ಚಂದನವನದ ನಟಿ ಅಭಿನಯಗೆ ಎರಡು ವರ್ಷ ಜೈಲು ಶಿಕ್ಷೆ !
‘ಅನುಭವ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಬಂದ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ನೀಡಿ ಆದೇಶವನ್ನು ಹೊರಡಿಸಿದೆ. ಹೈಕೋರ್ಟ್ ಹೈಕೋರ್ಟ್ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ಏಕಸದಸ್ಯ ಪೀಠ ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಆರೋಪದಲ್ಲಿ ಈ ಆದೇಶವನ್ನು ಹೊರಡಿಸಿದೆ.
2002 ರಲ್ಲಿ ಅಣ್ಣನ ಹೆಂಡತಿಯಾದ ಲಕ್ಷ್ಮೀದೇವಿ ಅಭಿನಯ ಅವರ ಕುಟುಂಬದ ವಿರುದ್ಧ ದೂರು ದಾಖಲು ಮಾಡಿದ್ದರು. 1998 ರಲ್ಲಿ ನಟಿ ಅಭಿನಯ ಅವರ ಸೋದರ ಶ್ರೀನಿವಾಸ ಅವರನ್ನು ಲಕ್ಷ್ಮೀದೇವಿ ವಿವಾಹವಾಗಿದ್ದರು. ಈ ಸಮಯದಲ್ಲಿ 250ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ನಂತರ ಮತ್ತೆ ವರದಕ್ಷಿಣೆ ಬೇಡಿಕೆ ಬಂತು. ಅದನ್ನು ಪಡೆದ ನಂತರವೂ ಕಿರುಕುಳ ನೀಡಲಾಗಿತ್ತು. ಇಷ್ಟೊಂದು ವರದಕ್ಷಿಣೆ ನೀಡಿದರೂ ಲಕ್ಷ್ಮೀದೇವಿಯವರನ್ನು ಅವರ ತಾಯಿ ಮನೆಯಲ್ಲೇ ಬಿಡಲಾಗಿತ್ತು. ಹೆರಿಗೆಗೆಂದು ತವರು ಮನೆಗೆ ಹೋಗಿ ನಂತರ ಗಂಡನ ಮನೆಗೆ ಬಂದ ಲಕ್ಷ್ಮೀದೇವಿ ಹಾಗೂ ಅವರ ಮನೆಯವರನ್ನು ಅವಮಾನ ಮಾಡಲಾಗಿತ್ತು. ಈ ಸಂಬಂಧ ಅಭಿನಯ ಕುಟುಂಬದ ವಿರುದ್ಧ 2002ರಲ್ಲಿ ಚಂದ್ರಾಲೇಔಟ್ ಠಾಣೆಗೆ ದೂರನ್ನು ನೀಡಲಾಗಿತ್ತು.
ಚಂದ್ರಾಲೇಔಟ್ ಪೊಲೀಸರು ಸಲ್ಲಿಸಿದ್ದ ಚಾರ್ಜ್ಶೀಟ್ ಆಧರಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್ ಎಲ್ಲಾ ಐವರು ಆರೋಪಿಗಳಿಗೂ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.
ಎ1- ಶ್ರೀನಿವಾಸ್ ಹಾಗೂ ಎ-2 ರಾಮಕೃಷ್ಣ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಳಿದ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ನಟಿ ಅಭಿನಯ ಅವರ ತಾಯಿ ಎ-3 ಜಯಮ್ಮಗೆ 5 ವರ್ಷ ಕಾರಾಗೃಹ ಶಿಕ್ಷೆ, ಎ-4 ಚೆಲುವರಾಜ್, ಎ-5 ಅಭಿನಯಾಗೆ 2 ವರ್ಷ ಜೈಲು ಹಾಗೂ ದಂಡ ವಿಧಿಸಲಾಗಿದೆ.