Guinness World Record : ಒಂದೇ ಹೆರಿಗೆಯಲ್ಲಿ 9 ಮಕ್ಕಳಿಗೆ ಸುರಕ್ಷಿತ ಜನ್ಮ ನೀಡಿದ ಮಹಾತಾಯಿ
ಗರ್ಭಿಣಿಯರು ಒಂದು ಬಾರಿಗೆ ಒಂದು ಅಥವಾ ಎರಡು(ಅವಳಿ) ಮಕ್ಕಳಿಗೆ ಜನ್ಮ ನೀಡುವುದು ಕೇಳಿದ್ದೇವೆ. ಆದರೆ ಹಲಿಮಾ ಸಿಸ್ಸೆ (27) ಎಂಬ ಮಹಿಳೆ ಮೇ ತಿಂಗಳಲ್ಲಿ ಮೊರೊಕನ್ ಆಸ್ಪತ್ರೆಯಲ್ಲಿ 9 ಮಕ್ಕಳಿಗೆ ಒಂದೇ ಬಾರಿಗೆ ಸುರಕ್ಷಿತ ಜನ್ಮ ನೀಡಿದ್ದು, ಈ ಶಿಶುಗಳು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ.
ಈ ಒಂಬತ್ತು ಮಕ್ಕಳು 30 ವಾರಗಳಲ್ಲಿ ಸಿಸೇರಿಯನ್ ಮೂಲಕ ಜನಿಸಿದ್ದು, ಇದರಲ್ಲಿ ಐದು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳಾಗಿದ್ದರು. ಈ ಮಕ್ಕಳು ಜನನದ ನಂತರ 500g ಮತ್ತು 1kg (1.1lb ಮತ್ತು 2.2lb) ನಡುವೆ ತೂಕವನ್ನು ಹೊಂದಿದ್ದರು ಎನ್ನಲಾಗಿದೆ. ಹಾಗೇ ಈ ಶಿಶುಗಳು ಅವಧಿ ಪೂರ್ವವಾಗಿ ಜನಿಸಿದ ಕಾರಣ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇತ್ತು, ಹಾಗಾಗಿ ಮಕ್ಕಳನ್ನು ಹಲವು ತಿಂಗಳುಗಳ ಕಾಲ ಆಸ್ಪತ್ರೆಯ ಮೇಲುಸ್ತುವಾರಿಯಲ್ಲಿ ನೋಡಿಕೊಳ್ಳಲಾಯಿತು ಎನ್ನಲಾಗಿದೆ.
ಇನ್ನೂ ಜನಿಸಿದ ಒಂಬತ್ತು ಮಕ್ಕಳ ವ್ಯಕ್ತಿತ್ವ ಕೂಡ ವಿಭಿನ್ನವಾಗಿದೆ ಎಂದು ಮಕ್ಕಳ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ತಂದೆ ಅಬ್ದೆಲ್ಕಾದರ್ ಅರ್ಬಿ ಅವರು ಹೇಳಿದರು. ಕೆಲವರು ಶಾಂತವಾಗಿದ್ದರೆ, ಇನ್ನು ಕೆಲವರು ಹೆಚ್ಚು ಗದ್ದಲ ಮಾಡುತ್ತಾರೆ ಮತ್ತು ಅಳುತ್ತಾರೆ. ಹಾಗೇ ಕೆಲವು ಮಕ್ಕಳು ಯಾವಾಗಲೂ ಎತ್ತಿಕೊಳ್ಳಲು ಬಯಸುತ್ತಾರೆ. ಹೀಗೇ ಈ 9 ಮಕ್ಕಳ ಗುಣ ತುಂಬಾ ವಿಭಿನ್ನವಾಗಿದೆ. ಹಾಗೇ ಇದು ಸಾಮಾನ್ಯವೂ ಹೌದು, ಎಂದು ಅವರು ಹೇಳಿದ್ದಾರೆ.
ಹಲೀಮಾಳಿಗೆ ಮಕ್ಕಳಾದ ಸಮಯದಲ್ಲಿ ಆಕೆಯ ಪತಿ ಕಾದರ್ ಅರ್ಬಿ ಲಾಕ್‌ಡೌನ್‌ನಿಂದಾಗಿ ಮನೆಯಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆಗ ಆಕೆಯ ಸಹೋದರಿ ಆಯೆಷಾ ತುಂಬಾ ಬೆಂಬಲ ನೀಡಿದ್ದರು. 2017ರಲ್ಲಿ ವಿವಾಹವಾದ ಹಲಿಮಾ ಸಿಸ್ಸೆಗೆ ಈಗಾಗಲೇ ಎರಡೂವರೆ ವರ್ಷದ ಮಗಳು ಇದ್ದಾಳೆ. ಇವರ ಎಲ್ಲಾ ಮಕ್ಕಳ ತೂಕ 500 ಗ್ರಾಂನಿಂದ 1 ಕಿಲೋಗ್ರಾಂ ವರೆಗೆ ಇದೆ. ಹಾಗೇ ನರ್ಸ್‌ಗಳು ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.
ಹಾಗೇ ಈ 9 ಮಕ್ಕಳಿಗೆ ಪ್ರತಿದಿನ 100 ಡೈಪರ್ ಮತ್ತು ಆರು ಲೀಟರ್ ಹಾಲು ಬೇಕಾಗುತ್ತದೆಯಂತೆ. ಇನ್ನೂ, ಈ 9 ಮಕ್ಕಳನ್ನು ಹೇಗೆ ಬೆಳೆಸುವುದು ಎಂದು ಹಲೀಮಾ ಅವರಿಗೆ ಚಿಂತೆಯಾಗಿತ್ತು. ಮಕ್ಕಳ ಆರೈಕೆಯ ವೆಚ್ಚವನ್ನು ಮಾಲಿ ಸರ್ಕಾರ ಭರಿಸಿತ್ತು. ಇಲ್ಲಿಯವರೆಗೆ ಭಾರತೀಯ ಕರೆನ್ಸಿಯ ಪ್ರಕಾರ 10 ಕೋಟಿ ರೂಪಾಯಿಗಳವರೆಗೆ ಇವರಿಗೆ ಖರ್ಚು ಮಾಡಲಾಗಿದೆ.
ಇನ್ನೂ, ಹಲೀಮಾ ಸಿಸ್ಸೆಗೆ ತಾನು ಒಂಬತ್ತು ಮಕ್ಕಳ ತಾಯಿಯಾಗಲಿರುವ ವಿಷಯ ಕೊನೆಯ ಕ್ಷಣದವರೆಗೂ ತಿಳಿದಿರಲಿಲ್ಲ. ಈ ಬಗ್ಗೆ ಕೆಲವೇ ನಿಮಿಷಗಳ ಹಿಂದೆ ಅವರಿಗೆ ತಿಳಿಸಲಾಯಿತು. ಹಲೀಮಾ ಮೇ 5 ರಂದು 9 ಮಕ್ಕಳಿಗೆ ಒಂದೇ ಬಾರಿಗೆ ಜನ್ಮ ನೀಡುವ ಮೂಲಕ ಹಳೆಯ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಬರೆದರು. ಈ ಮೊದಲು ನಾಡಿಯಾ ಸುಲ್ತಾನ್ ಎಂಬಾಕೆ 2009 ರಲ್ಲಿ 8 ಮಕ್ಕಳಿಗೆ ಜನ್ಮನೀಡುವ ಮೂಲಕ ದಾಖಲೆ ಸೃಷ್ಟಿಸಿದ್ದರು.