ತುಮಕೂರಿನಲ್ಲಿ ಮತ್ತೊಂದು ಭೀಕರ ಅಪಘಾತ: ಸೇತುವೆಗೆ ಡಿಕ್ಕಿಯಾಗಿ ಕೆಳಗೆ ಬಿದ್ದು ಸಂಪೂರ್ಣ ಮುದ್ದೆಯಾದ ಕಾರು, ಮೂವರ ದುರ್ಮರಣ!

Share the Article

ತುಮಕೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಅತೀ ವೇಗವಾಗಿ ಬಂದ ಕಾರೊಂದು ಚಾಲನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದು ಘಟನೆಯಲ್ಲಿ ಮೂವರು ಮೃತರಾಗಿದ್ದಾರೆ.

ತುಮಕೂರಿನ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ಜಜ್ಜಿ ಹೋಗಿದ್ದು ಅದು ಯಾವ ಕಂಪನಿಯ ಕಾರು ಎಂಬುದು ಕೂಡ ಪತ್ತೆ ಮಾಡಲು ಅಸಾಧ್ಯವಾದಷ್ಟು ಭೀಕರವಾಗಿ ಅವಘಡ ಸಂಭವಿಸಿದೆ.

ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸಿಂಧನೂರಿನಿಂದ ಬೆಂಗಳೂರಿಗೆ ಬರುವ ವೇಳೆ ಕಳ್ಳಂಬೆಳ್ಳ ಬಳಿ ದೊಡ್ಡ ಆಲದಮರದ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರ ಆಸ್ಪತ್ರೆಗೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಾರಿನಲ್ಲಿ ಚಾಲಕ ಸೇರಿ ಐದು ಮಂದಿ ಪ್ರಯಾಣಿಸುತ್ತಿದ್ದು ಮೂವರು ಮೃತಪಟ್ಟಿದ್ದಾರೆ. ಮತ್ತಿಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳ್ಳಂಬೆಳ್ಳ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿ ಕ್ರಾಸ್ ಬಳಿ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ನಡೆದ ಮತ್ತೊಂದು ಅವಘಡ ಇದಾಗಿದೆ.

Leave A Reply