ್ಟೋ ಘಟನೆಗಳು ನೋಡಿದ್ದೇವೆ, ಕೇಳಿದ್ದೇವೆ. ಹಾಗೆಯೇ ಇಲ್ಲೊಂದು ಹಿಪಪಾಟಮಾಸ್ ಮಗುವಿನ ಮೇಲೆ ಎರಗಿದೆ. ಹೌದು ಎರಡು ವರ್ಷದ ಮಗು ಹಿಪಪಾಟಮಾಸ್ ದಾಳಿಯಿಂದ ಹೇಗೋ ಬದುಕುಳಿದಿದೆ.
ಆಫ್ರಿಕಾದ ಉಗಾಂಡಾದಲ್ಲಿ ಎರಡು ವರ್ಷದ ಮಗುವನ್ನು ಹಿಪಪಾಟಮಸ್ ಜೀವಸಹಿತ ನುಂಗಿಹಾಕಿದೆ. ಆದರೆ ಬಳಿಕ, ಒಬ್ಬ ವ್ಯಕ್ತಿಯು ಕಲ್ಲು ಎಸೆದ ನಂತರ, ಹಿಪ್ಪೋ ಸ್ವಲ್ಪ ಸಮಯದ ನಂತರ ಮಗುವನ್ನು ಉಗುಲಿದೆ, ಇದರಿಂದಾಗಿ ಮಗು ಬದುಕುಳಿದಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಿಪಪಾಟಮಾಸ್ ನಿಂದಾಗಿ ಆಫ್ರಿಕಾದಲ್ಲಿ ಪ್ರತಿ ವರ್ಷ ಕನಿಷ್ಠ 500 ಜನರು ಸಾವನ್ನಪ್ಪುತ್ತಾರೆ ಎಂಬ ಮಾಹಿತಿ ಇದೆ . ಅವುಗಳ ಹಲ್ಲುಗಳು ಒಂದು ಅಡಿಗಿಂತ ಹೆಚ್ಚು ಉದ್ದವಾಗಿರುತ್ತವೆ ಮತ್ತು ಮಾರಣಾಂತಿಕ ದಾಳಿಯ ಸಂಭವನೀಯತೆಯು ಶೇ.29 ರಿಂದ ಶೇ.87 ರಷ್ಟು ಇರುತ್ತದೆ ಎಂದು ಮಾಹಿತಿಯಲ್ಲಿ ತಿಳಿದು ಬಂದಿದೆ.
ಈ ಘಟನೆಯು ಕಟ್ವೆ ಕಬಟೊರೊ ಪಟ್ಟಣದಲ್ಲಿ ನಡೆದಿದ್ದು, ಭಾನುವಾರ ಮನೆ ಸಮೀಪದ ಕೆರೆಯ ದಡದಲ್ಲಿ ಮಗು ಆಟವಾಡುತ್ತಿತ್ತು. ಆಗ ಹಸಿದ ಹಿಪಪಾಟಮಸ್ ಮಗುವನ್ನು ತನ್ನ ಆಹಾರವಾಗಿಸಲು ಯತ್ನಿಸಿದೆ.
ಹಿಪ್ಪೋ ಮಗುವನ್ನು ಸಂಪೂರ್ಣವಾಗಿ ನುಂಗುವ ಮೊದಲು, ಅಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಿತಿಪ್ರಜ್ಞೆಯನ್ನು ಮರೆದಿದ್ದಾರೆ ಮತ್ತು ಅದರ ಮೇಲೆ ಕಲ್ಲುಗಳನ್ನು ಎಸೆಯಲು ಆರಂಭಿಸಿದ್ದಾರೆ. ಇದರಿಂದಾಗಿ ಹಿಪ್ಪೋ ವಾಂತಿ ಮಾಡಿಕೊಂಡಿದೆ ಮತ್ತು ಮಗು ಅದರ ಬಾಯಿಯಿಂದ ಹೊರಬಂದಿದೆ.
ಉಗಾಂಡಾ ಪೊಲೀಸ್ ಮಾಹಿತಿ ಪ್ರಕಾರ ಡ್ವಾರ್ಡ್ ಸರೋವರದ ದಡದಲ್ಲಿ ಹಿಪ್ಪೋ ಮಗುವನ್ನು ನುಂಗಿದ ಘಟನೆ ಇದೇ ಮೊದಲು ಎಂದು ಹೇಳಿದ್ದಾರೆ. ಕ್ರಿಸ್ಪಾಸ್ ಬಾಗೊಂಜಾ ಎಂಬ ವ್ಯಕ್ತಿಯ ಶೌರ್ಯದಿಂದ ಮಗುವಿನ ಪ್ರಾಣ ಉಳಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ವರ್ಷದ ಪಾಲ್‌ನ ಜೀವವನ್ನು ಹಿಪಪಾಟಮಸ್ ಉಳಿಸಿರಬಹುದು, ಆದರೆ ಅದರ ಹಿಡಿತದಿಂದಾಗಿ ಪಾಲ್ ತೀವ್ರವಾಗಿ ಗಾಯಗೊಂಡಿದ್ದಾನೆ. ಮಗುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಬೀಸ್ ಲಸಿಕೆಯನ್ನು ನೀಡಿದ ನಂತರ ಆತನನ್ನು ದೊಡ್ಡ ನಗರದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಗು ಚೇತರಿಸಿಕೊಂಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಗುವಿನ ಪ್ರಾಣ ಉಳಿದಿದ್ದು ಮಗುವಿಗೆ ಹೆಚ್ಚಿನ ಚಿಕೆತ್ಸೆ ನೀಡಲಾಗುತ್ತಿದೆ.